ಉತ್ತರ ಪ್ರದೇಶದ ಅಯೋಧ್ಯೆ ನಗರದ ಭಾರಿ ಭೂ ಹಗರಣದಲ್ಲಿ ಬಿಜೆಪಿ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದ್ದಾರೆ. ಅಯೋಧ್ಯೆಯ ಭೂ ಹಗರಣ ಅಧಿಕಾರದಲ್ಲಿರುವವರು ಸುಗಮಗೊಳಿಸಿದ ಭ್ರಷ್ಟಾಚಾರದ ವಿಶಾಲ ಮಾದರಿಯ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಖಿಲೇಶ್ ಯಾದವ್ ಅವರು ಜುಲೈ 10 ರಂದು ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿದ್ದರು. ಇದು ಕೋಟ್ಯಂತರ ರೂಪಾಯಿಗಳ ಹಗರಣ ಎಂದು ಪ್ರತಿಪಾದಿಸಿದ್ದ ಅವರು, ಈ ಭೂ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
“ಅಧಿಕಾರಿಗಳು ಮತ್ತು ಬಿಜೆಪಿ ಸದಸ್ಯರು ಈ ಲೂಟಿಯಲ್ಲಿ ನಿರತರಾಗಿದ್ದು, ಕಳ್ಳತನ ಇರುವಲ್ಲಿ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಅಯೋಧ್ಯೆಯಲ್ಲಿನ ಲೂಟಿಯ ಕರಾಳ ವಾಸ್ತವವನ್ನು ಬಹಿರಂಗಪಡಿಸಿದ್ದಕ್ಕಾಗಿ ನಾನು ನಮ್ಮ ಪಕ್ಷದ ನಾಯಕರಿಗೆ ಧನ್ಯವಾದಗಳು ಅರ್ಪಿಸುತ್ತೇನೆ” ಎಂದು ಯಾದವ್ ಗುರುವಾರ ಹೇಳಿದ್ದಾರೆ.
ಇದನ್ನೂ ಓದಿ:Sitaram Yechury | ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ (72) ನಿಧನ
“ಅಯೋಧ್ಯೆಯಂತಹ ಪವಿತ್ರ ಸ್ಥಳದಲ್ಲಿ ಅವರು ಇಂತಹ ಕಳ್ಳತನ ಮಾಡಲು ಸಾಧ್ಯವಾದರೆ, ಉತ್ತರ ಪ್ರದೇಶದ ಇತರ ಜಿಲ್ಲೆಗಳಲ್ಲಿ ಎಷ್ಟು ಹೆಚ್ಚು ನಡೆಯುತ್ತಿದೆ ಎಂದು ಊಹಿಸಿ” ಎಂದು ಅವರು ಪ್ರಶ್ನಿಸಿದ್ದಾರೆ. ಉತ್ತಮ ಕಾರಣಗಳಿಗಾಗಿ ಭೂಮಿ ನೀಡಲು ಬಯಸಿದ ರೈತರಿಗೆ ಪರಿಹಾರವನ್ನು ನಿರಾಕರಿಸಲಾಯಿತು ಎಂದು ಯಾದವ್ ಪ್ರತಿಪಾದಿಸಿದ್ದಾರೆ. ಜೊತೆಗೆ ಬಿಜೆಪಿ ಪದಾಧಿಕಾರಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.
ಬಿಜೆಪಿ ಪದಾಧಿಕಾರಿಗಳನ್ನು ಒಳಗೊಂಡ ಭೂದಾಖಲೆಯ ಪ್ರತಿಗಳು ನಮಗೆ ದೊರೆತಿರುವುದು ಸಂತಸ ತಂದಿದೆ. ಬಿಜೆಪಿ ಸದಸ್ಯರು ಫಿರಂಗಿ ಅಭ್ಯಾಸಕ್ಕಾಗಿ ಮೀಸಲಾದ ರಕ್ಷಣಾ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸಾಮಾನ್ಯ ಜನರು ಬಳಸುವ ಭೂಮಿಗೆ ಅಡ್ಡಿಯಾಗಲು ರೈಲ್ವೆ ಜೋಡಣೆಯನ್ನು ಬದಲಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಅಯೋಧ್ಯೆಯು ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ವಿಶ್ವ ದರ್ಜೆಯ ನಗರವಾಗಬೇಕೆಂದು ನಾವು ಬಯಸುತ್ತೇವೆ. ಆದರೆ ಅದಕ್ಕೆ ದೂರದೃಷ್ಟಿಯ ಅಗತ್ಯವಿದೆ” ಎಂದು ಅಖಿಲೇಶ್ ಹೇಳಿದ್ದಾರೆ. ಎರಡು ವರ್ಷಗಳಲ್ಲಿ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುತ್ತೇವೆ ಎಂದು ಮಾಜಿ ಸಿಎಂ ಆಗಿರುವ ಅವರು ಅಯೋಧ್ಯೆ ಜನರಿಗೆ ಭರವಸೆ ನೀಡಿದ್ದಾರೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


