‘ಬಾಹ್ಯ ಭಯೋತ್ಪಾದನೆಗಿಂತ ಒಳಗಿನ ಭ್ರಷ್ಟಾಚಾರ ಅತ್ಯಂತ ಅಪಾಯಕಾರಿ’ ಎಂದು ಲಂಚ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಹೇಳಿದೆ. ಭೂ ವಿವಾದ ಇತ್ಯರ್ಥಕ್ಕೆ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದ ಮಾಜಿ ವಿಶೇಷ ತಹಶೀಲ್ದಾರ್ ಹಾಗೂ ಮಧ್ಯವರ್ತಿಯೊಬ್ಬರಿಗೆ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್ ಈ ಹೇಳಿಕೆ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಎಸ್ ವೆಂಕಟಾಚಲಪತಿ ಮತ್ತು ಮಧ್ಯವರ್ತಿ ಮಧುಸೂಧನ್ ಬಿ ಆರ್ ಅವರನ್ನು 2017 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು. ಬುಧವಾರ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಅವರು ವೆಂಕಟಾಚಲಪತಿ ಮತ್ತು ಮಧುಸೂಧನ್ ಅವರಿಗೆ ತಲಾ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಕ್ರಮವಾಗಿ 7 ಲಕ್ಷ ಮತ್ತು 40 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
“ಇಂದಿನ ದಿನಗಳಲ್ಲಿ ಸಾರ್ವಜನಿಕ ಕಚೇರಿಗಳಲ್ಲಿ, ವಿಶೇಷವಾಗಿ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರವು ಬಡ, ಅಸಹಾಯಕ ರೈತರು ಮತ್ತು ಇತರ ಸಾರ್ವಜನಿಕರ ಜೀವನಕ್ಕೆ ಶಾಪವಾಗಿ ಪರಿಣಮಿಸಿದೆ. ಸಾರ್ವಜನಿಕ ಸೇವಕರು ಮತ್ತು ಜನಪ್ರತಿನಿಧಿಗಳ ಈ ಅಂತರ್ಗತ ಭ್ರಷ್ಟ ಚಟುವಟಿಕೆಗಳು ಹೊರಗಿನ ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಇದು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ” ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
“ಸಾಮಾನ್ಯ ಜನರು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಗೆ ಇದು ನಿಜವಾಗಿಯೂ ಮೂಲ ಕಾರಣವಾಗಿದೆ. ಈ ರೀತಿಯ ಕಳಂಕವನ್ನು ಮುಂದುವರಿಸಲು ಅನುಮತಿಸಿದರೆ, ಬಹುಶಃ ಅದು ವ್ಯವಸ್ಥೆಯ ತಳಹದಿಯನ್ನು ಮಾತ್ರವಲ್ಲದೆ ಸಾಮಾನ್ಯ ಜನರ ನಂಬಿಕೆಯನ್ನೂ ಸಹ ನಾಶಪಡಿಸುತ್ತದೆ. ಜೊತೆಗೆ ಇದು ಪ್ರಜಾಪ್ರಭುತ್ವದ ಸ್ಥಾಪನೆಯ ನಾಶಕ್ಕೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ. ಹಾಗಾದರೆ ಇದು ಇತರರಿಗೆ ಇದು ಪಾಠವಾಗಲಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂಓದಿ:ಸೆಬಿ ಅಧ್ಯಕ್ಷೆ ವಿರುದ್ಧ ಲೋಕಪಾಲ್‌ಗೆ ದೂರು ನೀಡಿದ ಸಂಸದೆ ಮಹುವಾ ಮೊಯಿತ್ರಾ
ದೂರುದಾರರ ವ್ಯಕ್ತಿಯು ತನ್ನ ತಂದೆಯ ಮರಣದ ನಂತರ, ವಿಶೇಷ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿದ್ದ ವೆಂಕಟಾಚಲಪತಿ ಅವರನ್ನು ಸಂಪರ್ಕಿಸಿ, ಭೂಮಿಯ ಹಂಚಿಕೆಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕೋರಿದ್ದರು. ಆದರೆ, ವೆಂಕಟಾಚಲಪತಿ ಅವರು ಮಧುಸೂಧನ್ ಅವರನ್ನು ಭೇಟಿಯಾಗುವಂತೆ ಕೇಳಿದ್ದು, 20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮಾತುಕತೆಯ ನಂತರ, ಮೊತ್ತವನ್ನು 15 ಲಕ್ಷಕ್ಕೆ ಇಳಿಸಿ, ಮುಂಗಡವಾಗಿ 5 ಲಕ್ಷ ರೂ. ಪಾವತಿಸುವಂತೆ ಮತ್ತು ಬಾಕಿ ಪಾವತಿಸಿದ ನಂತರ ಆದೇಶ ಪ್ರತಿ ನೀಡಲಾಗುವುದು ಎಂದು ಅವರು ಹೇಳಿದ್ದರು. ಡಿಸೆಂಬರ್ 15, 2017 ರಂದು ದೂರುದಾರರು ಎಸಿಬಿಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು. ಹೀಗಾಗಿ ತಹಸಿಲ್ದಾರ್ ಅವರಿಗೆ ಎಸಿಬಿ ಬಲೆ ಬೀಸಿ, ಡಿಸೆಂಬರ್ 18, 2017 ರಂದು ವೆಂಕಟಾಚಲಪತಿ ಅವರ ಸೂಚನೆ ಮೇರೆಗೆ ಮಧುಸೂಧನ್ 5 ಲಕ್ಷ ಮುಂಗಡ ವಸೂಲಿ ಮಾಡುವಾಗ ಸಿಕ್ಕಿಬಿದ್ದಿದ್ದರು.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


