ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಪಕ್ಷಪಾತಿ ನಡೆ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ರಾಜ್ಯಪಾಲರು ತೋರಿದ ಆಸಕ್ತಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ಇತರ ಪ್ರಕರಣಗಳಲ್ಲಿ ಕಂಡು ಬರದ ಹಿನ್ನೆಲೆ, ರಾಜ್ಯಪಾಲರಿಗೆ ಸೂಕ್ತ ನೆರವು ಮತ್ತು ಸಲಹೆ ನೀಡುವ ನಿರ್ಣಯವನ್ನು ಸಚಿವ ಸಂಪುಟ ತೆಗೆದುಕೊಂಡಿದೆ. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಢವಢವ ಶುರುವಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್, “ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಹಲವು ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನೂ ಕೆಲವು ಪ್ರಕರಣಗಳು ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಹೋಗಿದೆ. ಕೆಲವು ತನಿಖಾ ಸಂಸ್ಥೆಗಳ ವರದಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ. ಅನೇಕ ಅನುಮೋದನೆ ಅರ್ಜಿಗಳು ರಾಜ್ಯಪಾಲರ ಸಮಕ್ಷಮದಲ್ಲಿ ಬಾಕಿ ಇವೆ. ಈ ಅರ್ಜಿಗಳಲ್ಲಿ ಕೆಲವು ಚಾರ್ಜ್ಶೀಟ್ ಸಲ್ಲಿಕೆಗೆ ಒಪ್ಪಿಗೆ ಬಾಕಿ ಇವೆ. 1980ರ ಭ್ರಷ್ಟಾಚಾರ ತಡೆಕಾಯ್ದೆ ಸೆಕ್ಷನ್ 19ರಡಿ ಅನುಮೋದನೆಗೆ ಬಾಕಿ ಇದೆ. 17ಎ ಅಡಿಯಲ್ಲೂ ರಾಜ್ಯಪಾಲರ ಪೂರ್ವಾನುಮತಿಗೆ ಬಾಕಿ ಇದೆ. ಆ ಎಲ್ಲ ಪ್ರಕರಣಗಳ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ 163ರ ಅನ್ವಯ ರಾಜ್ಯಪಾಲರಿಗೆ ಸಲಹೆ ಮತ್ತು ನೆರವು ನೀಡಲು ಸಂಪುಟ ಸಭೆ ನಿರ್ಣಯಿಸಿದೆ” ಎಂದು ತಿಳಿಸಿದ್ದಾರೆ.
“ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಲಾಗಿದೆ. ಹೆಚ್‌ಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಲೋಕಾಯುಕ್ತ ಎಸ್‌ಐಟಿಯಿಂದ ಸ್ಪಷ್ಟೀಕರಣ ಕೋರಿದ್ದರು. ಇದಕ್ಕೆ ಅಗತ್ಯವಿರುವ ಸ್ಪಷ್ಟೀಕರಣವನ್ನು ಪತ್ರದ ಮೂಲಕ ಎಸ್‌ಐಟಿ ನೀಡಿದೆ. ಬಾಕಿ ಇರುವ ಪ್ರಾಸಿಕ್ಯೂಷನ್‌ಗೆ ಅನುಮತಿ ಪ್ರಕರಣಗಳ ಬಗ್ಗೆ ಶೀಘ್ರವಾಗಿ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಸಲಹೆ ನೀಡುತ್ತೇವೆ” ಎಂದು ಹೆಚ್.ಕೆ ಪಾಟೀಲ್ ವಿವರಿಸಿದ್ದಾರೆ.
“ಆ.1 ರಂದು ಸಚಿವ ಸಂಪುಟ ಸಭೆ ನಡೆದಿತ್ತು. ಅಂದು ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಸಭೆ ನಡೆಸಲು ಸೂಚಿಸಿದ್ದರು. ಆರ್ಟಿಕಲ್ 163ರ ಅನ್ವಯ ಏಡ್ ಆ್ಯಂಡ್ ಅಡ್ವೈಸ್ ರಾಜ್ಯಪಾಲರಿಗೆ ನೀಡಿದ್ದೆವು. ದೃಢೀಕರಣ ಸಂದರ್ಭದಲ್ಲಿ ಸಿಎಂ ತಾವಿರುವುದು ಸೂಕ್ತ ಅಲ್ಲ ಎಂದು ಸಭೆಯಿಂದ ಹೊರಗೆ ಇದ್ದರು. ಆ ಸಭೆ ಆದ ಬಳಿಕ ಸಂಪುಟದ ನಿರ್ಣಯವನ್ನು ದೃಢೀಕರಿಸಲು ಇಂದು ಸಭೆ ನಡೆದಿದ್ದು, ಆ.1ರ ನಿರ್ಣಯವನ್ನು ದೃಢೀಕರಿಸಿದ್ದೇವೆ” ಎಂದು ಹೇಳಿದ್ದಾರೆ.
“ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತರಾತುರಿಯಲ್ಲಿ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಆದರೆ ಈ ನಾಲ್ಕು ಪ್ರಕರಣದಲ್ಲಿ ತನಿಖೆಯಾಗಿದೆ ಹಾಗೂ ಎರಡು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದರೂ ಏನೂ ಕ್ರಮ ಆಗಿಲ್ಲ. ಹೀಗಿರುವಾಗ ಸಂಪುಟ ಸಲಹೆ ಕೊಡುವುದು ಸೂಕ್ತ” ಎಂದಿದ್ದಾರೆ.
2021ರ ಡಿ.9ರಂದು ಶಶಿಕಲಾ ಜೊಲ್ಲೆ ವಿರುದ್ಧ ಮತ್ತು 2024ರ ಫೆಬ್ರವರಿ 26ರಂದು ಮುರುಗೇಶ್ ನಿರಾಣಿ ವಿರುದ್ಧ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿದೆ. 2023ರ ನವೆಂಬರ್ 21ರಂದು ಹೆಚ್. ಡಿ ಕುಮಾರಸ್ವಾಮಿ ವಿರುದ್ಧವೂ ಅರ್ಜಿ ಸಲ್ಲಿಕೆಯಾಗಿದೆ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಲೋಕಾಯಕ್ತ ಎಸ್‌ಐಟಿ ರಾಜ್ಯಪಾಲರಿಗೆ ಮತ್ತೆ ಮನವಿ ಮಾಡಿದೆ. ನಿನ್ನೆಯ ಸಂಪುಟ ಸಭೆಯ ನಿರ್ಧಾರ ರಾಜ ಭವನ ವರ್ಸಸ್ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಮುನ್ನುಡಿಯಾಗಿದೆ.
ಇದನ್ನೂ ಓದಿ : ಬಿಜೆಪಿ ನಾಯಕರ ಬುಡಕ್ಕೆ ನೀರು ಬಂದಾಗ ಜಾತಿ ನೆನಪಾಗುತ್ತದೆ: ಸಿದ್ದರಾಮಯ್ಯ


