ಬಾಂಗ್ಲಾದೇಶದಲ್ಲಿ ಹಿಂದೂ ಪ್ರೊಫೆಸರ್‌ಗೆ ಕುರ್‌ಆನ್ ಓದುವಂತೆ ಒತ್ತಾಯಿಸಲಾಗಿದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋದಲ್ಲಿ ಕಚೇರಿಯೊಂದರಲ್ಲಿ ವ್ಯಕ್ತಿಯೊಬ್ಬರು ಕುಳಿತಿರುವುದು, ಸುತ್ತಲು ಜನರು ಗುಂಪು ಸೇರಿರುವುದು ಮತ್ತು ಗಡ್ಡದಾರಿ ವ್ಯಕ್ತಿಯೊಬ್ಬ ಜೋರಾಗಿ ಕುರ್‌ಆನ್ ಓದುತ್ತಿರುವ ದೃಶ್ಯವಿದೆ.
ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ಬಲಪಂಥೀಯ ಎಕ್ಸ್ ಬಳಕೆದಾರ Jitendra pratap singh(@jpsin1) ಈ ವಿಡಿಯೋ ಹಂಚಿಕೊಂಡು “ಜಮಾತೆ ಇಸ್ಲಾಮಿಯ ವಿದ್ಯಾರ್ಥಿ ಸಂಘಟನೆಯು ಢಾಕಾ ಕಾಲೇಜಿನ ಹಿಂದೂ ಪ್ರೊಫೆಸರ್ ರಾಜೀನಾಮೆಯನ್ನು ಬಹಳ ವಿಚಿತ್ರವಾಗಿ ತೆಗೆದುಕೊಂಡಿದೆ. ಮೊದಲಿಗೆ, ಹಿಂದೂ ಪ್ರೊಫೆಸರ್‌ಗೆ ಕುರ್‌ಆನ್ ಓದುವಂತೆ ಹೇಳಲಾಯಿತು. ಅಂದರೆ, ಕುರಾನ್‌ನ ಶ್ಲೋಕಗಳನ್ನು ಪಠಿಸಲಾಯಿತು. ನಂತರ ಅವರ ರಾಜೀನಾಮೆ ತೆಗೆದುಕೊಳ್ಳಲಾಯಿತು” ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಕುರ್‌ಆನ್ ಓದುವ ಮೂಲಕ ರಾಜೀನಾಮೆ ನೀಡುವಂತೆ ಒತ್ತಾಯಿಸಿರುವುದು ಮುಸ್ಲಿಂ ಪ್ರೊಫೆಸರ್‌ಗೆ ಹೊರತು, ಹಿಂದೂ ಪ್ರೊಫೆಸರ್‌ಗೆ ಅಲ್ಲ. ಇದರಲ್ಲಿ ಯಾವುದೇ ಕೋಮು ಆಯಾಮ ಇಲ್ಲ ಎಂದು ತಿಳಿದು ಬಂದಿದೆ.
ಈ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್ ಶಾಟ್ ಹಾಕಿ ನಾವು ಮಾಹಿತಿ ಹುಡುಕಿದಾಗ ಢಾಕಾ ಪೋಸ್ಟ್ ಎಂಬ ವೆರಿಫೈಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 19ರಂದು ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ಚಾನೆಲ್ ಪ್ರಕಾರ, ಢಾಕಾ ವಿಶ್ವವಿದ್ಯಾನಿಲಯದಲ್ಲಿ ರಂಝಾನ್ ತಿಂಗಳಲ್ಲಿ ಕುರ್‌ಆನ್ ಪಠಿಸಿದ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಂಡಿದ್ದಕ್ಕೆ ಕಲಾ ವಿಭಾಗದ ಡೀನ್ ಪ್ರೊ.ಅಬ್ದುಲ್ ಬಶೀರ್ ಅವರ ರಾಜೀನಾಮೆಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಆಗಸ್ಟ್ 19ರಂದು ಢಾಕಾ ಟ್ರಿಬ್ಯೂನ್.ಕಾಂ ಮಾಡಿರುವ ವರದಿ ಪ್ರಕಾರ, “ವಿದ್ಯಾರ್ಥಿ ಮೇಲೆ ಆಪಾದಿತ ಹಲ್ಲೆ ಮಾಡಿರುವುದು ಮತ್ತು ವಿದ್ಯಾರ್ಥಿಗಳು ಕುರ್‌ಆನ್ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ವಿದ್ಯಾರ್ಥಿ ಸಂಘಟನೆಯವರು ಪ್ರತಿಭಟಿಸಿದ ಹಿನ್ನೆಲೆ ಪ್ರೊ. ಅಬ್ದುಲ್ ಬಶೀರ್ ಅವರು ಢಾಕಾ ವಿವಿಯ ಕಲಾ ವಿಭಾಗದ ಡೀನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದೆ.

ಬಶೀರ್ ಅವರ ರಾಜೀನಾಮೆ ಬಳಿಕ ದೇಶದಲ್ಲಿ ಶಾಂತಿ ನೆಲೆಸಲು, ಕುರ್‌ಆನ್ ವಿರುದ್ದದ ದ್ವೇಷ ಮತ್ತು ಇಸ್ಲಾಮೋಫೋಬಿಕ್ ತೊಲಗಳು ಢಾಕಾ ವಿಶ್ವವಿದ್ಯಾನಿಲಯದಲ್ಲಿ ಕುರ್‌ಆನ್ ಪಠಣ ಮತ್ತು ಪ್ರಾರ್ಥನೆ ನಡೆದಿದೆ ಎಂದು ವರದಿ ತಿಳಿಸಿದೆ.
ಪ್ರೊ. ಬಶೀರ್ ಅವರ ರಾಜೀನಾಮೆ ಕುರಿತು ಭಾರತೀಯ ಮಾಧ್ಯಮಗಳಾದ ಟೈಮ್ಸ್ ನೌ ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ.
ಒಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಢಾಕಾ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಜೀನಾಮೆ ನೀಡಿರುವುದು ಹೌದು. ಆದರೆ, ಅವರು ಹಿಂದೂ ಪ್ರೊಫಸೆರ್ ಅಲ್ಲ, ಮುಸ್ಲಿಂ ಪ್ರೊಫೆಸರ್. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮಗಳಿಲ್ಲ. ಅಲ್ಲದೆ, ಹಿಂದೂ ಪ್ರೊಫೆಸರ್‌ಗೆ ಕುರ್‌ಆನ್ ಓದುವಂತೆ ಒತ್ತಾಯಿಸಲಾಗಿದೆ ಎಂಬುವುದು ಸುಳ್ಳು
ಇದನ್ನೂ ಓದಿ : FACT CHECK : ಸ್ವಾತಂತ್ರ್ಯ ದಿನದಂದು ಶ್ರೀನಗರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂಬುವುದು ಸುಳ್ಳು


