ಭಾರತದಲ್ಲಿ ಸಮಾನತೆ ಸಾರ್ವತ್ರಿಕವಾದಾಗ ನಾವು ಮೀಸಲಾತಿ ರದ್ದತಿ ಬಗ್ಗೆ ಯೋಚಿಸುತ್ತೇವೆ. ಈಗ ಆ ಸಮಾನತೆ ಇಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ (ಸೆ.9) ಹೇಳಿದ್ದಾರೆ.
ಪ್ರತಿಷ್ಠಿತ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಇನ್ನೂ ಎಷ್ಟು ಕಾಲ ಮೀಸಲಾತಿ ಮುಂದುವರೆಯಲಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
“ನೀವು ಹಣಕಾಸಿನ ವಿಚಾರ ನೋಡುವುದಾದರೆ, ಆದಿವಾಸಿಗಳಿಗೆ 100 ರೂಪಾಯಿಯಲ್ಲಿ 10 ಪೈಸೆ ಸಿಗುತ್ತದೆ, ದಲಿತರು 5 ರೂ. ಪಡೆಯುತ್ತಿದ್ದಾರೆ. ಒಬಿಸಿಗಳು ಕೂಡ ಅದೇ ಮೊತ್ತವನ್ನು ಪಡೆಯುತ್ತಿದ್ದಾರೆ. ಅವರ ಭಾಗವಹಿಸುವಿಕೆ ಎಲ್ಲೂ ಕಾಣುತ್ತಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಸಮಸ್ಯೆ ಏನೆಂದರೆ, ಭಾರತದ ಶೇಕಡಾ 90ರಷ್ಟು ಜನರಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ದೇಶದ ಉದ್ಯಮಿಗಳ ಪಟ್ಟಿ ತೆಗೆದು ನೋಡಿ. ಅದರಲ್ಲಿ ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳ ಹೆಸರು ತೋರಿಸಿ. ಈ ಜನರು ಭಾರತ ಶೇ.50ರಷ್ಟು ಇದ್ದಾರೆ. ಆದರೆ, 200 ಜನ ಉದ್ಯಮಿಗಳ ಪಟ್ಟಿಯಲ್ಲಿ ಕೇವಲ ಒಬ್ಬ ಒಬಿಸಿಯ ಹೆಸರು ಇರಬಹುದು. ಈ ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳುತ್ತಿಲ್ಲ. ಮೀಸಲಾತಿ ತೆಗೆದು ಹಾಕಿದ ತಕ್ಷಣ ಎಲ್ಲವೂ ಸರಿಯಾಗುವುದಿಲ್ಲ. ಬೇರೆ ಮಾರ್ಗಗಳೂ ಇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಕುರಿತು ಕೇಳಿದ ಪ್ರಶ್ನೆಗೆ, ಬಿಜೆಪಿಯ ಪ್ರಸ್ತಾಪ ಏನು ಎಂದು ತಿಳಿದ ನಂತರವಷ್ಟೇ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
“ಬಿಜೆಪಿ ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುತ್ತಿದೆ. ನಾವು ಅದನ್ನು ನೋಡಿಲ್ಲ. ಅವರು ಏನು ಮಾತನಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ಈಗ ನಾವು ಹೇಳಿಕೆ ಕೊಡುವುದರಲ್ಲಿ ಅರ್ಥವಿಲ್ಲ. ಅವರು ಅದನ್ನು ಜಾರಿಗೆ ತರಲು ಮುಂದಾಗಲಿ, ಆಗ ನೋಡೋಣ” ಎಂದಿದ್ದಾರೆ.
ಇದನ್ನೂ ಓದಿ : ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಭಾಗವಹಿಸಿದ 30 ನಿವೃತ್ತ ನ್ಯಾಯಾಧೀಶರು : ವಕ್ಫ್ ಮಸೂದೆ, ಮತಾಂತರ ಕಾನೂನು ಕುರಿತು ಚರ್ಚೆ


