ಶ್ರೀಲಂಕಾ ನೌಕಾಪಡೆಯಿಂದ ಬಂಧಿತರಾಗಿರುವ ಮೀನುಗಾರರನ್ನು ಬಿಡುಗಡೆಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಪದೇಪದೆ ಇಂಥ ಬಂಧನಗಳು ಆತಂಕಕಾರಿ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ದೋಣಿಗಳನ್ನು ಬಿಡುಗಡೆ ಮಾಡುವಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಮೀನುಗಾರರಿಗೆ ವಿಧಿಸಲಾದ ದಂಡವನ್ನು ತಪ್ಪಿಸುವಂತೆ ಜೈಶಂಕರ್ ಅವರನ್ನು ವಿನಂತಿಸಿದರು.
“ಸೆಪ್ಟೆಂಬರ್ 7 ರಂದು, ಶ್ರೀಲಂಕಾ ನೌಕಾಪಡೆಯು ನಮ್ಮ ಮೂರು ಯಾಂತ್ರೀಕೃತ ಮೀನುಗಾರಿಕೆ ದೋಣಿಗಳೊಂದಿಗೆ ಪುದುಕೊಟ್ಟೈನಿಂದ ಬರೋಬ್ಬರಿ 14 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿತು. 2024 ರಲ್ಲಿ 350 ಮೀನುಗಾರರು ಮತ್ತು 49 ಮೀನುಗಾರಿಕಾ ದೋಣಿಗಳನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ, ಇದು ಕಳೆದ ಆರು ವರ್ಷಗಳಲ್ಲಿ ಅತಿ ಹೆಚ್ಚು. ಶ್ರೀಲಂಕಾ ನ್ಯಾಯಾಲಯಗಳು ನಮ್ಮ ಮೀನುಗಾರರಿಗೆ ಸಾಮರ್ಥ್ಯ ಮೀರಿದ ಭಾರಿ ದಂಡವನ್ನು ವಿಧಿಸುತ್ತಿವೆ” ಎಂದು ಮುಖ್ಯಮಂತ್ರಿ ಹೇಳಿದರು.
ಅಂತಹ ಬಂಧನಗಳು ದೀರ್ಘಾವಧಿಯ ಸೆರೆವಾಸಕ್ಕೆ ಕಾರಣವಾಗುತ್ತವೆ ಮತ್ತು ಅವರ ಕುಟುಂಬಗಳಿಗೆ ಸಂಕಟವನ್ನು ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ಅಧಿಕಾರಿಗಳ ವಶದಲ್ಲಿರುವ ಎಲ್ಲ ಮೀನುಗಾರರು ಮತ್ತು ದೋಣಿಗಳನ್ನು ಬಿಡುಗಡೆ ಮಾಡಲು ತಕ್ಷಣ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುವಂತೆ ಜೈಶಂಕರ್ ಅವರನ್ನು ಸ್ಟಾಲಿನ್ ಒತ್ತಾಯಿಸಿದರು. ಯಾವುದೇ ವಿಳಂಬವಿಲ್ಲದೆ ಅವರ ಜಂಟಿ ಕಾರ್ಯ ಸಮೂಹವನ್ನು ಪುನರುಜ್ಜೀವನಗೊಳಿಸುವ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ, ಆಗಸ್ಟ್ 5 ರಂದು 12 ಮೀನುಗಾರರನ್ನು ಬಂಧಿಸಿದ ನಂತರ ತರುವೈಕುಲಂನಲ್ಲಿ ಮೀನುಗಾರರ ಕುಟುಂಬಗಳು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಕಾನೂನು ಪ್ರಕ್ರಿಯೆ ಅನುಸರಿಸಿ, 12 ಮೀನುಗಾರರಿಗೆ 42 ಲಕ್ಷ ರೂಪಾಯಿ ದಂಡ ಅಥವಾ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಆದೇಶಿಸಲಾಗಿದೆ.
“ಕಳೆದ 35 ದಿನಗಳಿಂದ ಅವರ ಸ್ಥಿತಿಯ ಬಗ್ಗೆ ನಮಗೆ ತಿಳಿದಿಲ್ಲ. ತಲಾ 42 ಲಕ್ಷ ಜಾಮೀನು ಮೊತ್ತವನ್ನು ವಿಧಿಸಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ನಾವು ಅಷ್ಟೊಂದು ಶ್ರೀಮಂತರಲ್ಲ, ಹಲವು ಮನವಿಗಳನ್ನು ನೀಡಿದರೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಪರಿಹಾರ ಸಿಗದ ಕಾರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ” ಎಂದು ಬಂಧಿತ ಮೀನುಗಾರರಲ್ಲಿ ಒಬ್ಬರಾದ ಅಂಥೋಣಿ ರಾಜ್ ಅವರ ಪತ್ನಿ ಝಾನ್ಸಿ ರಾಣಿ ಹೇಳಿದ್ದಾರೆ. “ಯಾವುದೇ ದಂಡವಿಲ್ಲದೆ ಮೀನುಗಾರರನ್ನು ಮರಳಿ ಕರೆತರುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ; ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ರಮೇಶ್ ಜಾರಕಿಹೊಳಿ ಪ್ರಕರಣಗಳ ವಿಚಾರಣೆ ಮುಂದೂಡಿಕೆ


