ಚೆನ್ನೈನಲ್ಲಿ ತಮ್ಮ ಹತ್ತು ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ದಂಪತಿಗೆ ಪೊಲೀಸರು ಥಳಿಸಿರುವ ಆರೋಪ ಕೇಳಿ ಬಂದಿದೆ.
ದಂಪತಿ ಆಗಸ್ಟ್ 31ರಂದು ಮುಂಜಾನೆ ದೂರು ದಾಖಲಿಸಲು ಅಣ್ಣಾನಗರ ಮಹಿಳಾ ಠಾಣೆಗೆ ತೆರಳಿದ್ದರು. ಈ ವೇಳೆ ಪೊಲೀಸರು ಥಳಿಸಿರುವುದಾಗಿ ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಪೊಲೀಸರು ನಮಗೆ ಥಳಿಸಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಹೇಳಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಸಂತ್ರಸ್ತೆಯ ತಾಯಿ “ಪೊಲೀಸರು ನನ್ನ ಕೈ ತಿರುವಿದರು, ಅವರು ಹೇಳಿಕೊಟ್ಟಂತೆ ಹೇಳಲು ಸೂಚಿಸಿದರು. ವೈದ್ಯರು ಹೇಳಿರುವುದನ್ನು ನಾನು ಅವರಿಗೆ ಹೇಳಿದೆ. ಇನ್ಸ್‌ಪೆಕ್ಟರ್ ನನ್ನನ್ನು ದುರಹಂಕಾರಿ ಎಂದು ಕರೆದರು ಮತ್ತು ನನ್ನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರು. ನನ್ನ ಮಗಳನ್ನು ಸರಿಯಾಗಿ ಬೆಳೆಸಿಲ್ಲ ಎಂದು ಮೂರು ವರ್ಷಗಳ ಕಾಲ ಜೈಲಿಗೆ ಹಾಕುವುದಾಗಿ ಹೇಳಿದರು” ಎಂದಿದ್ದಾರೆ. ಸಂತ್ರಸ್ತೆಯ ತಂದೆಗೂ ಅದೇ ದಿನ ಪೊಲೀಸರು ಥಳಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು “ಏಕೆ ಹೊಡೆಯುತ್ತಿದ್ದೇವೆ ಗೊತ್ತಾ? ಎಂದು ಕೇಳುತ್ತಾ ನನಗೆ ಹೊಡೆದರು” ಎಂದಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ತಿಳಿಸಿದೆ.
ಪ್ರಕರಣದ ಕುರಿತು ಮಾತನಾಡಿರುವ ಪಶ್ಚಿಮ ಚೆನ್ನೈನ ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಅವರು “ಇನ್‌ಸ್ಪೆಕ್ಟರ್ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮರಾ ಇರಲಿಲ್ಲ. ಆದರೂ, ನಾವು ಇತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಪೊಲೀಸರು ಸಂತ್ರಸ್ತೆಯ ಪೋಷಕರಿಗೆ ಥಳಿಸಿರುವ ಬಗ್ಗೆ ನಮಗೆ ಯಾವುದೇ ಪುರಾವೆಗಳು ಕಂಡು ಬಂದಿಲ್ಲ. ಇನ್ಸ್‌ಪೆಕ್ಟರ್ ಅವರೊಂದಿಗೆ ಕಟುವಾಗಿ ಮಾತನಾಡಿದ್ದಾರೆಯೇ? ಎಂದು ಪರಿಶೀಲಿಸಿದ್ದೇವೆ. ಆ ಬಗ್ಗೆಯೂ ನಮಗೆ ಯಾವುದೇ ಮಾಹಿತಿ ದೊರೆತಿಲ್ಲ. ಇನ್ಸ್‌ಪೆಕ್ಟರ್ ತನ್ನ ಕೆಲಸವನ್ನು ಮಾಡಿದ್ದಾರೆ” ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸಂತ್ರಸ್ತ ಬಾಲಕಿ ಅನಾರೋಗ್ಯಕ್ಕೆ ಒಳಗಾಗಿದ್ದಳು. ಆಗಸ್ಟ್ 29ರಂದು ಆಕೆಯನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯ ಬಗ್ಗೆ ವೈದ್ಯರು ಹೇಳಿದ್ದಾರೆ ಮತ್ತು ಆಕೆಯನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಕೆಎಂಸಿ) ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅಲ್ಲಿಗೆ ತೆರಳಿದಾಗ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು, ಅತ್ಯಾಚಾರ ನಡೆದಿರುವುದನ್ನು ದೃಢೀಕರಿಸಿ ಅಣ್ಣಾನಗರ ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆ ಆರಂಭದಲ್ಲಿ ತಮ್ಮ ಏರಿಯಾದಲ್ಲಿ ನೀರಿನ ಕ್ಯಾನ್‌ಗಳನ್ನು ವಿತರಿಸುವ ಸತೀಶ್ ಎಂಬಾತ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಳು. ಬಳಿಕ, ಆಕೆ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.
ಬಾಲಕಿ ಹೇಳಿಕೆ ಬದಲಿಸಿದರೂ, ಆಕೆಯ ತಾಯಿ ಮಾತ್ರ ಸತೀಶ್ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಸಿದ್ದರು. ಅಂದೇ ಪೊಲೀಸರು ಅವರಿಗೆ ಥಳಿಸಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಹೇಳಿದ್ದಾರೆ.
ಆಗಸ್ಟ್ 30ರಂದು ಸತೀಶ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿತ್ತು. ಆದರೆ, ಸಂತ್ರಸ್ತೆ ಹೇಳಿಕೆ ಹಿಂಪಡೆದಿದ್ದರಿಂದ ಆತನನ್ನು ಬಂಧಿಸಿರಲಿಲ್ಲ. ಬಳಿಕ ಸಂತ್ರಸ್ತೆ ತನ್ನ ಸಂಬಂಧಿ ಬಾಲಕನೊಬ್ಬ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾಗಿ ಹೇಳಿದ್ದಳು. ಆತ, ಎರಡು ವರ್ಷಗಳ ಹಿಂದೆ, 2022ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದಿದ್ದಳು. ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಬಾಲಕನನ್ನು ಜುವೆನೈಲ್ ಜಸ್ಟೀಸ್ ಕೋರ್ಟ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಜಾಮೀನು ನೀಡಿದ್ದರಿಂದ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ ಎಂದು ನ್ಯೂಸ್ ಮಿನಿಟ್ ವಿವರಿಸಿದೆ.
ಇದನ್ನೂ ಓದಿ : ಬಿಜೆಪಿ ಹೈಕಮಾಂಡ್ ಆದೇಶ ಧಿಕ್ಕರಿಸಿದ ಬ್ರಿಜ್ ಭೂಷಣ್; ವಿನೇಶಾ ಫೋಗಟ್ ಮೇಲಿನ ದಾಳಿ ತೀವ್ರಗೊಳಿಸಿದ ಮಾಜಿ ಸಂಸದ


