ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳ ಕುರಿತು ಪ್ರಶ್ನೆಯೆತ್ತಿ ತುಂಬಿದ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಕ್ಕೆ ತಮಿಳುನಾಡಿನ ಕೊಯಮತ್ತೂರಿನ ಹೋಟೆಲ್ ಮಾಲೀಕರೊಬ್ಬರು ಕ್ಷಮೆ ಕೇಳಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಹಲವರು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ಷಮೆ ಕೇಳಿಸಿದ್ದಾರೆ ಎಂದು ಆರೋಪಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಂಡಿರುವ ಕೇರಳ ಕಾಂಗ್ರೆಸ್ “ಶ್ರೀ ಅನ್ನಪೂರ್ಣ ಕೊಯಮತ್ತೂರಿನ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಸರಪಳಿಯಾಗಿದೆ. ಬುಧವಾರ, ರೆಸ್ಟೋರೆಂಟ್‌ನ ಮಾಲೀಕ ಶ್ರೀನಿವಾಸನ್ ಅವರು ಹಣಕಾಸು ಸಚಿವರ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಜಿಎಸ್‌ಟಿಯ ಸಮಸ್ಯೆಗಳ ಬಗ್ಗೆ ಬಹಳ ನಯವಾಗಿ ಅವರು ಪ್ರಶ್ನೆಗಳನ್ನು ಕೇಳಿದ್ದರು” ಎಂದು ತಿಳಿಸಿದೆ.
“ಸಮಸ್ಯೆಯೆಂದರೆ ಪ್ರತಿಯೊಂದು ವಸ್ತುವಿಗೂ ವಿಭಿನ್ನವಾಗಿ ಜಿಎಸ್‌ಟಿ ಅನ್ವಯಿಸಲಾಗುತ್ತದೆ. ಉದಾಹರಣೆಗೆ : ಬನ್ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ. ನೀವು ಅದರಲ್ಲಿ ಕ್ರೀಮ್ ಹಾಕಿದರೆ ಶೇ.18 ಜಿಎಸ್‌ಟಿ ಬೀಳುತ್ತದೆ. ಹಾಗಾಗಿ, ಬನ್ ಮತ್ತು ಕ್ರೀಮ್ ಅನ್ನು ಪ್ರತ್ಯೇಕವಾಗಿ ಕೊಡಿ ಎಂದು ಗ್ರಾಹಕರು ಕೇಳುತ್ತಾರೆ. ಹಣ ಉಳಿಸಲು ಅವರೇ ಬನ್ ಮೇಲೆ ಕ್ರೀಂ ಹಾಕಿಕೊಳ್ಳುತ್ತಾರೆ. ಉತ್ತರ ಭಾರತದಲ್ಲಿ ಜನರು ಹೆಚ್ಚು ಸಿಹಿ ತಿನ್ನುತ್ತಾರೆ ಎಂಬ ಕಾರಣಕ್ಕೆ ಹಣಕಾಸು ಇಲಾಖೆ ಸಿಹಿ ಮೇಲೆ ಶೇ.5 ಮತ್ತು ನಮ್ಕೀನ್ ಮೇಲೆ ಶೇ.12 ಜಿಎಸ್‌ಟಿ ಹಾಕಿದೆ ಎಂದು ಜನರು ಹೇಳುತ್ತಾರೆ. ತಮಿಳುನಾಡಿನಲ್ಲಿ ಸಿಹಿ, ನಮ್ಕೀನ್ ಮತ್ತು ಕಾಫಿ ಒಟ್ಟಿಗೆ ಹೋಗುತ್ತದೆ. ಆದ್ದರಿಂದ, ದಯವಿಟ್ಟು ಇವುಗಳಿಗೆ ಏಕರೂಪದ ಜಿಎಸ್‌ಟಿಯನ್ನು ವಿಧಿಸಿ. ಈ ಜಿಎಸ್‌ಟಿ ಗೊಂದಲದಿಂದಾಗಿ ಕಂಪ್ಯೂಟರೇ ಸ್ಟ್ರಕ್ ಆಗುತ್ತಿವೆ” ಎಂದು ಶ್ರೀನಿವಾಸನ್ ಅವರ ಮಾತುಗಳನ್ನು ವಿವರಿಸಿದೆ.

“ಶ್ರೀನಿವಾಸನ್ ಅವರ ಮಾತಿಗೆ ವೇದಿಕೆಯಲ್ಲಿ ಸೀತಾರಾಮನ್ ಮೇಡಂ ನಕ್ಕಿದ್ದರು. ಆದರೆ ನಂತರ ಶ್ರೀನಿವಾಸನ್ ಅವರು “ನಾನು ಯಾವುದೇ ಪಕ್ಷದ ಪರ ಇರುವವನಲ್ಲ” ಎಂದು ಸೀತಾರಾಮನ್ ಮುಂದೆ ಕ್ಷಮೆ ಯಾಚಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮಾಸ್ಟರ್ ಜೀ ಶ್ರೀನಿವಾಸನ್ ಅವರ ಟೀಕೆಗೆ ಕೋಪಗೊಂಡಿದ್ದಾರೆ ಮತ್ತು ಅವರ ಹಿಂಬಾಲಕರು ಕೂಡ ಅವರಂತೆ ವರ್ತಿಸುತ್ತಿದ್ದಾರೆ. ಟೀಕೆಗೆ ಅತ್ಯಂತ ಕೋಪಗೊಂಡಿದ್ದಾರೆ” ಎಂದು ಕೇರಳ ಕಾಂಗ್ರೆಸ್ ಹೇಳಿದೆ.
ತಮಿಳುನಾಡು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಬಾಲಾಜಿ ಎಂ.ಎಸ್ ತನ್ನ ಎಕ್ಸ್ ಖಾತೆಯಲ್ಲಿ ವೈರಲ್ ವಿಡಿಯೋ ಹಂಚಿಕೊಂಡು “ಕೊಯಮತ್ತೂರು ಅನ್ನಪೂರ್ಣ ಶ್ರೀನಿವಾಸನ್ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕೊಯಮತ್ತೂರು ದಕ್ಷಿಣ ಸದಸ್ಯೆ ವನತಿ ಜೊತೆ ಭೇಟಿಯಾಗಿ, ಸಭೆಯಲ್ಲಿ ತಾನು ಆಡಿದ ಮಾತುಗಳು ತಪ್ಪಾಗಿದೆ ಎಂದು ಕ್ಷಮೆ ಕೋರಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ತೆರಿಗೆಯಲ್ಲಿ ಶೇ.50ರಷ್ಟು ಪಾಲು ಕೊಡಿ : ಪ್ರತಿಪಕ್ಷಗಳ ಆಡಳಿತ ರಾಜ್ಯಗಳಿಂದ ಕೇಂದ್ರಕ್ಕೆ ಆಗ್ರಹ


