ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ ನಾಲ್ಕು ವರ್ಷ ವಯಸ್ಸಿನ ಇಬ್ಬರು ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಶಾಲಾ ಸಹಾಯಕ ಆರೋಪಿ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಖಂಡಿಸಿ ಮಕ್ಕಳ ಹೆತ್ತವರು ಮತ್ತು ಸಾರ್ವಜನಿಕರು ಇಂದು (ಆ.20) ಬೆಳಿಗ್ಗೆಯಿಂದ ಬದ್ಲಾಪುರದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ್ದಾರೆ.
VIDEO | Maharashtra: 'Rail roko' protest held at Badlapur railway station over alleged sexual assault of two nursery kids by a male attendant at a local school.
(Full video available on PTI Videos – https://t.co/dv5TRARJn4) pic.twitter.com/Wrokf0NC02
— Press Trust of India (@PTI_News) August 20, 2024
ಪ್ರಕರಣ ಸಂಬಂಧ ಶಾಲಾ ಆಡಳಿತ ಮಂಡಳಿ ಸೋಮವಾರ ಪ್ರಾಂಶುಪಾಲರು, ತರಗತಿ ಶಿಕ್ಷಕಿ, ಮಹಿಳಾ ಅಟೆಂಡರ್ ಮತ್ತು ಪ್ರಕರಣದ ಆರೋಪಿ ಎಂದು ಬಂಧಿಸಲ್ಪಟ್ಟಿರುವ ಗುತ್ತಿಗೆ ನೌಕರನನ್ನು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ದೂರು ದಾಖಲಿಸಲು ಮಗುವಿನ ಪೋಷಕರು ಪೊಲೀಸ್ ಠಾಣೆಗೆ ಹೋದಾಗ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಪೊಲೀಸ್ ಠಾಣೆ ಪ್ರಭಾರಿ ಸುಭದಾ ಶಿಟೋಲೆ ಅವರನ್ನು ಥಾಣೆ ಪೊಲೀಸರ ವಿಶೇಷ ಶಾಖೆಗೆ ವರ್ಗಾಯಿಸಲಾಗಿದೆ.
ಘಟನೆಯಿಂದ ಸಿಟ್ಟಿಗೆದ್ದ ಸ್ಥಳೀಯರು ಬದ್ಲಾಪುರ ನಗರ ಬಂದ್‌ಗೆ ಕರೆ ನೀಡಿದ್ದು, ಮಹಿಳಾ ಸಂಘಟನೆಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದೆ. ಡಿಸಿಪಿ ಸುಧಾಕರ ಪಠಾರೆ ಅವರು ನಾಗರಿಕರೊಂದಿಗೆ ಸಭೆ ನಡೆಸಿ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಶಾಲಾ ಆಡಳಿತವು ಕೆಲವು ತುರ್ತು ಕ್ರಮಗಳನ್ನು ಘೋಷಿಸಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ತನಿಖಾ ಸಮಿತಿಯನ್ನು ರಚಿಸಿದೆ. ಈ ಹಿಂದೆ ಸಿಸಿಟಿವಿ ಕ್ಯಾಮರಾಗಳು ಇಲ್ಲದ ಸ್ಥಳಗಳಲ್ಲೂ ಕ್ಯಾಮರಾ ಅಳವಡಿಸಲಾಗುತ್ತಿದೆ.
ಮಂಗಳವಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗುಂಪಿನ ಭಾಗವಾಗಿರುವ ಮಹಿಳೆಯೊಬ್ಬರು ಮಾತನಾಡಿ, “ಪ್ರಕರಣ ಬೆಳಕಿಗೆ ಬಂದ ನಾಲ್ಕು ದಿನಗಳ ಬಳಿಕ, ನಾಗರಿಕರು ಬಂದ್ ಘೋಷಿಸಿದ ನಂತರ ಶಾಲಾ ಆಡಳಿತವು ಕ್ರಮ ತೆಗೆದುಕೊಂಡಿದೆ. ನಾವು ಶಾಂತಿಯುತ ಬಂದ್ ಮತ್ತು ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ನಾಗರಿಕರ ಜೊತೆಗೆ ರಿಕ್ಷಾ ಯೂನಿಯನ್, ವರ್ತಕರ ಸಂಘ, ಜ್ಯುವೆಲ್ಲರ್ಸ್ ಅಸೋಸಿಯೇಷನ್, ಇದೀಗ ಕೆಲ ರಾಜಕೀಯ ಪಕ್ಷಗಳೂ ಬಂದ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಾಲೆಯ ಇತರ ಮಕ್ಕಳನ್ನೂ ವಿಚಾರಣೆ ನಡೆಸಲಾಗಿದೆ. ಆದರೆ, ಇದುವರೆಗೆ ಲೈಂಗಿಕ ದೌರ್ಜನ್ಯದ ಯಾವುದೇ ಹೊಸ ದೂರುಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಆಗಸ್ಟ್ 17ರಂದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಶಾಲೆಯ ಸಹಾಯಕನಾಗಿದ್ದ ಗುತ್ತಿಗೆ ನೌಕರ ಮಕ್ಕಳನ್ನು ಶೌಚಾಲಯಕ್ಕೆ ಕರೆದೊಯ್ದು, ಅವರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿರುವ ಘಟನೆ ಮತ್ತು ಆ ಬಳಿಕ ನಿರಂತರ ಸುದ್ದಿಯಾಗುತ್ತಿರು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೇಶದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ವಿವಿದೆಡೆ ಅತ್ಯಾಚಾರ ಕೃತ್ಯಗಳ ವಿರುದ್ದ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೋಲ್ಕತ್ತಾ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಟಾಸ್ಕ್ ಫೋರ್ಸ್ ಕೂಡ ರಚಿಸಿದೆ.
ಇದನ್ನೂ ಓದಿ : ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಎಂಟ್ರಿ ಎಂದರೇನು..? ಜಾಹೀರಾತು ಹಿಂತೆಗೆದುಕೊಳ್ಳುವಂತೆ ಯುಪಿಎಸ್‌ಸಿಗೆ ಸೂಚಿಸಿದ್ಯಾಕೆ ಕೇಂದ್ರ?


