ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವಿದ್ಯಾರ್ಥಿ ಘಟಕದಿಂದ ಇಂದು(ಆ.21) ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಹೊರ ಜಿಲ್ಲೆಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಗಾಂಧಿನಗರದ ಮೌರ್ಯ ವೃತ್ತದಿಂದ ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆ ಆರಂಭವಾಗಲಿದೆ ಎಂದು ಒಕ್ಕೂಟ ಹೇಳಿದೆ.
ಗೋ ಬ್ಯಾಕ್ ಗವರ್ನರ್
“ರಾಜ್ಯದಲ್ಲಿನ ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ತಾಳಕ್ಕೆ ಕುಣಿದರೆ, ‘ಗೋ ಬ್ಯಾಕ್ ಗವರ್ನರ್’ ಚಳವಳಿ ಆರಂಭಿಸಬೇಕಾಗುತ್ತದೆ” ಎಂದು ಬೆಂಗಳೂರು ವಿವಿಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಸತೀಶ್ ಜಿ ಕೆ ಎಚ್ಚರಿಸಿದ್ದಾರೆ.
27ಕ್ಕೆ ರಾಜಭವನ ಚಲೋ
ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ “ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಇದಕ್ಕಾಗಿ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಇದನ್ನು ಖಂಡಿಸಿ ಇದೇ 27ಕ್ಕೆ ಸ್ವಾತಂತ್ರ್ಯ ಉದ್ಯಾನದಿಂದ ಮೆರವಣಿಗೆ ಹೊರಟು, ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೇಲ್ಮನೆಯಲ್ಲಿ ಬಹುಮತ ಪಡೆದ ಬಳಿಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ಸಿಎಂ ಸಿದ್ದರಾಮಯ್ಯ


