ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ (ಸ್ವಾತಂತ್ರ್ಯ ಉದ್ಯಾನವನ) ಸೀಮಿತಗೊಳಿಸಿರುವ ಆದೇಶವನ್ನು ಸೆಪ್ಟೆಂಬರ್ 15ರೊಳಗೆ (ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ) ಹಿಂಪಡೆಯಬೇಕೆಂದು ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಇಂದು (ಸೆ.12) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಲ್ ಇಂಡಿಯಾ ಲಾಯರ್ಸ್ ಆಸೋಸಿಯೇಶನ್ ಫಾರ್ ಜಸ್ಟೀಸ್ (ಎಐಎಲ್‌ಎಜೆ) ಸಂಸ್ಥೆಯ ವಕೀಲೆ ಮೈತ್ರೇಯಿ ಅವರು” ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ನಿರ್ಬಂಧಿಸಿರುವುದಷ್ಟೇ ಅಲ್ಲ, ಪೋಲೀಸರು ತಮ್ಮಅಧಿಕಾರ ದುರುಪಯೋಗಪಡಿಸಿಕೊಂಡು ಅನೇಕ ಬಾರಿ ಕರಪತ್ರ ಹಂಚುವ, ಮೊಂಬತ್ತಿ ಹಚ್ಚಿ ಕೂರುವ, ಸಾಮಾಜಿಕ ಸಮಸ್ಯೆಗಳ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದ್ದಾರೆ. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಪೊಲೀಸ್ ಹಿಂಸಾಚಾರದ ಘಟನೆಗಳ ಬಗ್ಗೆ ಕೂಡಲೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗೆ ನೀಡುತ್ತಿರುವ ಬಹಿರಂಗ ಪತ್ರಕ್ಕೆ ಈಗಾಗಲೇ 565 ನಾಗರಿಕರು ಮತ್ತು ಕಾರ್ಯಕರ್ತರು ಸಹಿ ಹಾಕಿದ್ದಾರೆ ಎಂದು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿ, “ಪ್ರಜಾಪ್ರಭುತ್ವ ಕೇವಲ ಮತ ಹಾಕುವುದಕ್ಕೆ ಸೀಮಿತವಾಗಿಲ್ಲ. ನಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವುದು ಹಾಗೂ ಮೂಲಭೂತ ಕರ್ತವ್ಯಗಳನ್ನು ಪೂರೈಸುವುದು ಕೂಡ ಪ್ರಜಾಪ್ರಭುತ್ವದ ಭಾಗವೇ. ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಸೀಮಿತಿಗೊಳಿಸುವುದರಿಂದ ಪ್ರತಿಭಟನೆಯ ಉದ್ದೇಶವನ್ನೇ ಸೋಲಿಸದಂತಾಗುತ್ತದೆ” ಎಂದರು.
ಸ್ವಾತಂತ್ರ್ಯ ಉದ್ಯಾನವನ ಈ ಹಿಂದೆ ಜೈಲು ಆಗಿತ್ತು. ಇಂದು ನಮ್ಮ ಪ್ರತಿಭಟನೆಗಳನ್ನು ಅಲ್ಲಿ ಬಂಧಿಸಲಾಗಿದೆ. ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ನಾನಾಗಲಿ ನನ್ನ ಸಂಘಟನೆಯಾಗಲಿ ಎಲ್ಲಿ ಪ್ರತಿಭಟಿಸಬೇಕೆಂದು ತೀರ್ಮಾನಿಸಲು ಆಗುತ್ತಿಲ್ಲ. ಅದನ್ನು ಪೊಲೀಸರೇ ತೀರ್ಮಾನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಡಾ. ಮೋಹನ್ ರಾಜ್ ಮಾತನಾಡಿ “ಈ ಹಿಂದೆ ಮುಖ್ಯಮಂತ್ರಿಗಳೇ ಪ್ರತಿಭಟನೆಗೆ ವಿಧಿಸಿರುವ ನಿರ್ಬಂಧವನ್ನು ತೆಗೆಯಲಾಗುವುದು ಎಂದು ಘೋಷಿಸಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ, ಈ ವಿಷಯವಾಗಿ ಅಡ್ವೊಕೇಟ್ ಜನರಲ್ ಜೊತೆ ಮಾತನಾಡುವುದಾಗಿ ಮರಳುಸಿದಪ್ಪ ಅವರಿಗೆ ತಿಳಿಸಿದ್ದರು. ಆ ಮಾತು ಹೇಳಿ ಒಂದು ವರ್ಷ ಕಳೆಯಿತು ಎಂದು ನೆನಪಿಸಿದರು.
ಹಿರಿಯ ಸಾಹಿತಿ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಮಾತನಾಡಿ “ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ಹೋರಾಟಗಳ ಮೂಲಕ. ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ನೆಪದಲ್ಲಿ ಮೂಲಭೂತ ಹಕ್ಕಾದ ಹೋರಾಟದ ಹಕ್ಕನ್ನು ಹತ್ತಿಕ್ಕುವುದು ಸರಿಯಲ್ಲ. ಈ ಹಿಂದೆ ಟೌನ್ ಹಾಲ್, ಮೈಸೂರು ವೃತ್ತ, ಆನಂದ್ ರಾವ್ ವೃತ್ತ ಇಲ್ಲೆಲ್ಲ ಪ್ರತಿಭಟನೆ ಮಾಡಿದ್ದೇವೆ. ಆಗೆಲ್ಲ ಯಾವ ಟ್ರಾಫಿಕ್ ಸಮಸ್ಯೆಯೂ ಆಗಿಲ್ಲ” ಎಂದು ಹೇಳಿದರು.
“ಈಗ ನಮ್ಮನ್ನು ‘Unfreedom Park’ ಅಥವಾ ‘Freedom-Hidden-Away Park’ಗೆ ಬಂಧಿಸಿದ್ದಾರೆ” ಎಂದು ಸರ್ಕಾರದ ನಡೆ ಖಂಡಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಒಕ್ಕೂಟದ ಸಂಚಾಲಕ ಕೆ.ವಿ.ಭಟ್ ಮಾತನಾಡಿ, “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಬೆಂಗಳೂರಿನ ಜನರಿಗೆ ಅವರ ಸಾಂವಿಧಾನಿಕ ಹಕ್ಕುಗಳನ್ನು ಖಾತರಿಪಡಿಸುವ ಭರವಸೆಯನ್ನು ಸಿಎಂ ಈಡೇರಿಸಿಲ್ಲ. ಮೇ ದಿನದ ರ್‍ಯಾಲಿಗೂ ನಾವು ಉಚ್ಚ ನ್ಯಾಯಾಲಯದ ಅನುಮತಿ ಪಡೆಯುವಂತಾಗಿದೆ” ಎಂದರು.
ವಿದ್ಯಾರ್ಥಿ/ಯುವಕ ಸಂಘಟನೆಯಾದ ಕಲೆಕ್ಟಿವ್‌ನ ತ್ವಿಶಾ ಮೆಹ್ತಾ ಮಾತನಾಡಿ “ಇಂದು ಕೇವಲ ಪ್ರತಿಭಟನೆಗಳ ನಿರ್ಬಂಧ ಆಗುತ್ತಿಲ್ಲ. ನಾವು ಚಲನಚಿತ್ರ ಪ್ರದರ್ಶನ, ಕವನ ವಾಚನ, ರೈಡಿಂಗ್ ಸರ್ಕಲ್ ಅಥವಾ ಜನರನ್ನು ಒಟ್ಟುಗೂಡಿಸುವ ಯಾವುದೇ ಕೂಟವನ್ನು ಆಯೋಜಿಸಲು ಪ್ರಯತ್ನಿಸಿದಾಗ, ಈ ಅಸಂವಿಧಾನಿಕ ನಿರ್ಬಂಧವನ್ನು ಉಲ್ಲೇಖಿಸಿ ಪೊಲೀಸರು ದಮನ ಮಾಡುತ್ತಿದ್ದಾರೆ” ಎಂದು ದೂರಿದರು.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಮಲ್ಲಮ್ಮ ಮಾತನಾಡಿ, ”ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರಾದ ನಮ್ಮ ಹಕ್ಕುಗಳನ್ನು ಆಚರಿಸಲು ಮತ್ತು ಪ್ರತಿಪಾದಿಸಲು ಪ್ರತಿ ವರ್ಷ ‘ಪ್ರೈಡ್ ಮಾರ್ಚ್’ ಎಂಬ ಮೆರವಣಿಗೆ ಆಯೋಜಿಸುತ್ತೇವೆ. 2022ರಲ್ಲಿ ಆ ಮೆರವಣಿಗೆ ನಡೆಸಲು ಬಿಟ್ಟಿಲ್ಲ. 2023ರಲ್ಲಿ ನಾವು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿ ನಮ್ಮ ಮೆರವಣಿಗೆಗೆ ಅವಕಾಶ ಪಡೆಯಬೇಕಾಯಿತು. ಅದರ ನಂತರವೂ ನಮ್ಮ ಮೆರವಣಿಗೆ ಕೇವಲ ಅರ್ಧ ಕಿಲೋಮೀಟರ್‌ಗೆ ಸೀಮಿತವಾಗಿತ್ತು. ಈ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಪ್ರದರ್ಶನಗಳು ಕೇವಲ ಸ್ವಯಂ ಪ್ರೇರಿತವಲ್ಲ. ಅವು ನಮ್ಮ ಹಕ್ಕುಗಳಿಗಾಗಿ ಹೋರಾಟದ ಸುದೀರ್ಘ ಇತಿಹಾಸವನ್ನು ಹೊಂದಿವೆ” ಎಂದರು.
ಇದನ್ನೂ ಓದಿ : ಮಂಡ್ಯ | ಗಣೇಶ ಮೂರ್ತಿ ಮೆರವಣಿಗೆ ವೇಳೆ ಹಿಂಸಾಚಾರ; 46 ಮಂದಿಯ ಬಂಧನ


