ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಗಸ್ಟ್ 9, 2024ರಂದು ತರಬೇತಿ ವೈದ್ಯೆಯೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಘಟನೆ ದೇಶದಾದ್ಯಂತ ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಪ್ರಸ್ತುತ ಆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಮಾಡುತ್ತಿದೆ.
ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದು ಅತ್ಯಾಚಾರ, ಕೊಲೆ ಘಟನೆಯ ಸಂತ್ರಸ್ತೆ ವೈದ್ಯೆಯ ಕೊನೆಯ ಕ್ಷಣದ್ದು, ಅಂದರೆ, ಆಕೆ ಸಾಯುವ ಮುನ್ನ ಅಂತಿಮ ಕ್ಷಣದ್ದು ಎಂದು ಹೇಳಲಾಗಿದೆ.
ಆರ್‌ಜಿ ಕರ್ ಘಟನೆಯಲ್ಲಿ ಸಾವನ್ನಪ್ಪಿದ ವೈದ್ಯೆಯಂತೆ ಹೋಲುವ ಮಹಿಳೆಯೊಬ್ಬರು ತನ್ನ ಕತ್ತು ಹಿಡಿದುಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವಂತಹ ದೃಶ್ಯ ಆ ವಿಡಿಯೋದಲ್ಲಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮೃತ ವೈದ್ಯೆಯದ್ದು ಅಲ್ಲ, ಅದು ಕೋಲ್ಕತ್ತಾದ ಮೇಕಪ್ ಕಲಾವಿದೆ ಝೀನತ್ ರಹ್ಮಾನ್ ಎಂಬವರದ್ದಾಗಿದೆ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ನಾವು ಮಾಹಿತಿ ಹುಡುಕಿದಾಗ ಮುದಸ್ಸಿರ್ ದಾರ್ ಎಂಬ ಎಕ್ಸ್ ಬಳಕೆದಾರ ಆಗಸ್ಟ್ 17ರಂದು ವೈರಲ್ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
ಮುದಸ್ಸಿರ್ ಅವರು ತನ್ನ ಪೋಸ್ಟ್‌ನಲ್ಲಿ “ಕೊನೆಯ ಬಾರಿ ಮೃತ ವೈದ್ಯೆ ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವುದು” ಎಂದು ಬರೆದುಕೊಂಡಿದ್ದಾರೆ. ಜೊತೆ ಒರಿಜಿನಲ್ ವಿಡಿಯೋ ಸೃಷ್ಟಿಸಿರುವುದು ಝೀನತ್ ರಹ್ಮಾನ್ ಎಂದು ತಿಳಿಸಿದ್ದಾರೆ.

ಆಗಸ್ಟ್ 18,2024ರಂದು ಮುನ್ನಿ ಠಾಕೂರ್ ಎಂಬ ಫೇಸ್‌ಬುಕ್ ಬಳಕೆದಾರರು ವೈರಲ್ ವಿಡಿಯೋ ಪೋಸ್ಟ್ ಮಾಡಿದ್ದರು. ಅಲ್ಲೂ ಒರಿಜಿನಲ್ ವಿಡಿಯೋ ಸೃಷ್ಟಿಸಿದವರು ಝೀನತ್ ರಹ್ಮಾನ್ ಎಂದು ಬರೆದುಕೊಂಡಿದ್ದರು.
ಝೀನತ್ ರಹ್ಮಾನ್ ಎಂಬವರ ಬಗ್ಗೆ ಮಾಹಿತಿ ಹುಡುಕಿದಾಗ, ಅವರು ಕೋಲ್ಕತ್ತಾದ ಮೇಕಪ್ ಕಲಾವಿದೆಯಾಗಿದ್ದು, ಬಹಳ ಹಿಂದಿನಿಂದಲೂ ಅತ್ಯಾಚಾರದ ಕೃತ್ಯಗಳ ವಿರುದ್ದ ವಿಶಿಷ್ಟ ರೀತಿಯಲ್ಲಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ. ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಿದಾಗ ಅನೇಕ ವಿಡಿಯೋಗಳು ಕಂಡು ಬಂದಿವೆ.
ಒಟ್ಟಿನಲ್ಲಿ, ಇತರ ಹಲವು ಅತ್ಯಾಚಾರ ಘಟನೆಗಳನ್ನು ವಿಶಿಷ್ಟ ರೀತಿಯಲ್ಲಿ ಖಂಡಿಸಿದಂತೆ ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಘಟನೆಯನ್ನು ವಿಶಿಷ್ಟ ಮೇಕಪ್, ನಟನೆಯ ಮೂಲಕ ಕಲಾವಿದೆ ಝೀನತ್ ಖಂಡಿಸಿದ್ದಾರೆ. ಅದರ ವಿಡಿಯೋವನ್ನು ಕೆಲವರು ಆರ್‌ಜಿ ಕರ್ ಆಸ್ಪತ್ರೆಯ ಘಟನೆಯ ಸಂತ್ರಸ್ತೆಯ ನಿಜವಾದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.
ಗಮನಿಸಿ : ಸಾಮಾಜಿಕ ಜಾಲತಾಣ ಪೋಸ್ಟ್‌ಗಳಲ್ಲಿ ಕೋಲ್ಕತ್ತಾ ಅತ್ಯಾಚಾರ, ಕೊಲೆ ಸಂತ್ರಸ್ತೆಯ ಫೋಟೋ ಮತ್ತು ಹೆಸರು ಇರುವುದರಿಂದ, ನಾವು ಅವುಗಳ ಸ್ಕ್ರೀನ್ ಶಾಟ್ ಮತ್ತು ಲಿಂಕ್ ಅನ್ನು ಸುದ್ದಿಯಲ್ಲಿ ಸೇರಿಸಿಲ್ಲ
ಇದನ್ನೂ ಓದಿ : FACT CHECK : ರಾಹುಲ್ ಗಾಂಧಿ ಯಾವತ್ತೂ ಹಿಂದೂ ದೇವರ ಪೋಟೋ ಪೋಸ್ಟ್ ಮಾಡಿಲ್ವಾ? ಸತ್ಯಾಸತ್ಯತೆ ಏನು?


