ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 95 ಕೋಟಿ ರೂಪಾಯಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಸೇರಿ 25 ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) 4,970 ಪುಟಗಳ ಆರೋಪ ಪಟ್ಟಿ ಹಾಗೂ 144 ಪುಟಗಳ ದೂರನ್ನು ಸೋಮವಾರ (ಸೆ.9) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಜಾರಿ ನಿರ್ದೇಶನಾಲಯ ವಿಸ್ತೃತ ತನಿಖೆ ನಡೆಸಿ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರಿಗೆ ಆರೋಪ ಪಟ್ಟಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕರಾಗಿರುವ ಬಿ ನಾಗೇಂದ್ರ ಅವರು ಮೊದಲನೇ ಆರೋಪಿಯಾಗಿದ್ದು, ಸತ್ಯನಾರಾಯಣ ವರ್ಮ (ಬ್ರೋಕರ್) ಎರಡನೇ ಆರೋಪಿ, ಮೂರನೇ ಆರೋಪಿಯಾಗಿ ಸತ್ಯನಾರಾಯಣ ವರ್ಮ ಏಕತಾರಿ (ಫಸ್ಟ್ ಬ್ಯಾಂಕ್ ಮಾಲೀಕ), ನಾಲ್ಕನೇ ಆರೋಪಿಯಾಗಿ ಜೆ ಜಿ ಪದ್ಮನಾಭ (ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ) ಅವರನ್ನು ಹೆಸರಿಸಲಾಗಿದೆ ಎಂದು ವರದಿಗಳು ಹೇಳಿವೆ.
ವಾಲ್ಮೀಕಿ ನಿಗಮದ ಖಾತೆಯಿಂದ ಒಟ್ಟಾರೆ 84 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ಬಿ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ. ನಾಗೇಂದ್ರ ಸೂಚನೆಯಂತೆ ಪದ್ಮನಾಭರಿಂದ ಹಣ ವರ್ಗಾವಣೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಒಳಸಂಚು ರೂಪಿಸಿದ್ದು, ನಂತರ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ವಸಂತ ನಗರದ ಶಾಂಗ್ರೀಲಾ ಹೋಟೆಲ್‌ನಲ್ಲಿ ನಾಗೇಂದ್ರ ಸಭೆ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮನಕ್ಕೆ ಪದ್ಮನಾಭ ಅವರನ್ನು ನಾಗೇಂದ್ರ ಆಪ್ತನಾದ ನೆಕ್ಕಂಟಿ ನಾಗರಾಜ್ ಮೂಲಕ ನೇಮಕ ಮಾಡಲಾಗಿತ್ತು ಎಂದು ಚಾರ್ಜ್ ಶೀಟ್‌ನಲ್ಲಿ ಆರೋಪಿಸಿರುವುದಾಗಿ ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಕೆ ಮಾಡಲಾಗಿದೆ. ನಾಗೇಂದ್ರ ಅವರ ಆಪ್ತ ಸಹಾಯಕನಾದ 8ನೇ ಆರೋಪಿ ವಿಜಯ್ ಕುಮಾರ್ ಮೊಬೈಲ್‌ನಲ್ಲಿ ಹಣದ ಮೊತ್ತ, ಯಾರಿಗೆಲ್ಲಾ ಪೂರೈಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 20.19 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ಈ ಸಂಬಂಧ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ ಎನ್ನಲಾಗಿದೆ.
ಪ್ರಕರಣದಲ್ಲಿ ಸದ್ಯ 15 ಸಾಕ್ಷಿಗಳ ಕಲೆ ಹಾಕಲಾಗಿದ್ದು, ನಾಗೇಂದ್ರ 5.26 ಕೋಟಿ ರೂಪಾಯಿ ಬಳಕೆ ಮಾಡಿದ್ದಾರೆ. ಆದರೆ, ಈ ಸಂಬಂಧ ಉತ್ತರಿಸಲು ನಾಗೇಂದ್ರ ನಿರಾಕರಿಸಿದ್ದಾರೆ. ಸಣ್ಣ ಕೆಲಸಗಳಿಗೆ ಹೆಚ್ಚಿನ ಮೊತ್ತದ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಹಗರಣದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ಸಂಶಯ ವ್ಯಕ್ತಪಡಿಸಿದೆ ಎಂದು ಆರೋಪಿಸಲಾಗಿದೆ.
ಕಳೆದ ಆಗಸ್ಟ್ 6ರಂದು ಕೆಎಂವಿಎಸ್‌ಟಿಡಿಸಿಎಲ್ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಏಳು ಸಂಪುಟಗಳಲ್ಲಿ 3,072 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿತ್ತು.
ವಾಲ್ಮೀಕಿ ನಿಗಮದ ಅಕ್ರಮದ ಕುರಿತು ತನಿಖೆ ನಡೆಸಲು ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳ(ಎಸ್‌ಐಟಿ) ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ನಾಗೇಂದ್ರ ಅವರನ್ನು ಆರೋಪಿ ಎಂದು ಉಲ್ಲೇಖಿಸಿರಲಿಲ್ಲ. ಅಧಿಕಾರಿಗಳನ್ನಷ್ಟೇ ಹೊಣೆ ಮಾಡಿತ್ತು. ಆದರೆ, ಇಡಿ ಸಲ್ಲಿಸಿರುವ ಆರೋಪ ಪಟ್ಟಿ ವ್ಯತಿರಿಕ್ತವಾಗಿದೆ. ನಾಗೇಂದ್ರ ಅವರನ್ನೇ ಮೊದಲನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) 300 ಪುಟಗಳ ಆರೋಪ ಪಟ್ಟಿಯನ್ನು ಆಗಸ್ಟ್ 22ರಂದು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಕರಣದಲ್ಲಿ ಕೆಎಂವಿಎಸ್‌ಟಿಡಿಸಿಎಲ್ ಹಿಂದಿನ ವ್ಯವಸ್ಥಾಪಕ ಜೆ.ಜಿ ಪದ್ಮನಾಭ ಮತ್ತು ಪರಶುರಾಮ ದುರ್ಗಣ್ಣನವರ್ ಅವರನ್ನು ಆರೋಪಿಗಳನ್ನಾಗಿಸಲಾಗಿದೆ. ಈ ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಚಂದ್ರಶೇಖರನ್ ಪತ್ನಿ ಕವಿತಾ ಅವರು ನೀಡಿದ ದೂರಿನನ್ವಯ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಮತ್ತು 34ರ ಅಡಿ ಪ್ರಕರಣ ದಾಖಲಾಗಿತ್ತು.
ಈ ಆರೋಪ ಪಟ್ಟಿಯಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಇನ್ನಿತರರ ಹೆಸರು ಇಲ್ಲ ಎಂದು ತಿಳಿದು ಬಂದಿದೆ.
ಚಂದ್ರಶೇಖರನ್ ಅವರ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ, ರಾಜ್ಯ ಸರ್ಕಾರ ಮೇ 31,2023ರಂದು ಸಿಐಡಿಯ ಎಸ್‌ಐಟಿಗೆ ಪ್ರಕರಣದ ತನಿಖೆ ವರ್ಗಾಯಿಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಎಲ್ಲವನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ.
ಶಿವಮೊಗ್ಗದ ವಿನೋಬನಗರದ ತಮ್ಮ ಮನೆಯಲ್ಲಿ 2024ರ ಮೇ 26 ರಂದು ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಪ್ರಾಥಮಿಕ ಹಂತದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ಮಾಡಬೇಕಾಗಿದ್ದು, ಸಂಪೂರ್ಣ ದೋಷರೋಪ ಪಟ್ಟಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ವಿವಿಧ ಹಗರಣಗಳ ತನಿಖೆ ಸಮನ್ವಯಕ್ಕೆ ಗೃಹ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ


