ಪ್ಯಾಲೆಸ್ತೀನ್ ಧ್ವಜ ಹಿಡಿಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಹೇಳಿದ್ದು, ಯಾಕೆಂದರೆ ಪ್ಯಾಲೆಸ್ತೀನ್‌ಗೆ ಕೇಂದ್ರ ಸರ್ಕಾರ ತನ್ನ ಬೆಂಬಲವನ್ನು ನೀಡುತ್ತಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಅದಾಗ್ಯೂ, ಇತರ ದೇಶಗಳನ್ನು ಹೊಗಳಿ ಘೋಷಣೆಗಳನ್ನು ಕೂಗುವುದು ತಪ್ಪು ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯದ ಚಿತ್ರದುರ್ಗ, ದಾವಣಗೆರೆ ಮತ್ತು ಕೋಲಾರದಲ್ಲಿ ಸೋಮವಾರ ನಡೆದ ಮೀಲಾದ್-ಉಲ್-ನಬಿ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜಗಳನ್ನು ಹಾರಿಸಿದ ಘಟನೆಗಳು ವರದಿಯಾಗಿದ್ದವು. ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಹಿನ್ನೆಲೆಯಲ್ಲಿ ಆರು ಮಂದಿ ಅಪ್ರಾಪ್ತರನ್ನು ಬಂಧಿಸಲಾಗಿತ್ತು.
ಇದನ್ನೂಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್ ವಿರುದ್ಧ ಕಾನೂನು ಕ್ರಮಕ್ಕೆ ಗೃಹ ಸಚಿವಾಲಯ ಅನುಮತಿ
“ಕೇಂದ್ರ ಸರ್ಕಾರವೇ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದೆ. ನಾವು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಯಾರೋ ಬಾವುಟ ಹಿಡಿದಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯವರು ಅದನ್ನೇ ದೊಡ್ಡ ವಿಷಯವಾಗಿ ಮಾಡುತ್ತಿದ್ದಾರೆ. ಯಾರಾದರೂ ಬೇರೆ ದೇಶಕ್ಕೆ ‘ಜೈ’ ಎಂದು ಹೇಳಿದರೆ ಅದು ತಪ್ಪು. ಅಂತವರು ದೇಶದ್ರೋಹಿಗಳಾಗಿದ್ದು, ಗಲ್ಲಿಗೇರಿಸಬೇಕು. ಆದರೆ ನನ್ನ ಪ್ರಕಾರ (ಪ್ಯಾಲೆಸ್ತೀನ್) ಧ್ವಜವನ್ನು ಹಿಡಿಯುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
“ಅವರು (ಕೇಂದ್ರ) ಬೆಂಬಲವನ್ನು (ಪ್ಯಾಲೆಸ್ತೀನ್‌ಗೆ) ಘೋಷಿಸಿದ್ದರಿಂದ ಧ್ವಜವನ್ನು ಹಿಡಿದಿದ್ದಾರೆ. ಇಲ್ಲದಿದ್ದರೆ ಆ ಧ್ವಜವನ್ನು ಯಾಕೆ ಹಿಡಿಯುತ್ತಾರೆ?” ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹ್ಮದ್, “ಘಟನೆಗೆ ಸಂಬಂಧಿಸಿದಂತೆ ಕೇರಳ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಅಲ್ಲಿ ನೆಲೆಸಿರುವುದರಿಂದ ಅವರು ಸ್ಥಳೀಯರೇ ಆಗಿದ್ದಾರೆ. ಸುಮಾರು 50 ವರ್ಷಗಳ ಹಿಂದೆ, ಅವರ ತಂದೆಯ ಕಾಲದಿಂದ ಅವರು ಅಲ್ಲಿ (ನಾಗಮಂಗಲ) ನೆಲೆಸಿದ್ದಾರೆ” ಎಂದು ಹೇಳಿದ್ದಾರೆ.
“ಅವರ ಬಳಿ ಆಧಾರ್, ವೋಟರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಇದೆ. ಅವರು ಈಗ ಸ್ಥಳೀಯರೇ ಆಗಿದ್ದಾರೆ. ಇದರಿಂದ ಬಿಜೆಪಿಗೆ ಏನು ಸಮಸ್ಯೆ?… ನಮ್ಮ ದೇಶದಲ್ಲಿ ಯಾರು ಬೇಕಾದರೂ ಯಾವುದೇ ರಾಜ್ಯದಲ್ಲಿ ನೆಲೆಸಬಹುದು… ಅವರು ಇಲ್ಲೇ ನೆಲೆಸಿದ್ದಾರೆ, ಮನೆ ಹೊಂದಿದ್ದಾರೆ. ಅವರು ಈಗ ಸ್ಥಳೀಯರು, ಕನ್ನಡಿಗರು” ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ಕಾದಂಬರಿ ಕುರಿತ ಚರ್ಚೆಯಲ್ಲಿ ಲೇಖಕಿ ದು.ಸರಸ್ವತಿ ಅವರ ಮಾತುಗಳು


