ಹರಿಯಾಣ ರಾಜ್ಯ ಬಿಜೆಪಿ ಉಪಾಧ್ಯಕ್ಷ ಜಿ.ಎಲ್.ಶರ್ಮಾ ಭಾನುವಾರ ಕಾಂಗ್ರೆಸ್ ಸೇರಿದ್ದಾರೆ. ಶರ್ಮಾ ಅವರೊಂದಿಗೆ 250ಕ್ಕೂ ಹೆಚ್ಚು ಪದಾಧಿಕಾರಿಗಳು, ಬಿಜೆಪಿ ಮತ್ತು ಇತರ ಸಂಘಟನೆಗಳ ಹಲವಾರು ಕಾರ್ಯಕರ್ತರು ಕೂಡ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಾರೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ಶರ್ಮಾ ಅವರು ಹರಿಯಾಣ ಸರ್ಕಾರದಲ್ಲಿ ಡೈರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಮಾಜಿ ಸಿಎಂ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಅವರು ಜಿ.ಎಲ್.ಶರ್ಮಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
“ದೇಶದಲ್ಲಿ ಎಲ್ಲಾ ಸಮುದಾಯಗಳ ಹಿತಾಸಕ್ತಿ ಕಾಪಾಡುವ ಏಕೈಕ ಪಕ್ಷ ಕಾಂಗ್ರೆಸ್. ಉದ್ಯೋಗ, ಅಭಿವೃದ್ಧಿ, ಕ್ರೀಡೆ ಮತ್ತು ಬಂಡವಾಳ ಹೂಡಿಕೆಯಲ್ಲಿ ರಾಜ್ಯವನ್ನು ಮತ್ತೆ ಮೊದಲ ಸ್ಥಾನಕ್ಕೆ ತರಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ” ಎಂದು ಹೂಡಾ ಹೇಳಿದ್ದಾರೆ.
ಜಿ.ಎಲ್.ಶರ್ಮಾ ಜೊತೆ ಬಿಜೆಪಿ ಗುರುಗ್ರಾಮ ಜಿಲ್ಲಾ ಕಾರ್ಯದರ್ಶಿ ಮಹೇಶ್ ವಶಿಷ್ಠ್, ರೋಹ್ಟಕ್ ಲೋಕಸಭಾ ಕ್ಷೇತ್ರದ ಐಟಿ ಸೆಲ್ ಮುಖ್ಯಸ್ಥ ಪ್ರವೀಣ್ ಮುದ್ಗಿಲ್, ಕಾನೂನು ಕೋಶದ ಬೇನಿ ಪ್ರಸಾದ್ ಗೌರ್, ಗುರುಗ್ರಾಮ ಪ್ರಜಾಪತಿ ಸಮಾಜದ ಅಧ್ಯಕ್ಷ ಬಸ್ತಿರಾಮ್ ಮತ್ತು ಇತರರು ಕಾಂಗ್ರೆಸ್ ಸೇರಿದ್ದಾರೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ‘ಕಾಂಗ್ರೆಸ್ ತೊರೆಯಿರಿ’ ಎಂದು ಬಜರಂಗ್ ಪುನಿಯಾಗೆ ಜೀವ ಬೆದರಿಕೆ ಸಂದೇಶ


