ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೋರೇನ್ ಅವರು ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯ ನಡುವೆ, ಹೊಸ ಪಕ್ಷ ಸ್ಥಾಪಿಸುವುದಾಗಿ ಅವರು ಘೋಷಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಚಂಪೈ ಸೊರೇನ್, “ನನ್ನ ಎದುರು ನಿವೃತ್ತಿ, ಸಂಘಟನೆ ಮತ್ತು ಸ್ನೇಹ ಎಂಬ ಮೂರು ಆಯ್ಕೆಗಳಿವೆ. ಆದರೆ, ನಾನು ನಿವೃತ್ತಿಯಾಗುವುದಿಲ್ಲ. ಬದಲಾಗಿ ಹೊಸ ಪಕ್ಷ ಸ್ಥಾಪಿಸಿ, ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಹಾಗೆಯೇ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತೇನೆ” ಎಂದಿದ್ದಾರೆ.
“ಒಂದು ವಾರದೊಳಗೆ ಹೊಸ ಪಕ್ಷ ಸ್ಥಾಪಿಸಲಾಗುವುದು. ಒಂದು ದಿನದೊಳಗೆ 30 ಸಾವಿರದಿಂದ 40 ಸಾವಿರ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಬಹುದು. ಹಾಗಾಗಿ, ಹೊಸ ಪಕ್ಷ ಸ್ಥಾಪಿಸುವುದರಿಂದ ನನಗೆ ಯಾವುದೇ ಸಮಸ್ಯೆಗಳಿಲ್ಲ” ಎಂದು ಚಂಪೈ ಸೊರೇನ್ ಹೇಳಿದ್ದಾರೆ.
ಈ ಹಿಂದೆ ಎಕ್ಸ್ ಪೋಸ್ಟ್ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದ ಚಂಪೈ ಸೊರೇನ್ “ಜುಲೈ 3ರಂದು ಹೇಮಂತ್ ಸೊರೇನ್ ಜೈಲಿನಿಂದ ಹೊರ ಬಂದ ಬಳಿಕ, ಮುಖ್ಯಮಂತ್ರಿಯಾಗಿದ್ದ ನನ್ನ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ಯಾವುದೇ ಮಾಹಿತಿ ನೀಡದೆ ರದ್ದುಗೊಳಿಸಲಾಗಿತ್ತು. ಈ ಬಗ್ಗೆ ನಾನು ವಿಚಾರಿಸಿದ್ದಕ್ಕೆ ಪಕ್ಷದ ಶಾಸಕರ ಸಭೆ ಇದೆ. ಅಲ್ಲಿಯವರೆಗೆ ನೀವು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಹೇಳಲಾಗಿತ್ತು” ಎಂದು ಬರೆದುಕೊಂಡಿದ್ದರು.
“ಜಾರ್ಖಂಡ್ ಮುಖ್ಯಮಂತ್ರಿಯಾಗಿ ಸಾಕಷ್ಟು ಅವಮಾನ ಸಹಿಸಿದೆ. ತಾನು ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ ಎಲ್ಲಾ ಯೋಜನೆಗಳನ್ನು ಪಕ್ಷದ ಹೈಕಮಾಂಡ್ ರದ್ದುಗೊಳಿಸಿದೆ. ಮುಖ್ಯಮಂತ್ರಿಯೊಬ್ಬರು ಜಾರಿಗೊಳಿಸಿದ ಯೋಜನೆಗಳನ್ನು ಮತ್ತೊಬ್ಬರು ರದ್ದುಗೊಳಿಸುವುದಕ್ಕಿಂತ ದೊಡ್ಡ ಅವಮಾನ ಪ್ರಜಾಪ್ರಭುತ್ವದಲ್ಲಿ ಏನಿದೆ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ : ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ | ಮೂವರು ಆರೋಪಿಗಳ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬ


