ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದ ಹಿನ್ನೆಲೆ, ಅವರನ್ನು ಬಳ್ಳಾರಿ ಜಿಲ್ಲಾ ಕಾರಾಗೃಹಕ್ಕೆ ಹಾಗೂ ಇತರೆ ಒಂಬತ್ತು ಆರೋಪಿಗಳನ್ನು ರಾಜ್ಯದ ವಿವಿಧ ಜಿಲ್ಲಾ ಕಾರಾಗೃಹಗಳಿಗೆ ಸ್ಥಳಾಂತರಿಸಲು ಮಂಗಳವಾರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮುಖ್ಯ ಮೇಲ್ವಿಚಾರಕರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ನಿರ್ಮಲಾ ಅವರು ಈ ಆದೇಶ ನೀಡಿದ್ದಾರೆ.
ಆರೋಪಿಗಳಾದ ಪವನ್, ರಾಘವೇಂದ್ರ ನಂದೀಶ್ ಅನ್ನು ಮೈಸೂರಿನ ಜಿಲ್ಲಾ ಕಾರಾಗೃಹಕ್ಕೆ, ಜಗದೀಶ್ ಮತ್ತು ಲಕ್ಷ್ಮಣ ಶಿವಮೊಗ್ಗಕ್ಕೆ, ಧನರಾಜ್ ಧಾರವಾಡಕ್ಕೆ, ವಿನಯ್ ವಿಜಯಪುರಕ್ಕೆ, ನಾಗರಾಜ್ ಕಲಬುರಗಿಗೆ ಮತ್ತು ಪ್ರದೂಶ್ ಅನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾಗೌಡ, ಅನುಕುಮಾರ್ ಮತ್ತು ದೀಪಕ್ ಪರಪ್ಪನ ಅಗ್ರಹಾರದಲ್ಲೇ ಉಳಿಯಲಿದ್ದಾರೆ. ಆರೋಪಿಗಳಾದ ರವಿ, ಕಾರ್ತಿಕ್, ನಿಖಿಲ್ ಮತ್ತು ಕೇಶವಮೂರ್ತಿ ಈಗಾಗಲೇ ತುಮಕೂರು ಜೈಲಿನಲ್ಲಿದ್ದಾರೆ.
ದರ್ಶನ್ ಇತರೆ ಕೆಲವು ರೌಡಿ ಶೀಟರ್ ಆರೋಪಿಗಳೊಂದಿಗೆ ಜೈಲಿನ ಆವರಣದೊಳಗೆ ಆರಾಮವಾಗಿ ಕುರ್ಚಿಯ ಮೇಲೆ ಕುಳಿತು ಸಿಗರೇಟು ಸೇದುತ್ತಾ, ಕಾಪಿ ಹೀರುತ್ತಿರುವ ಪೋಟೋ, ರೌಡಿ ಶೀಟರ್ ಪುತ್ರನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ದೃಶ್ಯ ಹಾಗೂ ಬ್ಯಾರಕ್‌ನಲ್ಲಿ ಹಾಸಿಗೆಯ ಮೇಲೆ ಕುಳಿತು ಮೊಬೈಲ್ ನೋಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು.
ಇದನ್ನೂ ಓದಿ : ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ


