ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ವಿವಸ್ತ್ರಳಾಗಿ ಪ್ರತಿಭಟಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಎಂದು indianexpress.com ವರದಿ ಮಾಡಿದೆ.
ಆಗ್ರಾದ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಕಾಲೇಜಿನ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಆರೋಪಿಯನ್ನು ಬಂಧಿಸಿರಲಿಲ್ಲ. ಇದರಿಂದ ಹತಾಶಳಾದ ಆಕೆ, ವಿವಸ್ತ್ರಳಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಕೊನೆಗೂ 17 ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ, ಮೂರು ದಿನಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ವರದಿ ಹೇಳಿದೆ.
ಬಂಧಿತ ಆರೋಪಿ ಜಮ್ಮುವಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಟೆಕ್ ಓದುತ್ತಿರುವ 22 ವರ್ಷದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿರುವ ಲಕ್ನೋ ಮೂಲದ ವಿದ್ಯಾರ್ಥಿನಿ, ಆಗಸ್ಟ್ 10ರಂದು ಸಂಜೆ ಆರೋಪಿ ಚಲಿಸುವ ಕಾರಿನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದ್ದಳು. ಆಗಸ್ಟ್ 11ರಂದು ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸುವ ಗೋಜಿಗೆ ಹೋಗಿರಲಿಲ್ಲ. ವಿದ್ಯಾರ್ಥಿನಿ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ ಸಮಯದಲ್ಲಿ ಆಕೆ ಹೇಳಿದ ಆರೋಪಿಯ ಮೊಬೈಲ್ ಲೊಕೇಶನ್ ಜಮ್ಮುವಿನಲ್ಲಿ ತೋರಿಸುತಿತ್ತು ಎಂದು ಪೊಲೀಸರೇ ಸಮಜಾಯಿಸಿ ನೀಡಿದ್ದರು.
ಬಳಿಕ, ಸಂತ್ರಸ್ತೆ ಆರೋಪಿಯನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಅನೇಕ ಬಾರಿ ಪೊಲೀಸ್ ಠಾಣೆಗೆ ಹೋಗಿದ್ದಳು. ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಳು. ಆದರೂ, ಆಕೆಗೆ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಕೊನೆಗೆ ಹತಾಶಳಾಗಿ ವಿವಸ್ತ್ರಳಾಗುವ ನಿರ್ಧಾರಕ್ಕೆ ಬಂದಳು ಎಂದು ವರದಿ ಹೇಳಿದೆ.
“ನಾವು ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಆಗ್ರಾಕ್ಕೆ ಕರೆ ತಂದಿದ್ದೇವೆ. ಆತ ಕಳೆದ ಕೆಲ ತಿಂಗಳುಗಳಿಂದ ವಿದ್ಯಾರ್ಥಿನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದುದು ನಮಗೆ ಗೊತ್ತಾಗಿದೆ. ಆತನನ್ನು ಬಂಧಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು ಉತ್ತರ ಪ್ರದೇಶದ ಗಾಝಿಪುರ ಜಿಲ್ಲೆಯವನಾಗಿದ್ದು, ಜಮ್ಮು ಐಐಟಿಗೆ ಪ್ರವೇಶ ಪಡೆಯುವ ಮುನ್ನ ಆಗ್ರಾ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಮುಗಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಭಾನುವಾರ ಮಧ್ಯಾಹ್ನ ಸಂತ್ರಸ್ತ ವಿದ್ಯಾರ್ಥಿನಿ ವಿವಸ್ತ್ರಳಾಗಿ ರಸ್ತೆಯಲ್ಲಿ ನಿಂತುಕೊಂಡು ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗುತ್ತಿದ್ದಳು. ಅದನ್ನು ಕಂಡ ಇಬ್ಬರು ಮಹಿಳೆಯರು ಓಡಿ ಬಂದು ಆಕೆಗೆ ಬಟ್ಟೆ ಹೊದಿಸಿ ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದರು. ಆಕೆ ಮಾನಸಿಕವಾಗಿ ನೊಂದಿದ್ದಾಳೆ ಎಂದು ನಾವು ಭಾವಿಸಿದ್ದೇವೆ ಮತ್ತು ಆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದೇವೆ. ಪೊಲೀಸರು ಆಕೆಯನ್ನು ಮಾನಸಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿರುವುದಾಗಿ indianexpress.com ವಿವರಿಸಿದೆ.
“ಭಾನುವಾರ ಸಂಜೆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾವು ಮೂರು ದಿನಗಳ ಕಾಲ ಆಕೆಯ ಮೇಲೆ ನಿಗಾ ಇರಿಸಿದ್ದೆವು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಆಕೆಯ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ. ಅಸಹಜವಾಗಿ ಆಕೆಯಲ್ಲಿ ಏನೂ ಕಂಡು ಬಂದಿಲ್ಲ. ಹಾಗಾಗಿ, ಮಂಗಳವಾರ, ಲಕ್ನೋದಿಂದ ಆಗಮಿಸಿದ್ದ ಆಕೆಯ ತಾಯಿಗೆ ಆಕೆಯನ್ನು ಹಸ್ತಾತರಿಸಿದ್ದೇವೆ” ಎಂದು ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದಾರೆ.
ಅತ್ಯಾಚಾರದ ದೂರು ದಾಖಲಿಸುವ ಮುನ್ನ, ಜುಲೈ 29ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಂದ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ದೂರು ನೀಡಿದ್ದಳು. ನಾವು ಆ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೆವು. ಆಕೆಯ ಆರೋಪ ಬೆಂಬಲಿಸುವ ಯಾವುದೇ ಪುರಾವೆ ನಮಗೆ ಕಂಡು ಬಂದಿರಲಿಲ್ಲ ಎಂದು ಠಾಣಾಧಿಕಾರಿ ಹೇಳಿದ್ದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ಮಲಯಾಳಂ ನಟ ಸಿದ್ದೀಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು


