ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ವಿಫಲಗೊಳಿಸಲೆಂದು ಅವರನ್ನು ಸಿಬಿಐ ಬಂಧಿಸಿತ್ತು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದ್ದಾಗಿ ವರದಿಯಾಗಿದೆ.
ಸಿಬಿಐ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು ನೀಡುವ ವೇಳೆ ನ್ಯಾಯಮೂರ್ತಿ ಭುಯಾನ್ ಅವರು ಈ ವಿಚಾರ ಹೇಳಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“ಸಿಬಿಐ ಬಂಧನ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಮಾರ್ಚ್ 2023ರಲ್ಲಿಯೇ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತಾದರೂ, ಅವರನ್ನು ಸಿಬಿಐ ಬಂಧಿಸಿರಲಿಲ್ಲ. ಬದಲಿಗೆ ಇಡಿ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತ ಬಳಿಕ ಸಿಬಿಐ ಕ್ರಿಯಾಶೀಲವಾಯಿತು. 22 ತಿಂಗಳಿಗೂ ಹೆಚ್ಚು ಕಾಲ ಸುಮ್ಮನಿದ್ದ ಸಿಬಿಐ, ಆನಂತರ ಕಾರ್ಯಪ್ರವೃತ್ತವಾಗಿ ಕೇಜ್ರಿವಾಲ್ ಅವರನ್ನು ವಶಕ್ಕೆ ನೀಡುವಂತೆ ಕೋರಿತು. ಸಿಬಿಐನ ಇಂತಹ ಕ್ರಮ ಬಂಧನದ ಸಂದರ್ಭದ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟು ಹಾಕುತ್ತದೆ. ಸಿಬಿಐ ಬಂಧನದ ಉದ್ದೇಶ ಇಡಿ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ವಿಫಲಗೊಳಿಸುವುದಾಗಿತ್ತು” ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.
ವಿಚಾರಣೆ ವೇಳೆ ಸಿಬಿಐ ಬಂಧನ ಕಾನೂನು ಬದ್ಧವಾಗಿದೆ ಎಂದು ನ್ಯಾ. ಸೂರ್ಯಕಾಂತ್ ಹೇಳಿದರೆ, ನ್ಯಾ. ಭುಯಾನ್ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
“ಇಡಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಈಗಾಗಲೇ ಜಾಮೀನು ದೊರೆತಿರುವಾಗ, ಅವರು ಮೊದಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿ ಜಾಮೀನು ಪಡೆಯಬೇಕಿತ್ತು ಎಂಬ ಸಾಲಿಸಿಟರ್ ಜನರಲ್ ಎಸ್. ವಿ ರಾಜು ಅವರ ವಾದವನ್ನು ಪುರಸ್ಕರಿಸಲಾಗದು. ಈ ಪ್ರಕರಣದಲ್ಲಿ ಮತ್ತೊಮ್ಮೆ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಸಂಪೂರ್ಣ ಅಸಮರ್ಥನೀಯ ಎಂದ ನ್ಯಾ.ಭುಯಾನ್ ಅವರು, ಜಾಮೀನಿಗೆ ಆದ್ಯತೆ ನೀಡುವುದು ವಿಕಸಿತ ನ್ಯಾಯಶಾಸ್ತ್ರ ವ್ಯವಸ್ಥೆಯ ಒಂದು ಮುಖ. ಜಾಮೀನಿಗೇ ಆದ್ಯತೆ, ಅನಿವಾರ್ಯವಾದರೆ ಮಾತ್ರ ಜೈಲು ಎನ್ನುವುದನ್ನು ಮನಗಾಣಬೇಕು. ವಿಚಾರಣಾ ಪ್ರಕ್ರಿಯೆ ಅಥವಾ ಬಂಧನಕ್ಕೆ ಕಾರಣವಾಗುವ ಹಂತಗಳು ಕಿರುಕುಳವಾಗಿ ಮಾರ್ಪಡಾಗಬಾರದು. ಹೀಗಾಗಿ ಸಿಬಿಐ ಬಂಧನವು ನ್ಯಾಯಸಮ್ಮತವಲ್ಲ. ಮೇಲ್ಮನವಿದಾರರನ್ನು (ಕೇಜ್ರಿವಾಲ್) ತಕ್ಷಣವೇ ಬಿಡುಗಡೆ ಮಾಡಬೇಕು” ಎಂದು ಆದೇಶಿಸಿದ್ದಾರೆ.
ತನಿಖೆಗೆ ಸಹಕರಿಸುವುದು ಎಂದರೆ ಆರೋಪಿಯು ಪ್ರಾಸಿಕ್ಯೂಷನ್ ಬಯಸಿದ ರೀತಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಲ್ಲ ಎಂಬುವುದಾಗಿ ನ್ಯಾಯಮೂರ್ತಿಗಳು ಸಿಬಿಐಯ ಕಿವಿ ಹಿಂಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಹೇಳಿದೆ.
ಇದನ್ನೂ ಓದಿ : ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಜಾಮೀನು | ತೀರ್ಪಿನ ಪ್ರಮುಖ ಅಂಶಗಳು; ಕೋರ್ಟ್ ವಿಧಿಸಿದ ಷರತ್ತುಗಳೇನು..?


