ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಎಂಟ್ರಿಯ ಇತ್ತೀಚಿನ ಜಾಹೀರಾತನ್ನು ಕೇಂದ್ರವು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, “ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಎಲ್ಲ ಸಂದರ್ಭದಲ್ಲಿ ಕಾಂಗ್ರೆಸ್ ರಕ್ಷಿಸುತ್ತದೆ; ಬಿಜೆಪಿಯ ಪಿತೂರಿಗಳನ್ನು ವಿಫಲಗೊಳಿಸುತ್ತದೆ” ಎಂದು ಹೇಳಿದರು.
ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದ ನಂತರ ಮತ್ತು ಹಿಂದುಳಿದ ಸಮುದಾಯಗಳು ಸರ್ಕಾರಿ ಸೇವೆಗಳಲ್ಲಿ ತಮ್ಮ ಸರಿಯಾದ ಪ್ರಾತಿನಿಧ್ಯವನ್ನು ಪಡೆಯಲು ಜಾಹೀರಾತನ್ನು ರದ್ದುಗೊಳಿಸುವಂತೆ ಕೇಳಿಕೊಂಡ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
“ನಾವು ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಎಲ್ಲ ಸದರ್ಭಗಳಲ್ಲಿ ರಕ್ಷಿಸುತ್ತೇವೆ. ಯಾವುದೇ ಬೆಲೆ ತೆತ್ತಾದರೂ ‘ಲ್ಯಾಟರಲ್ ಎಂಟ್ರಿ’ಯಂತಹ ಬಿಜೆಪಿಯ ಪಿತೂರಿಗಳನ್ನು ನಾವು ವಿಫಲಗೊಳಿಸುತ್ತೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ರಾಹುಲ್ ಗಾಂಧಿ.
“ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, 50 ಶೇಕಡಾ ಮೀಸಲಾತಿ ಮಿತಿಯನ್ನು ತೆಗೆದುಹಾಕುವ ಮೂಲಕ, ನಾವು ಜಾತಿ ಜನಗಣತಿಯ ಆಧಾರದ ಮೇಲೆ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುತ್ತೇವೆ” ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
संविधान और आरक्षण व्यवस्था की हम हर कीमत पर रक्षा करेंगे।
भाजपा की ‘लेटरल एंट्री’ जैसी साजिशों को हम हर हाल में नाकाम कर के दिखाएंगे।
मैं एक बार फिर कह रहा हूं – 50% आरक्षण सीमा को तोड़ कर हम जातिगत गिनती के आधार पर सामाजिक न्याय सुनिश्चित करेंगे।
जय हिन्द।
— Rahul Gandhi (@RahulGandhi) August 20, 2024
ಆಗಸ್ಟ್ 17 ರಂದು, ಯುಪಿಎಸ್‌ಸಿ 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಿತು, ಇದನ್ನು ಸರ್ಕಾರಿ ಇಲಾಖೆಗಳಲ್ಲಿ ತಜ್ಞರ (ಖಾಸಗಿ ವಲಯದವರನ್ನು ಒಳಗೊಂಡಂತೆ) ನೇಮಕಾತಿ ಎಂದು ಉಲ್ಲೇಖಿಸಲಾಗುತ್ತದೆ.
ಈ ನಿರ್ಧಾರವು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು.
ಪ್ರಧಾನ ಮಂತ್ರಿಗೆ ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯು “ಐತಿಹಾಸಿಕ ಅನ್ಯಾಯಗಳನ್ನು ಪರಿಹರಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ನಮ್ಮ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರವಾಗಿದೆ” ಎಂದು ಸಿಂಗ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ; ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಎಂಟ್ರಿ ಎಂದರೇನು..? ಜಾಹೀರಾತು ಹಿಂತೆಗೆದುಕೊಳ್ಳುವಂತೆ ಯುಪಿಎಸ್‌ಸಿಗೆ ಸೂಚಿಸಿದ್ಯಾಕೆ ಕೇಂದ್ರ?


