ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಇಂದು ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಯ ಮೊದಲನೇ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಚಾಲನೆ ನೀಡಿದರು.
ಉದ್ಘಾಟನೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “2026-27 ರೊಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ” ಎಂದು ತಿಳಿಸಿದರು.
“ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆಯನ್ನು ಚಿಕ್ಕಬಳ್ಳಾಪುರದಲ್ಲಿ ತಾನೇ ನಿರ್ವಹಿಸಿ, ಇಂದು ಮೊದಲನೇ ಹಂತದ ಯೋಜನೆಯನ್ನು ಸಂತೋಷದಿಂದ ಉದ್ಘಾಟಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಈ ಯೋಜನೆಯ ಪರಿಷ್ಕೃತ ಅಂದಾಜು ₹23252 ಕೋಟಿಗಳಾಗಿದ್ದು, ಇದುವರೆಗೆ ₹16152ಕೋಟಿ ವೆಚ್ಚವಾಗಿದ್ದು, ಇನ್ನುಳಿದ ₹6-7 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು” ಎಂದರು.
“ಸಕಲೇಶಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಯೋಜನೆಗೆ ಇಲ್ಲಿನ ನೀರು ಬಳಸಿಕೊಳ್ಳಲಾಗುತ್ತಿದೆ. ಈ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡುವ ಬೇಡಿಕೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನೀರು ಕೊರತೆಯಿರುವ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದಾಗಿದ್ದು, ರಾಜ್ಯದ ಜನರಿಗೆ ಪ್ರಯೋಜನಕಾರಿಯಾಗಿದೆ” ಎಂದರು.
ಕಾಂಗ್ರೆಸ್ ಪಕ್ಷದ ಕನಸಿನ ಕೂಸು, 7 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಬದಲಿಸುವ "ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ"ಯ ಹಂತ-1ಕ್ಕೆ ಚಾಲನೆ ನೀಡಿ ಮಾತನಾಡಿದೆ.
ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ. ಇದು ಎರಡು ಹಂತದ ಯೋಜನೆ. ಮೊದಲ ಹಂತ ಇಂದು… pic.twitter.com/w4Wbxp1645
— Siddaramaiah (@siddaramaiah) September 6, 2024
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, “ನಮ್ಮ ಸರ್ಕಾರದ ತಪಸ್ಸು, ಪ್ರತಿಜ್ಞೆ, ಸಂಕಲ್ಪದಿಂದ ಇಂದು ಬಯಲುಸೀಮೆಗೆ ನೀರುಣಿಸುವ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಲೋಕಾರ್ಪಣೆಗೊಂಡಿದೆ. ಗೌರಿ ಹಬ್ಬದ ಈ ಪವಿತ್ರದಿನದಂದು ಎತ್ತಿನಹೊಳೆ ಯೋಜನೆ ಮೂಲಕ ಗಂಗೆ, ಗೌರಿಯನ್ನು ಒಂದು ಮಾಡಿದ್ದೇವೆ. ಈ ಯೋಜನೆಯಿಂದ ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಲ್ಲೆಗಳ ನೀರಿನ ಬವಣೆ ನೀಗಲಿದೆ. ಒಟ್ಟು 7 ಜಿಲ್ಲೆಗಳ 29 ತಾಲೂಕುಗಳಲ್ಲಿ ಬರುವ 6657 ಗ್ರಾಮಗಳು ಹಾಗೂ 38 ಪಟ್ಟಣ ಪ್ರದೇಶಗಳಲ್ಲಿನ 75 ಲಕ್ಷ ಜನರಿಗೆ ಈ ಯೋಜನೆಯಿಂದ ಪ್ರಯೋಜನ ಸಿಗಲಿದೆ. ನಾವು ನುಡಿದಂತೆ ನಡೆದಿದ್ದು, ಇದಕ್ಕೆ ಈ ಯೋಜನೆ ಸಾಕಾರಗೊಂಡಿರುವುದೇ ಸಾಕ್ಷಿ” ಎಂದರು.
“10 ವರ್ಷ ತಪಸ್ಸನ್ನ ಮಾಡಿ, ನೂರಾರು ಟೀಕೆಗಳನ್ನು ಎದುರಿಸಿ ಈ ಯೋಜನೆಯನ್ನು ಜನರಿಗೆ ಅರ್ಪಿಸಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಎತ್ತಿನಹೊಳೆ ಯೋಜನೆ ಒಂದು ನಿದರ್ಶನ. ಪಶ್ಚಿಮಘಟ್ಟದಿಂದ ಪೂರ್ವಕ್ಕೆ ನೀರನ್ನು ಹರಿಸುವುದು ಅಷ್ಟು ಸಲಭದ ಮಾತಲ್ಲ. ಆದರೆ, ನಮ್ಮ ಗುರಿ, ಛಲದೊಂದಿಗೆ ನೀರು ಹರಿಸುವ ಕಾರ್ಯವನ್ನು ಯಶಸ್ವಿಗೊಳಿಸಿದ್ದೇವೆ. ಈ ವರ್ಷ ಎತ್ತಿನಹೊಳೆ ಯೋಜನೆಯ ಶೇ.50ರಷ್ಟು ಕಾಮಗಾರಿ ಪೂರ್ಣಗೊಳ್ಳಲಿದ್ದು, ಹೆಚ್ಚಿನ ನೀರು ಸಂಗ್ರಹಿಸುವ ಪ್ರಯತ್ನವೂ ನಡೆಯುತ್ತಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಇಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದೆ.
ಇದನ್ನೂ ಓದಿ; ಆರೋಗ್ಯ ವಿಮಾ ಕಂತುಗಳ ಜಿಎಸ್‌ಟಿ ವಿನಾಯಿತಿಗೆ ಸಚಿವ ದಿನೇಶ್ ಆಗ್ರಹ; ಪ್ರಧಾನಿಗೆ ಪತ್ರ


