ಡಿಎಂಕೆ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವಿರೋಧ ಪಕ್ಷಗಳ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೋಮವಾರ ತಳ್ಳಿ ಹಾಕಿದ್ದಾರೆ. ಆದರೆ, ಭಾನುವಾರ ಚೆನ್ನೈನಲ್ಲಿ ದಿವಂಗತ ಡಿಎಂಕೆ ನಾಯಕ ಎಂ ಕರುಣಾನಿಧಿ ಅವರ ಜನ್ಮದಿನದ ಶತಮಾನೋತ್ಸವದ ನೆನಪಿಗಾಗಿ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸ್ಟಾಲಿನ್ ಶ್ಲಾಘಿಸಿದ್ದಾರೆ.
“ರಾಜನಾಥ್ ಸಿಂಗ್ ಅವರು ಕಲೈನರ್ ಸ್ಮಾರಕಕ್ಕೆ ಭೇಟಿ ನೀಡಬೇಕೆಂದು ನಾವು ಒತ್ತಾಯಿಸಿರಲಿಲ್ಲ. ಆದರೆ, ಅವರಾಗಿಯೇ ಬಂದಿದ್ದಾರೆ. ಅವರು ಸ್ಮಾರಕವನ್ನು ಸಂಪೂರ್ಣವಾಗಿ ನೋಡಿ, ಈ ರೀತಿ ಯಾವುದೇ ಸ್ಮಾರಕಗಳಿಲ್ಲ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ” ಎಂದು ಸ್ಟಾಲಿನ್ ಹೇಳಿದ್ದಾರೆ.
“ಕಲೈನರ್ ಅವರಿಗೆ ಗೌರವ ಸೂಚಕವಾಗಿ ಎಲ್ಲರೂ ಎದ್ದು ನಿಲ್ಲುವಂತೆ ರಾಜನಾಥ್ ಸಿಂಗ್ ಹೇಳಿದಾಗ ನಾವೆಲ್ಲರೂ ಆಶ್ಚರ್ಯಗೊಂಡೆವು. ಸಿಂಗ್ ಅವರ ಈ ನಡೆ ಬಹಳ ಇಷ್ಟವಾಯಿತು. ನಮ್ಮ ಮೈತ್ರಿ ಪಕ್ಷಗಳ ನಾಯಕರು ಕೂಡ ಮಾತನಾಡದ ರೀತಿಯಲ್ಲಿ ಸಿಂಗ್ ಕರುಣಾನಿಧಿಯವರ ಬಗ್ಗೆ ಮಾತನಾಡಿದ್ದಾರೆ” ಎಂದು ಸ್ಟಾಲಿನ್ ಹೊಗಳಿದ್ದಾರೆ.
ಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವಿಪಕ್ಷಗಳ ಹೇಳಿಕೆಯನ್ನು ಖಂಡಿಸಿದ ಸ್ಟಾಲಿನ್, “ನಾವು ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಿದ ಮಾತ್ರಕ್ಕೆ ಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದಲ್ಲ. ವಿಪಕ್ಷಗಳು ತಪ್ಪು ಮಾಹಿತಿ ಹರಡುತ್ತಿವೆ. ನಾವು ಬಿಜೆಪಿಯೊಂದಿಗೆ ಯಾವುದೇ ರಹಸ್ಯ ಮಾತುಕತೆ ನಡೆಸಿಲ್ಲ. ಮೈತ್ರಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ ಎಂದಿದ್ದಾರೆ.
ಡಿಎಂಕೆ ಕುರಿತು ಇಂದಿರಾ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಂಡ ಸ್ಟಾಲಿನ್, “ಕರುಣಾನಿಧಿ ಅವರು ಎಂದಾದರೂ ಪಕ್ಷವನ್ನು ಬೆಂಬಲಿಸಲು ಅಥವಾ ವಿರೋಧಿಸಲು ನಿರ್ಧರಿಸಿದರೆ ಅದು ಸಿದ್ಧಾಂತವನ್ನು ಆಧರಿಸಿದೆ ಎಂದು ಮಾಜಿ ಪ್ರಧಾನಿ ಡಿಎಂಕೆಯನ್ನು ಹೊಗಳಿದ್ದರು. ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಡಿಎಂಕೆ ನಿಲುವನ್ನು ವಿವರಿಸಲು ಈ ಮಾತುಗಳು ಸಾಕು” ಎಂದು ಸ್ಟಾಲಿನ್ ಹೇಳಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ದ ಕಿಡಿಕಾರಿದ ಸ್ಟಾಲಿನ್, “ಕೇಂದ್ರವನ್ನು ಖಂಡಿಸುವ ಮೂಲಕ ಮೈತ್ರಿ ವದಂತಿಯ ಬಗ್ಗೆ ಡಿಎಂಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪಳನಿಸ್ವಾಮಿಯಂತೆ ಹುದ್ದೆ ಪಡೆಯುವ ತೆವಲು ಡಿಎಂಕೆಗೆ ಇಲ್ಲ ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದಿವಂಗತ ಡಿಎಂಕೆ ನಾಯಕ ಎಂ ಕರುಣಾನಿಧಿ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 100 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ್ದು, ಕರುಣಾನಿಧಿ ಅವರನ್ನು ಭಾರತೀಯ ರಾಜಕೀಯದ “ಟೈಟಾನ್” ಎಂದು ಕರೆದಿದ್ದಾರೆ.
ಸೈದ್ದಾಂತಿಕ ಮತ್ತು ರಾಜಕೀಯವಾಗಿ ವಿರೋಧಿಯಾಗಿರುವ ದ್ರಾವಿಡ ಪಕ್ಷ ಡಿಎಂಕೆಯ ನಾಯಕನ ಸ್ಮರಣಾರ್ಥ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಾಣ್ಯ ಬಿಡುಗಡೆ ಮಾಡಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಜಸ್ಟೀಸ್ ಹೇಮಾ ಸಮಿತಿ’ ವರದಿ


