ಅರ್ನ್‌ಸ್ಟ್ ಆ್ಯಂಡ್ ಯಂಗ್‌ನಲ್ಲಿ (ಇವೈ) ಕೆಲಸ ಮಾಡುತ್ತಿದ್ದ 26 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಸೆಬಾಸ್ಟಿಯನ್ ಪೆರಯಿಲ್ ಕೆಲಸದ ಒತ್ತಡದಿಂದ ಸಾವಿಗೀಡಾದ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಕೇಂದ್ರ ಕಾರ್ಮಿಕ ಸಚಿವಾಲಯವು ಈ ಕುರಿತ ದೂರನ್ನು ಕೈಗೆತ್ತಿಕೊಂಡಿದ್ದು, ಯುವತಿಯ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುವುದಾಗಿ ಗುರುವಾರ ತಿಳಿಸಿದೆ.
“ಅನ್ನಾ ಸೆಬಾಸ್ಟಿಯನ್ ಪೆರಯಿಲ್ ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಆಕೆಗೆ ನ್ಯಾಯ ದೊರಕಿಸಿ ಕೊಡುವ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ. ಕಾರ್ಮಿಕ ಸಚಿವಾಲಯವು ಅಧಿಕೃತವಾಗಿ ದೂರನ್ನು ಕೈಗೆತ್ತಿಕೊಂಡಿದೆ” ಎಂದು ಕೇಂದ್ರ ಕಾರ್ಮಿಕ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
Deeply saddened by the tragic loss of Anna Sebastian Perayil. A thorough investigation into the allegations of an unsafe and exploitative work environment is underway. We are committed to ensuring justice & @LabourMinistry has officially taken up the complaint.@mansukhmandviya https://t.co/1apsOm594d
— Shobha Karandlaje (@ShobhaBJP) September 19, 2024
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಮೃತ ಯುವತಿಯ ತಾಯಿ ಮಾಡಿದ ಆರೋಪಗಳ ಬಗ್ಗೆ ತನಿಖೆಗೆ ಒತ್ತಾಯಿಸಿದ ಬಳಿಕ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
“ಇದು ತುಂಬಾ ದುಃಖದ ವಿಷಯ ಮತ್ತು ಹಲವು ರೀತಿಯಲ್ಲಿ ಗೊಂದಲವನ್ನುಂಟುಮಾಡಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಕುರಿತು ಮೃತಳ ತಾಯಿ ಮಾಡಿದ ಆರೋಪಗಳ ಬಗ್ಗೆ ತನಿಖೆ ಮಾಡಲು ನಾನು ಭಾರತ ಸರ್ಕಾರದ ಸಚಿವರಾದ ಮನ್ಸುಖ್ ಮಾಂಡವೀಯ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಕೋರುತ್ತೇನೆ. ಅವರು (ಕಂಪನಿ) ಯುವತಿಯ ಅನ್ನಾ ಸೆಬಾಸ್ಟಿಯನ್‌ಳ ಭವಿಷ್ಯ ಮತ್ತು ಜೀವವನ್ನು ಬಲಿತೆಗೆದುಕೊಂಡಿದ್ದಾರೆ” ಎಂದು ರಾಜೀವ್ ಚಂದ್ರಶೇಖರ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದರು.
ಇವೈ ಕಂಪನಿಯ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಪತ್ರವೊಂದನ್ನು ಬರೆದಿರುವ ಅನ್ನಾ ಅವರ ತಾಯಿ ಅನಿತಾ ಅಗಸ್ಟಿನ್ ಮನುಷ್ಯರಿಗೆ ಬೆಲೆ ಇಲ್ಲದ ಅಧಿಕ ಒತ್ತಡದ ಕಂಪನಿಯ ಕೆಲಸದ ವಾತಾವರಣವನ್ನು ಬದಲಾಯಿಸುವಂತೆ ಕೋರಿದ್ದರು.
ಪತ್ರಕ್ಕೆ ಪ್ರತಿಕ್ರಿಯಿಸಿ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ ” ಅನ್ನಾಳ ಸಾವು ನಮಗೆ ಅತೀವ ದುಖಃ ತಂದಿದೆ. ಆಕೆಯ ತಾಯಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದಿದೆ.
ಪುಣೆಯ ಯರವಾಡದಲ್ಲಿ ಇವೈ ಗ್ಲೋಬಲ್‌ನ ಸದಸ್ಯ ಸಂಸ್ಥೆಯಾದ ಎಸ್‌ಆರ್ ಬಟ್ಲಿಬೊಯ್ ಜೊತೆ ಕೆಲಸ ಮಾಡುತ್ತಿದ್ದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಸೆಬಾಸ್ಟಿಯನ್ ಪೆರಯಿಲ್ ಜುಲೈ 20ರಂದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದರು. ಆಕೆ ನಿರಾಳತೆ ಮತ್ತು ಬಳಲಿಕೆಗೆ ಒಳಗಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿರುವುದಾಗಿ ಸಹೋದ್ಯೋಗಿಗಳು ಹೇಳಿದ್ದಾರೆ.
ಮೃತ ಯುವತಿ ಅನ್ನಾ 2023ರಲ್ಲಿ ತನ್ನ ಸಿಎ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು, ಮಾರ್ಚ್ 2024ರಲ್ಲಿ ಇವೈ ಪುಣೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸಕ್ಕೆ ಸೇರಿದ ಕೇವಲ 4 ತಿಂಗಳಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಇವೈ ಕಂಪೆನಿಯ ವಿರುದ್ದ ಅನ್ನಾಳ ತಾಯಿ ಆರೋಪಿಸಿದ್ದಾರೆ. ಕಂಪೆನಿಗೆ ಸೇರಿದ ಕೂಡಲೇ ಕೆಲಸದ ಹೊರೆ, ಹೊಸ ಪರಿಸರ ಮತ್ತು ಆತಂಕ, ನಿದ್ರಾಹೀನತೆ ಮತ್ತು ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದ್ದಳು. ಆದರೆ, ಕಠಿಣ ಪರಿಶ್ರಮ ಯಶಸ್ಸಿಗೆ ಹಾದಿ ಎಂದು ನಂಬುತ್ತಾ ಅವಳು ತನ್ನನ್ನು ತಾನೇ ಬಲಿ ತೆಗೆದುಕೊಂಡಿದ್ದಾಳೆ ಹೇಳಿದ್ದಾರೆ.
ಇದನ್ನೂ ಓದಿ : ದೆಹಲಿ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿರುವ ಎಎಪಿ ನಾಯಕಿ ಅತಿಶಿ


