ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಹಾಗೂ ಹಿಂದುತ್ವ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ ಎಂದು ವರದಿಗಳು ಹೇಳಿವೆ.
ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ 47 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅರುಣ್ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆಯ ದೂರು ಆಧರಿಸಿ ಪೊಲೀಸರು ಅರುಣ್ ಕುಮಾರ್ ವಿರುದ್ದ ಹಳೆಯ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 417, 354ಎ ಮತ್ತು 506ರ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಹೊಸ ಕ್ರಿಮಿನಲ್ ಕಾನೂನು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಯಾಗುವ ಮುನ್ನ ಪ್ರಕರಣ ನಡೆದಿರುವುದರಿಂದ ಐಪಿಸಿ ಅಡಿಯೇ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಅರುಣ್ ಕುಮಾರ್ ಪುತ್ತಿಲ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದು ಎನ್ನಲಾಗಿದ್ದ ಆಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.
ಮಹಿಳೆ ನೀಡಿರುವ ದೂರಿನಲ್ಲಿ ಏನಿದೆ?
ಅರುಣ್ ಕುಮಾರ್ ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಯಿಂದ ಮಹಿಳೆ ಅವರ ಅಭಿಮಾನಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದರು. ಜೊತೆಗೆ ಪುತ್ತಿಲಗೆ ನೈತಿಕ ಬೆಂಬಲವನ್ನೂ ನೀಡುತ್ತಿದ್ದರು. ಬಳಿಕ ಪರಿಚಯವಾದ ಮೇಲೆ ಪುತ್ತಿಲ ಅವರು 2023ರ ಜೂನ್‌ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಈದಿನ.ಕಾಂ ವರದಿ ಮಾಡಿದೆ.
ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಪುತ್ತಿಲ :
ಅರುಣ್ ಕುಮಾರ್ ಪುತ್ತಿಲ ಮತ್ತು ಮಹಿಳೆಯೊಬ್ಬರ ನಡುವೆ ನಡೆದಿದೆ ಎನ್ನಲಾಗಿದ್ದ ಮಾತುಕತೆಯ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಆ ಬಳಿಕ ಪುತ್ತಿಲ ಪರಿವಾರದಿಂದ ತನಗೆ ಬೆದರಿಕೆ ಇದೆ ಎಂದು ಮಹಿಳೆ ಪೊಲೀಸ್ ಠಾಣೆಗೆ ತೆರಳಿದ್ದ ಬಗ್ಗೆ ವರದಿಯಾಗಿತ್ತು. ಈ ಬೆಳವಣಿಗೆಯ ನಡುವೆ, ತನ್ನ ವಿರುದ್ದ ಮಾನಹಾನಿಕರ ಸುದ್ದಿ ಪ್ರಕಟಿಸಿದಂತೆ ಅರುಣ್ ಕುಮಾರ್ ಬೆಂಗಳೂರಿನ 7ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇದರ ಬೆನ್ನಲ್ಲೇ ಪುತ್ತಿಲ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿರುವ ಬಗ್ಗೆ ವರದಿಯಾಗಿದೆ.
ಅರುಣ್ ಕುಮಾರ್ ಪುತ್ತಿಲ ಯಾರು?
ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಹಿಂದುತ್ವ ಮುಖಂಡ. ತನ್ನದೇ ‘ಪುತ್ತಿಲ ಪರಿವಾರ’ ಎಂಬ ತಂಡ ಕಟ್ಟಿಕೊಂಡು ಹಿಂದುತ್ವದ ಕಾರ್ಯಗಳಲ್ಲಿ ತೊಡಿಗಿಸಿಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಮಹಿಳೆಯೊಬ್ಬರನ್ನು ಕಣಕ್ಕಿಳಿಸಿತ್ತು. ಇದರಿಂದ ಅಸಮಾಧಾನಗೊಂಡ ಪುತ್ತಿಲ, ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ, ಅವರು ಗೆಲುವು ಸಾಧಿಸಿರಲಿಲ್ಲ. ಚುನಾವಣೆಯಲ್ಲಿ ಸೋತರೂ, ಹೆಚ್ಚು ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗುವ ಮೂಲಕ ಬಿಜೆಪಿ ನಾಯಕರಿಗೆ ಪುತ್ತಿಲ ತನ್ನ ಶಕ್ತಿ ತೋರ್ಪಡಿಸಿದ್ದರು. ಬಿಜೆಪಿ ಮತ್ತು ಪುತ್ತಿಲ ಪರಿವಾರದ ಜಟಾಪಟಿಯ ಲಾಭ ಪಡೆದ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು.
ನಂತರ 2024ರ ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ನೀಡದಿದ್ದರೆ ವಿಧಾನಸಭೆ ಚುನಾವಣೆಯಂತೆ ಬಂಡಾಯವಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದರು. ಈ ವೇಳೆ ಬಿಜೆಪಿ ದಕ್ಷಿಣ ಕನ್ನಡದ ಅಭ್ಯರ್ಥಿಯನ್ನು ಬದಲಿಸಿತ್ತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಬದಲಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಿತ್ತು. ನಳಿನ್ ಕುಮಾರ್‌ಗೆ ಟಿಕೆಟ್ ತಪ್ಪಿದ ಬಳಿಕ ಹಠಾತ್ ಬೆಳವಣಿಗೆಯಲ್ಲಿ ಅರುಣ್ ಕುಮಾರ್ ಬಿಜೆಪಿ ಸೇರಿ ಹೊಸ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಬೆಂಬಲಿಸಿದ್ದರು. ಅರುಣ್ ಕುಮಾರ್ ಬಿಜೆಪಿ ಸೇರಿದರೂ, ಅವರ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಶೀತಲ ಸಮರ ಮುಂದುವರೆದಿದೆ. ಈ ನಡುವೆ ಅವರ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ‘ಮಲಯಾಳಂ ಚಿತ್ರರಂಗದಲ್ಲಿ ಪವರ್ ಗ್ರೂಪ್ ಇಲ್ಲ..’; ಜಸ್ಟೀಸ್ ಹೇಮಾ ಸಮಿತಿ ವರದಿ ಕುರಿತು ಮೌನ ಮುರಿದ ನಟ ಮಮ್ಮುಟ್ಟಿ


