Homeಮುಖಪುಟಕೇರಳ ಭೂಕುಸಿತ ದುರಂತ ಮತ್ತು ಮಾಧವ ಗಾಡ್ಗಿಲ್ ವರದಿ

ಕೇರಳ ಭೂಕುಸಿತ ದುರಂತ ಮತ್ತು ಮಾಧವ ಗಾಡ್ಗಿಲ್ ವರದಿ

- Advertisement -
- Advertisement -

ಇತ್ತೀಚಿಗೆ ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ರ ಕುರಿತು ಕನ್ನಡದ ಲೇಖಕ ಜಗದೀಶ್ ಕೊಪ್ಪರವರು ಬರೆದ ’ಪರಿಸರ ಲೋಕದ ಅಶಾಂತ ಸಂತ’ ಎಂಬ ಲೇಖನ ಫೇಸ್ಬುಕ್ ವಾಟ್ಸಾಪ್ ಆದಿಯಾಗಿ ಅನೇಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿತ್ತು. ಪರಿಸರ ಆಸಕ್ತರಿಗೆ ಮಾಧವ್ ಗಾಡ್ಗಿಲ್‌ರದ್ದು ಚಿರಪರಿಚಿತ ಹೆಸರೇ ಆದರೂ ಅವರ ಹೆಸರು ಯಾವತ್ತೂ ಭರ್ತಿ ಮಳೆಯ ದಿನಗಳಲ್ಲಿ ಮುನ್ನಲೆಗೆ ಬರುತ್ತಿರುತ್ತದೆ. ಇದಕ್ಕೆ ಕಾರಣ 2011ರಲ್ಲಿ ಅವರ ನೇತೃತ್ವದಲ್ಲಿ ಬಿಡುಗಡೆಯಾದ ಪಶ್ಚಿಮಘಟ್ಟದ ಸಂರಕ್ಷಣೆಯ ಕುರಿತಾದ ಸಮಗ್ರ ವರದಿ ಮತ್ತು ಅದರಲ್ಲಿ ಅವರು ಕೊಟ್ಟ ಎಚ್ಚರಿಕೆಗಳು! ಅವರ ವೈಜ್ಞಾನಿಕ ವರದಿಯ ಅನುಗುಣವಾಗಿಯೇ ಅವರು ಹೇಳಿದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಒಂದೊಂದಾಗಿ ಭೂಕುಸಿತ, ನೆರೆಹಾವಳಿಯಂತಹ ಅವಘಡಗಳು ಸಂಭವಿಸುತ್ತಿವೆ.

ಅದು 2009-10ರ ಇಸವಿ; ಭಾರತದ ಪರಿಸರ ಸಂರಕ್ಷಣೆಯ ಕುರಿತು ಸ್ವಲ್ಪವಾದರೂ ಆಶಾದಾಯಕವಾಗಿದ್ದ ದಿನಗಳು ಅವು. ಜೈರಾಮ್ ರಮೇಶ್ ನೇತೃತ್ವದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅನೇಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿತ್ತು. ಅವುಗಳಲ್ಲಿ ಒಂದು ಪಶ್ಚಿಮಘಟ್ಟಗಳ ಶಾಶ್ವತವಾದ ಸಂರಕ್ಷಣೆಗೆ ನೇಮಿಸಿದ ಮಾಧವ್ ಗಾಡ್ಗಿಲ್‌ರ ನೇತೃತ್ವದ ತಜ್ಞ ಸಮಿತಿ ಕೂಡ ಒಂದು. ಈ ಸಮಿತಿಯಲ್ಲಿ ನಮ್ಮ ಕನ್ನಡದ ಲೇಖಕ ಮತ್ತು ವಿಜ್ಞಾನಿ ಶ್ರೀ ಕೆ.ಎನ್ ಗಣೇಶಯ್ಯನವರೂ ಇದ್ದರು. ಈ ಸಮಿತಿಯ ಸದಸ್ಯರೆಲ್ಲರೂ ಪಶ್ಚಿಮಘಟ್ಟದ ಕುರಿತು ಆಳವಾದ ಜ್ಞಾನ ಹೊಂದಿದವರೇ ಆಗಿದ್ದರು. ಅವರು ತಮ್ಮ ಅನುಭವ ಮತ್ತು ಸ್ಥಳ ಪರಿಶೀಲನೆಯ ಪ್ರಕಾರ ಅಲ್ಲಿನ ಪರಿಸರ ಸೂಕ್ಷ್ಮತೆಯ ಆಧಾರದ ಮೇಲೆ ಪಶ್ಚಿಮಘಟ್ಟದ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ಗುರುತಿಸಿ ಆಯಾ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಮತ್ತು ನಿಷೇಧಿತ ಚಟುವಟಿಕೆಗಳನ್ನು ಶಿಫಾರಸ್ಸು ಮಾಡಿದ್ದರು. ಈ ವರದಿ ಹೊರಬರುವುದೇ ತಡ, ಇದರ ಕುರಿತು ಕೇರಳದಲ್ಲಿ ವ್ಯಾಪಕವಾದ ವಿರೋಧ ಉಂಟಾಯಿತು. ತದನಂತರ ಇದು ತೀವ್ರವಾದ ರಾಜಕೀಯ ಸ್ವರೂಪವನ್ನು ಪಡೆದು ಕೇರಳದಾದ್ಯಂತ ಮುಖ್ಯವಾಗಿ ಅಲ್ಲಿನ ವಿರೋಧ ಪಕ್ಷ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್‌ನ ನೇತೃತ್ವದಲ್ಲಿ ಹರತಾಳ, ಪ್ರತಿಭಟನೆ ಮತ್ತು ವ್ಯಾಪಕ ಹಿಂಸಾಚಾರಗಳು ನಡೆದವು. ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಕ್ಯಾಲಿಕಟ್ ಅರಣ್ಯ ಇಲಾಖೆಯ ಕಚೇರಿಯನ್ನು ಸುಡಲಾಯಿತು, ಇದನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂಬುದು ಪ್ರತಿಭಟನೆಯ ತೀವ್ರತೆ ಮತ್ತು ಜನರ ದಿಕ್ಕುತಪ್ಪಿಸುವ ಊಹಾಪೋಹಗಳ ಪ್ರಭಾವ ಎಷ್ಟಿತ್ತು ಎಂಬುದು ತಿಳಿಯುತ್ತದೆ.

ಕೇರಳದ ಪಶ್ಚಿಮಘಟ್ಟದ ಬಹುಭಾಗ ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಬರುತ್ತದೆ. ಇಡುಕ್ಕಿ ಜಿಲ್ಲೆಯ ಬಹುಪಾಲು ಜನ ಕ್ರಿಶ್ಚಿಯನ್ನರು, ಹಾಗಾಗಿ ಅಲ್ಲಿನ ಕ್ಯಾಥೊಲಿಕ್ ಚರ್ಚು ಜಿಲ್ಲೆಯ ಸಾಮಾಜಿಕ ಜೀವನ ಮತ್ತು ರಾಜಕೀಯದ ಮೇಲೆ ಭದ್ರ ಹಿಡಿತವನ್ನು ಹೊಂದಿದೆ. ಈ ಭಾಗದ ಅತಿದೊಡ್ಡ ಚರ್ಚು ಈ ವರದಿಯ ಕುರಿತು ಕಟುವಾಗಿ ವಿರೋಧ ವ್ಯಕ್ತಪಡಿಸಿತು ಮತ್ತು ಜನರಿಗೆ ತಪ್ಪು ಮಾಹಿತಿ ಹರಡಲು ಕೂಡ ಕಾರಣವಾಯಿತು. ಹಾಗೆ ನೋಡಿದರೆ ಈ ವರದಿಯು ಪಶ್ಚಿಮ ಘಟ್ಟದ ದೀರ್ಘಕಾಲದ ಸಂರಕ್ಷಣೆಯನ್ನು ಪ್ರತಿಪಾದಿಸುತ್ತಿತ್ತು ಮತ್ತು ಜನರನ್ನು ಮತ್ತು ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳನ್ನು ಪ್ರಮುಖ ಪಾಲದಾರರನ್ನಾಗಿ ಪರಿಗಣಿಸಲು ಶಿಫಾರಸ್ಸು ಮಾಡಿತ್ತು. ಯಾವುದೇ ಕೈಗಾರಿಕೆ ಅಥವಾ ಪಾರಿಸರಿಕ ನಿರ್ಧಾರ ಕೈಗೊಳ್ಳುವ ಮುನ್ನ ಜನರ ಅಭಿಪ್ರಾಯಕ್ಕೆ ಹೆಚ್ಚಿನ ಒತ್ತನ್ನು ನೀಡಿತ್ತು; ನಿಜ ಅರ್ಥದಲ್ಲಿ ಇದು ಆಡಳಿದ ವಿಕೇಂದ್ರೀಕರಣವನ್ನು ಪ್ರತಿಪಾದಿಸುವ ಒಂದು ಜನಪರ ನಿಲುವೇ ಆಗಿತ್ತು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜನರಿಗೆ ತಪ್ಪು ಮಾಹಿತಿ ನೀಡಿ- ಈ ವರದಿ ಜಾರಿಯಾದರೆ ಜನರನ್ನು ಒಕ್ಕಲೆಬ್ಬಿಸುತ್ತಾರೆ, ಜನರಿಗೆ ಯಾವುದೇ ಉದ್ಯಮ ವ್ಯವಹಾರ ಮಾಡಲು ಸ್ವಾತಂತ್ರ್ಯವಿರುವುದಿಲ್ಲ ಎಂದು ಜನರನ್ನು ಈ ವರದಿಯ ವಿರುದ್ಧ ಎತ್ತಿ ಕಟ್ಟಿದವು. ಈ ವರದಿಯನ್ನು ವಿರೋಧಿಸುವ ಭರದಲ್ಲಿ ಕ್ಯಾಥೊಲಿಕ್ ಚರ್ಚಿನ ಒಕ್ಕೂಟ, ಈ ವರದಿಯ ಹಿಂದೆ ವಿದೇಶಿ ಕೈವಾಡ ಇದೆ, ಜನರನ್ನು ಒಕ್ಕಲೆಬ್ಬಿಸಿ, ಅವರ ಭೂಮಿಯನ್ನು ಲಪಟಾಯಿಸುವ ಯೋಜನೆ ಇದೆ ಎಂಬ ಸತ್ಯಕ್ಕೆ ದೂರವಾದ ಹೇಳಿಕೆಯನ್ನು ನೀಡಿತು. ಅಲ್ಲಿನ ಸ್ಥಳೀಯ ಶಾಸಕ, ಈ ವರದಿಯನ್ನು ಅನುಷ್ಠಾನಗೊಳಿಸಲು ಯಾರಾದರೂ ಬಂದರೆ ಅವರನ್ನು ಥಳಿಸಲಾಗುವುದು ಎಂಬ ಹೇಳಿಕೆಯನ್ನೂ ನೀಡಿದರು. ಈ ವರದಿಯು ಕಲ್ಲು, ಮರಳು ಮತ್ತಿತರ ಗಣಿಗಾರಿಕೆ, ದೊಡ್ಡ ಅಣೆಕಟ್ಟು, ಉಷ್ಣ ವಿದ್ಯುತ್ ಸ್ಥಾವರ ಮತ್ತು ಮಾಲಿನ್ಯಕಾರಕ ಉದ್ಯಮಗಳನ್ನು ಸ್ಥಾಪಿಸದಂತೆ ಮತ್ತು 2000 ಚದುರಮೀಟರಿಗೂ ದೊಡ್ಡ ಕಟ್ಟಡಗಳನ್ನು ಕಟ್ಟುವುದನ್ನು ಮಾತ್ರ ನಿಷೇಧಿಸಲು ಶಿಫಾರಸ್ಸು ಮಾಡಿತ್ತು. ಹಾಗಾಗಿ ಈ ವರದಿಯನ್ನು ವಿರೋಧದ ಹಿಂದೆ ಯಾರಿದ್ದರು ಎಂಬುದನ್ನು ಸುಲಭವಾಗಿ ಊಹಿಸಬಹುದು.

ಈ ವರದಿ ಮೊದಲು ಬಿಡುಗಡೆಯಾದಾಗ ಕರ್ನಾಟಕವೂ ಸೇರಿದಂತೆ ಪಶ್ಚಿಮಘಟ್ಟವನ್ನು ಒಳಗೊಂಡ ಇತರ ರಾಜ್ಯಗಳು ಭಾರೀ ವಿರೋಧವನ್ನೇನೂ ವ್ಯಕ್ತಪಡಿಸಿರಲಿಲ್ಲ. ಆದರೆ ಕೇರಳದ ತೀವ್ರ ಪ್ರತಿಭಟನೆಯನ್ನು ನೋಡಿ peer pressureನಿಂದೇನೋ ಎಂಬಂತೆ ತಾವೂ ವಿರೋಧ ವ್ಯಕ್ತಪಡಿಸಿದವು. ತದನಂತರ ಆಗಿನ ಯುಪಿಎ ಸರ್ಕಾರ ಕಸ್ತೂರಿ ರಂಗನ್ ನೇತೃತ್ವದ ಇನ್ನೊಂದು ಸಮಿತಿಯನ್ನು ನೇಮಿಸಿ ಗಾಡ್ಗಿಲ್ ವರದಿಯನ್ನು ಮರುಪರಿಶೀಲಿಸುವಂತೆ ಆದೇಶಿಸಿತು. ಕಸ್ತೂರಿರಂಗನ್ ವರದಿಯು ಪರಿಸರ ಸೂಕ್ಷ್ಮ ವಲಯವನ್ನು ಗ್ರಾಮಮಟ್ಟಕ್ಕೆ ಮಿತಗೊಳಿಸಿ ಪಶ್ಚಿಮಘಟ್ಟದ 37% ಪ್ರದೇಶವನ್ನು ಸಂರಕ್ಷಣೆಗೆ ಒಳಪಡಿಸಲು ಶಿಫಾರಸ್ಸು ನೀಡಿತು. ಆದರೆ ಈ ವರದಿಗೂ ಕೂಡ ಎಲ್ಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು. ಇವೆಲ್ಲವುದರ ನಡುವೆ ಪಶ್ಚಿಮಘಟ್ಟಗಳನ್ನು ಶಾಶ್ವತವಾಗಿ ಉಳಿಸಬೇಕು ಎಂಬ ಆಶಯಕ್ಕೆ ಮಾತ್ರ ಹಿನ್ನಡೆ ಉಂಟಾಯಿತು.

ಇದನ್ನೂ ಓದಿ: ವಯನಾಡ್ ಭೂಕುಸಿತ: ಕಾಣೆಯಾದವರ ದಾಖಲೆ ವಿತರಿಸಲು ಕೇರಳದ ಶಾಲೆಗಳಲ್ಲಿ ವಿಶೇಷ ಶಿಬಿರ

ಇನ್ನು ಇದಾದ ಕೆಲವರ್ಷಗಳ ನಂತರ ಕೇರಳದ ಇಡುಕ್ಕಿ ಜಿಲ್ಲೆ ಹಿಂದೆಂದೂ ಕೇಳರಿಯದ ಭೂಕುಸಿತ ಮತ್ತು ನೆರೆ ಹಾವಳಿಗೆ ತುತ್ತಾಯಿತು. ಆ ವರ್ಷ ಸುರಿದ ಭಾರೀ ಮಳೆಗೆ ಬೆಟ್ಟ ಇಳಿಜಾರಿನಲ್ಲಿ ಪಶ್ಚಿಮ ದಿಕ್ಕಿಗೆ ಹರಿಯುತ್ತಿದ್ದ ನದಿಗಳು ಭೋರ್ಗರೆಯುತ್ತಾ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ದಡದಲ್ಲಿದ್ದ ಮನೆ, ತೋಟ, ಊರುಗಳನ್ನೆಲ್ಲ ಆಕ್ರಮಿಸಿಕೊಂಡವು, ಅಷ್ಟೇಅಲ್ಲದೆ ದಾರಿಯುದ್ದಕ್ಕೂ ಸಿಗುವ ಕಲ್ಲು, ಮಣ್ಣನ್ನು ಹೊತ್ತು ತಗ್ಗು ಪ್ರದೇಶದ ಮನೆ, ಜನವಸತಿ ಪ್ರದೇಶಗಳ ಮೇಲೆ ಹಾಕಿದವು. ಈ ಪ್ರವಾಹವು ಕೇರಳ ರಾಜ್ಯವನ್ನೇ ನಡುಗಿಸಿಬಿಟ್ಟಿತು. ಆಗ ಮಾತ್ರ ಇವೆಲ್ಲ ಅವಘಡಗಳನ್ನು ಮುಂಚೆಯೇ ಗ್ರಹಿಸಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿದ್ದ ಗಾಡ್ಗಿಲ್‌ರು ಮತ್ತೆ ನೆನಪಾದರು; ಆದರೆ ಕಾಲ ಆಗಲೇ ಮಿಂಚಿಹೋಗಿತ್ತು. ತದನಂತರ ಪ್ರತೀ ವರ್ಷವೂ ಮಳೆಗಾಲದಲ್ಲಿ ಕರ್ನಾಟಕದ ಕೊಡಗು ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾದ ಭೂಕುಸಿತಗಳು ಸಂಭವಿಸತೊಡಗಿದವು ಮತ್ತು ಇವೆಲ್ಲವುಗಳೂ ಬಹುಪಾಲು ಮಾನವ ಚಟುವಟಿಕೆ ಇರುವ ಸ್ಥಳಗಳಲ್ಲಿಯೇ ಸಂಭವಿಸತೊಡಗಿದವು. ಆವಾಗಿನಿಂದ ವಾಡಿಕೆಯಂತೆ ಪ್ರತೀ ವರ್ಷವೂ ಗಾಡ್ಗಿಲ್ ವರದಿಯನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ, ಆದರೆ ಇದರ ಕುರಿತ ಕೈಗೊಂಡ ಪರಿಹಾರಗಳು ಮಾತ್ರ ಸೊನ್ನೆ.

ಇನ್ನು ಇತ್ತೀಚಿಗೆ ಸಂಭವಿಸಿದ ವಯನಾಡಿನ ಭೂಕುಸಿತದ ವಿಷಯಕ್ಕೆ ಬರುವುದಾದರೆ, ಇದು ಕೇರಳ ಅಥವಾ ಸಂಪೂರ್ಣ ಪಶ್ಚಿಮಘಟ್ಟದ ಯಾವುದೇ ಪ್ರದೇಶ ಕಂಡಿರಬಹುದಾದ ಅತ್ಯಂತ ದುರಂತಮಯ ಘಟನೆ. ಇದಕ್ಕೆ ಕಾರಣ ಪಶ್ಚಿಮ ಘಟ್ಟದ ಮೇಲೆ ನಡೆಯುತ್ತಿರುವ ಅತಿಯಾದ ಮಾನವಜನ್ಯ ಚಟುವಟಿಕೆಗಳಾದರೂ ಅದರ ಜೊತೆಜೊತೆಗೇ ಜಾಗತಿಕ ತಾಪಮಾನದ ಏರಿಕೆಯಿಂದ ಉಂಟಾಗುವ ಹವಾಮಾನದ ವೈಪರೀತ್ಯವೂ ಕಾರಣವಾಗಿದೆ. ತಿಂಗಳು ಪೂರ್ತಿ ಸುರಿಯಬೇಕಾಗಿದ್ದ ಮಳೆ ಕೆಲವೇ ದಿನಗಳಲ್ಲಿ ಸುರಿದರೆ ಏನಾಗಬಹುದೋ  ಅದೇ ಅನಾಹುತ ಆಗಿದೆ. ಹೆಚ್ಚಿನ ತಾಪಮಾನದಿಂದ ಅರಬ್ಬೀ ಸಮುದ್ರದಲ್ಲಿ ಉಂಟಾಗುವ ಮೋಡಗಳ ಸಾಂದ್ರತೆ ಹೆಚ್ಚಿ ಅವು ಪಶ್ಚಿಮಘಟ್ಟ ಮತ್ತು ಪಶ್ಚಿಮ ಕರಾವಳಿಗೆ ಭಾರಿ ಪ್ರಮಾಣದ ಮಳೆಯನ್ನು ತರುತ್ತಿವೆ. ಹಾಗಾಗಿ, ಮೊದಲೇ ಅರಣ್ಯ ನಾಶದಿಂದ ಬರಡಾಗುತ್ತಿರುವ ಪಶ್ಚಿಮ ಘಟ್ಟದ ಬೆಟ್ಟಗಳ ಮಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದುಕೊಳ್ಳಲಾಗದೆ ಕುಸಿತಕ್ಕೆ ಒಳಗಾಗುತ್ತಿದೆ ಮತ್ತು ಆ ಕಲ್ಲು ಮತ್ತು ಮಣ್ಣು ಭೋರ್ಗರೆಯುವ ಹಳ್ಳದ ಜೊತೆಗೆ ಬಂದು ಜನವಸತಿಯ ಪ್ರದೇಶದ ಮೇಲೆ ಬೀಳುತ್ತಿದೆ.

ಇನ್ನು ನಾವು ಪಶ್ಚಿಮಘಟ್ಟಗಳನ್ನು ರಕ್ಷಿಸುವ ಯೋಜನೆಯನ್ನು ತಕ್ಷಣಕ್ಕೆ ಅನುಮೋದಿಸಿದರೆ ನೆರೆ ಮತ್ತು ಭೂಕುಸಿತಗಳು ನಿಲ್ಲುತ್ತವೆಯೇ ಎಂದರೆ, ಅದು ಸಾಧ್ಯವಿಲ್ಲ. ನಾವು ಇಲ್ಲಿಯವರೆಗೆ ಮಾಡಿದ ವಿನಾಶಕ್ಕೆ ಬೆಲೆ ಕಟ್ಟಲೇಬೇಕು ಮತ್ತು ಜಾಗತಿಕ ತಾಪಮಾನದ ವೈಪರೀತ್ಯವನ್ನು ಅನುಭವಿಸಲೇಬೇಕು. ಆದರೆ ಕನಿಷ್ಠ ಪಕ್ಷ ಮುಂದೆ ಆಗುವ ಅನಾಹುತಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು ಮಾತ್ರ. ಈಗ ಆಗಬೇಕಾಗಿರುವ ತುರ್ತು ಕೆಲಸವೆಂದರೆ, ತಂತ್ರಜ್ಞಾನದ ಮೂಲಕ ಭಾರಿ ಮಳೆಯ ಸಂಭಾವನೆಯನ್ನು ಮೊದಲೇ ಗುರುತಿಸುವುದು, ಅದಕ್ಕೆ ಅನುಗುಣವಾಗಿ ನೆಲಕುಸಿತ ಉಂಟಾಗುವ ಸೂಕ್ಷ್ಮ ಪ್ರದೇಶದಲ್ಲಿನ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಜನರನ್ನು ಮೊದಲೇ ಸುರಕ್ಷಿತ ಪ್ರದೇಶಕ್ಕೆ ವರ್ಗಾಯಿಸುವುದು. ವಯನಾಡಿನ ಭೂಕುಸಿತದಿಂದ ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ, ನೆರೆಯ ಸಂದರ್ಭದಲ್ಲಿ ಕಲ್ಲುಮಣ್ಣಿನ ಅವಶೇಷಗಳು ಹೇಗೆ ಎತ್ತರ ಪ್ರದೇಶದಿಂದ ಹರಿಯುತ್ತವೆ ಎಂಬುದು. ಇದನ್ನು ಮೊದಲೇ ಗ್ರಹಿಸಬೇಕು. ಇಲ್ಲಿ ಭೂಕುಸಿತದಿಂದ ಸುರಕ್ಷಿತ ಎಂದು ಗುರುತಿಸಲ್ಪಟ್ಟ ಪ್ರದೇಶಗಳು ಕೂಡ ನೆರೆಗೆ ತುತ್ತಾಗಿವೆ ಮತ್ತು ಅಪಾರ ಪ್ರಮಾಣದ ಜೀವಹಾನಿ ಉಂಟಾಗಿದೆ. ಹೀಗಾಗಿ ಬೆಟ್ಟದ ಮೇಲಿನಿಂದ ನೀರಿನ ಜೊತೆಗೆ ಕಲ್ಲು, ಮಣ್ಣು ಬಂಡೆಗಳು ಹೇಗೆ ಹರಿದು ಬರುತ್ತವೆ ಎಂಬುದನ್ನು ಕೂಡ ಅರಿತು ಅದಕ್ಕೆ ತಕ್ಕುದಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಬೇಕು.

ಇವು ಒಮ್ಮೆ ಮಾತ್ರ ನಡೆದು ಪುನರಾವರ್ತನೆಯಾಗದ ಘಟನೆಗಳಲ್ಲ; ಇವೆಲ್ಲ ಇನ್ನುಮುಂದೆ ಪ್ರತಿವರ್ಷವೂ ಮಲೆನಾಡಿನಲ್ಲಿ ನಡೆಯಬಹುದಾದ ಘಟನೆಗಳು. ಹೀಗಾಗಿ ನಮ್ಮ ರಾಜ್ಯ ಸರ್ಕಾರ ಕೂಡ ಈ ಕುರಿತು ಯೋಜನೆ ರೂಪಿಸಬೇಕು ಮತ್ತು ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಪ್ರತಿ ವರ್ಷವೂ ಸನ್ನದ್ಧರಾಗಿರಬೇಕು. ಈಗಾಗಲೇ ರಾಜ್ಯ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆಯವರು ಅಕ್ರಮ ರೆಸಾರ್ಟ್‌ಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಮಾತನ್ನಾಡಿದ್ದಾರೆ. ಇದು ಸ್ವಾಗತಾರ್ಹವೇ; ಕಾರಣ, ಈ ಬಹುಪಾಲು ರೆಸಾರ್ಟ್‌ಗಳು ಇರುವುದು ನದಿ ಮತ್ತು ಹಳ್ಳಗಳ ಪಕ್ಕವೇ ಮತ್ತು ಇವುಗಳ ನಿರ್ಮಾಣದ ಅನೇಕ ಸಂದರ್ಭದಲ್ಲಿ ಅಡ್ಡಾದಿಡ್ಡಿಯಾಗಿ ಬೆಟ್ಟಗಳನ್ನು ಕಡಿದಿರುವುದು, ಮತ್ತು ಎತ್ತರದ ಪ್ರದೇಶದಲ್ಲಿ ಈಜುಕೊಳ ಹಾಗೂ ಕೃತಕ ಕೆರೆಗಳನ್ನು ನಿರ್ಮಿಸಿರುವುದು ಕೂಡ ಬೆಟ್ಟದ ಮಣ್ಣು ಸಡಿಲವಾಗಲು ಕಾರಣವಾಗಿರುತ್ತದೆ. ಇವೆಲ್ಲವುಗಳನ್ನು ನಿಯಂತ್ರಿಸಲು ದೀರ್ಘಕಾಲದ ಯೋಜನೆಯನ್ನು ರೂಪಿಸಲೇಬೇಕಾಗುತ್ತದೆ.

ಈ ಸಮಯದಲ್ಲಿ ಇನ್ನೊಂದು ವಿಷಯವನ್ನು ನೆನಪಿಸಿಕೊಳ್ಳಲೇಬೇಕು, 2020ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಯಾರು ಬೇಕಾದರೂ ಕೃಷಿಭೂಮಿಯನ್ನು ಕೊಳ್ಳಬಹುದು ಎಂದು ಕಾನೂನನ್ನು ಮಾರ್ಪಡಿಸಿತು. ಇದರ ಪರಿಣಾಮವಾಗಿ ಕೊಡಗು, ಚಿಕ್ಕಮಗಳೂರು ಮತ್ತಿತರ ಮಲೆನಾಡಿನ ಪ್ರದೇಶಗಳಲ್ಲಿ ಹೊರಗಿನಿಂದ ಬಂದವರು ವ್ಯಾಪಕವಾಗಿ ಭೂಮಿಯನ್ನು ಕೊಳ್ಳುತ್ತಿದ್ದಾರೆ ಮತ್ತು ಅಕ್ರಮ ವಸತಿ ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ; ಇವೆಲ್ಲ ಯಾವ ಮಟ್ಟಕ್ಕೆ ಅಪಾಯಕಾರಿಯಾಗಬಹುದು ಎಂಬ ಆಲೋಚನೆ ಕೂಡ ನಮಗಿಲ್ಲ. ಮಲೆನಾಡಿನ ಸೂಕ್ಷ್ಮ ಪ್ರದೇಶವನ್ನು ಜೆಸಿಬಿ ತಂದು ಎಲ್ಲೆಂದರಲ್ಲಿ ಬಗೆದು, ಬೆಟ್ಟಗಳನ್ನು ಕೊರೆದು ಬಡಾವಣೆಗಳನ್ನು ನಿರ್ಮಿಸಿದರೆ ಅವೆಲ್ಲ ಇಲ್ಲಿನ ಮಳೆಗೆ ಕೊಚ್ಚಿಕೊಂಡು ಹೋಗದೆ ಇರುವುದೇ? ಅದಲ್ಲದೆ ನಮ್ಮದೇ ಪಶ್ಚಿಮ ಘಟ್ಟದಲ್ಲಿ ಎತ್ತಿನಹೊಳೆ, ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆ ಮತ್ತು ಕೇರಳ ಸರ್ಕಾರ ಅತಿಯಾಗಿ ಒತ್ತಾಯಿಸುತ್ತಿರುವ ನಂಜನಗೂಡು ನಿಲಂಬೂರು ರೈಲು ಯೋಜನೆ ಇಂತಹ ಎಲ್ಲ ಅನಾಹುತಕಾರಿ ಯೋಜನೆಗಳಿಂದ ಮಲೆನಾಡನ್ನು ರಕ್ಷಿಸಲು, ಸ್ಥಳೀಯ ಜನರ ಮತ್ತು ಪರಿಸರದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳುವಂತಹ ಒಂದು ದೀರ್ಘಕಾಲೀನ ಯೋಜನೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಇಲ್ಲದೆಹೋದರೆ ಮಲೆನಾಡಿನ, ಪಶ್ಚಿಮ ಘಟ್ಟದ ಸಂಸ್ಕೃತಿ ಮತ್ತು ವನ್ಯ ಸಂಪತ್ತನ್ನು ಉಳಿಸಿಕೊಳ್ಳುವುದು ಅಸಾಧ್ಯವೇ.

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...