ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯ ಕುರಿತು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ ರಷ್ಯಾದ ವಾರ್ತಾಪತ್ರಿಕೆಯ ಪ್ರಕಾಶಕರೊಬ್ಬರನ್ನು ಶುಕ್ರವಾರ ಸೈಬೀರಿಯಾದ ನ್ಯಾಯಾಲಯ ತಪ್ಪಿತಸ್ಥನೆಂದು ಘೋಷಿಸಿ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ವರದಿಗಳು ಹೇಳಿವೆ.
ಗೊರ್ನೊ-ಅಲ್ಟೈಸ್ಕ್ ನಗರದ ನ್ಯಾಯಾಲಯವು ಅಲ್ಟಾಯ್‌ನ ಸೈಬೀರಿಯನ್ ಪ್ರದೇಶದ ಪ್ರಮುಖ ಪತ್ರಕರ್ತ ಮತ್ತು ಸ್ಥಳೀಯ ಪತ್ರಿಕೆಯಾದ ಲಿಸ್ಟಾಕ್ ಅಥವಾ ರಷ್ಯನ್ ಭಾಷೆಯ “ಕರಪತ್ರ” ದ ಪ್ರಕಾಶಕ ಸೆರ್ಗೆಯ್ ಮಿಖೈಲೋವ್ ಅವರನ್ನು ರಷ್ಯಾ ಸೈನ್ಯದ ಬಗ್ಗೆ “ಸುಳ್ಳು ಮಾಹಿತಿ ಹರಡಿದ” ಅಪರಾಧಿ ಎಂದು ತೀರ್ಪು ನೀಡಿದೆ ಎಂದು ನೆಟ್ ಫ್ರೀಡಮ್ಸ್ ಹಕ್ಕುಗಳ ಗುಂಪು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ಕೆಲ ದಿನಗಳ ನಂತರ ಅಳವಡಿಸಿಕೊಂಡ ಹೊಸ ಕಾನೂನಿನ ಪ್ರಕಾರ, ರಷ್ಯಾದಲ್ಲಿ ಯುದ್ಧವನ್ನು ಟೀಕಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಅನೇಕ ಪತ್ರಕರ್ತರು ಸೇರಿದಂತೆ ನೂರಾರು ರಷ್ಯನ್ನರನ್ನು ಈ ಕಾನೂನಡಿ ವಿಚಾರಣೆಗೆ ಒಳಪಡಿಸಲಾಗಿದೆ.
ರಾಜಕೀಯ ಬಂಧನಗಳನ್ನು ಪತ್ತೆಹಚ್ಚುವ ರಷ್ಯಾದ ಪ್ರಮುಖ ಹಕ್ಕುಗಳ ಗುಂಪುಗಳಲ್ಲಿ ಒಂದಾಗಿರುವ OVD-Info ಪ್ರಕಾರ, ಫೆಬ್ರವರಿ 2022ರಲ್ಲಿ ಅಳವಡಿಸಿಕೊಂಡ ಕಾನೂನಡಿ, ಯುದ್ಧ ವಿರೋಧಿಸಿದ ಕಾರಣಕ್ಕೆ 1000ಕ್ಕೂ ಹೆಚ್ಚು ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ನೆಟ್ ಫ್ರೀಡಮ್ಸ್ ಪ್ರಕಾರ, ಉಕ್ರೇನ್‌ನಲ್ಲಿ ನಾಗರಿಕರ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯ ಕುರಿತು ತನ್ನ ಸಾಮಾಜಿಕ ಮಾಧ್ಯಮ ಖಾತೆ ಮತ್ತು ವೆಬ್‌ಸೈಟ್‌ನಲ್ಲಿ ಸರಣಿ ವರದಿ ಪ್ರಕಟಿಸಿದ ಬಳಿಕ ಲಿಸ್ಟಾಕ್ ಪತ್ರಿಕೆ ಪ್ರಕಾಶಕ ಮಿಖೈಲೋವ್ ಅವರನ್ನು ಈ ವರ್ಷದ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.
ಕಳೆದ ಬುಧವಾರ ನ್ಯಾಯಾಲಯಕ್ಕೆ ತನ್ನ ಕೊನೆಯ ಹೇಳಿಕೆ ನೀಡಿರುವ ಪತ್ರಕರ್ತ ಮಿಖೈಲೋವ್ “ನನ್ನ ದೇಶದ ಜನರಿಗೆ ಪ್ರಸ್ತುತ ನಡೆಯುತ್ತಿರುವ ಯುದ್ಧದ ಕುರಿತು ಸತ್ಯ ತಿಳಿಸಲು ಮತ್ತು ರಷ್ಯಾದ ರಕ್ಷಣೆ ಎಂಬ ಪ್ರೊಪಗಂಡ ಆಧಾರಿತ ಸುಳ್ಳುಗಳಿಂದ ಅವರನ್ನು ರಕ್ಷಿಸಲು ನಾನು ಸುದ್ದಿ ಪ್ರಕಟಿಸಿದೆ” ಎಂದು ಹೇಳಿದ್ದಾಗಿ ರಷ್ಯಾದ ಸ್ವತಂತ್ರ ಸುದ್ದಿವಾಹಿನಿ ಮೆಡುಜಾ ತಿಳಿಸಿದೆ.
“ಸತ್ಯ ಕಹಿಯಾಗಿದ್ದರೂ ಇಷ್ಟು ವರ್ಷಗಳಲ್ಲಿ ನಾನು ಅದನ್ನೇ ಬರೆಯುತ್ತಿದ್ದೇನೆ ಎಂದು ಮಿಖೈಲೋವ್ ನ್ಯಾಯಾಲಯಕ್ಕೆ ಹೇಳಿದ್ದಾರೆ” ಎಂದು ಮೆಡುಜಾ ವರದಿ ಮಾಡಿದೆ.
ಇದನ್ನೂ ಓದಿ : ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ; ಕುಸ್ತಿಪಟು ವಿನೇಶಾ ಫೋಗಟ್‌ಗೆ ಹಾರ ಹಾಕಿ ಸ್ವಾಗತಿಸಿದ ಹೋರಾಟಗಾರರು


