ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರ ವಿರುದ್ದ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿನ ಗೌಪ್ಯ ಮಾಹಿತಿಗಳನ್ನು ಪ್ರಸಾರ, ಪ್ರಕಟ, ಹಂಚಿಕೆ ಮಾಡದಂತೆ ವಿದ್ಯುನ್ಮಾನ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಆರೋಪ ಪಟ್ಟಿಯಲ್ಲಿನ ಗೌಪ್ಯ ಮಾಹಿತಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಆದೇಶಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ, ನಿರ್ಬಂಧ ವಿಧಿಸಿದ ಆದೇಶ ಹೊರಡಿಸಿದೆ.
ಸಿದ್ಧಾರ್ಥ ವಶಿಷ್ಟ್ @ ಮನು ಶರ್ಮಾ VS ರಾಜ್ಯ (ದೆಹಲಿ ಎನ್‌ಸಿಟಿ)- 2010ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್- 1995ರ ಷರತ್ತು 5 ಮತ್ತು ಹೈಕೋರ್ಟ್‌ನ ಸಮನ್ವಯ ಪೀಠದ ತೀರ್ಪುಗಳನ್ನು ಉಲ್ಲೇಖಿಸಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ಆದೇಶವನ್ನು ಮಾಧ್ಯಮ ಸಂಸ್ಥೆಗಳಿಗೆ ತಿಳಿಸುವಂತೆ ಮತ್ತು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಗಿದ್ದು, ಜೂನ್ 22 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.
ಅರ್ಜಿದಾರರ ಪರ ವಕೀಲೆ ರೇಷ್ಮಾ ಕೆ ಟಿ, ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ : ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ರಮೇಶ್ ಜಾರಕಿಹೊಳಿ ಪ್ರಕರಣಗಳ ವಿಚಾರಣೆ ಮುಂದೂಡಿಕೆ


