ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಷರತ್ತುಬದ್ದ ಜಾಮೀನು ಪಡೆದಿದ್ದ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮುನಿರತ್ನ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಅವರ ಪರ ವಕೀಲರು ಇಂದು (ಸೆ.20) ಜಾಮೀನು ಪ್ರತಿಯನ್ನು ಕಾರಾಗೃಹದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಎಲ್ಲಾ ಪ್ರಕ್ರಿಯೆ ಮುಗಿಸಿ ಮುನಿರತ್ನ ಹೊರ ಬರುತ್ತಿದ್ದಂತೆ, ಅಲ್ಲೆ ಕಾದು ಕುಳಿತಿದ್ದ ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆಯಲ್ಲಿ ಬುಧವಾರ 40 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದರು. ದೂರು ಆಧರಿಸಿ ಮುನಿರತ್ನ, ಅವರ ಗನ್‌ಮ್ಯಾನ್ ವಿಜಯಕುಮಾರ್, ಸುಧಾಕರ್,ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಹಾಗೂ ಲೋಕಿ ಸೇರಿ 7 ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಮುನಿರತ್ನ ಬಂಧನಕ್ಕೆ ಕಗ್ಗಲೀಪುರ ಠಾಣೆ ಪೊಲೀಸರು ಗುರುವಾರ (ಸೆ.19) ರಾತ್ರಿಯಿಂದಲೇ ಪರಪ್ಪನ ಅಗ್ರಹಾರ ಬಳಿ ಕಾಯುತ್ತಿದ್ದರು ಎಂದು ವರದಿಯಾಗಿದೆ.
ಸಮಾಜ ಸೇವಕಿಯಾಗಿರುವ ಮಹಿಳೆಯೊಬ್ಬರು ಮುನಿರತ್ನ ಹಾಗೂ ಮತ್ತಿತರರ ವಿರುದ್ದ ದೂರು ದಾಖಲಿಸಿದ್ದಾರೆ. 2020ರಿಂದ 2022ರ ನಡುವೆ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ. ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಯಡಿಯೂರಪ್ಪ, ಕುಮಾರಸ್ವಾಮಿ ಜಂಟಿ ಹಗರಣ ಆರೋಪ | ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ನಿವೃತ್ತ ಐಎಎಸ್ ಅಧಿಕಾರಿ : ವರದಿ


