ಒಡಿಶಾದ ಭುವನೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಠಾಣೆಯ ಪೀಠೋಪಕರಣಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಕಳೆದ ವಾರ ಬಂಧಕ್ಕೊಳಗಾಗಿ ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸೇನಾಧಿಕಾರಿಯ ಸ್ನೇಹಿತೆ, ಇದೀಗ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ತನ್ನ ಗೆಳೆಯನನ್ನು ಅಕ್ರಮವಾಗಿ ಜೈಲಿಗಟ್ಟಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಶಿಸ್ತಿನ ಪ್ರಕ್ರಿಯೆಯ ಭಾಗವಾಗಿ ಅಮಾನತುಗೊಳಿಸಲಾಗಿದೆ ಎಂದು ಒಡಿಶಾ ಪೊಲೀಸರ ಉನ್ನತ ಮೂಲಗಳು ತಿಳಿಸಿದೆ.
“ಕಳೆದ ಭಾನುವಾರ ರಾತ್ರಿ 1 ಗಂಟೆಗೆ ನನ್ನ ರೆಸ್ಟೋರೆಂಟ್ ಮುಚ್ಚಿ ನಾನು ನನ್ನ ಗೆಳೆಯನ ಜೊತೆ ಮನೆ ಕಡೆಗೆ ಹೋಗುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಪುರುಷರ ತಂಡವೊಂದು ನಮ್ಮ ಮೇಲೆ ದಾಳಿ ಮಾಡಿತ್ತು. ಅವರಿಂದ ತಪ್ಪಿಸಿಕೊಂಡು, ಈ ಕುರಿತು ದೂರು ದಾಖಲಿಸಲು ಭರತ್‌ಪುರ ಪೊಲೀಸ್ ಠಾಣೆಗೆ ನಾವು ತೆರಳಿದ್ದೆವು. ನಾವು ಠಾಣೆಗೆ ತಲುಪಿದಾಗ, ಅಲ್ಲಿ ಸಿವಿಲ್ ಡ್ರೆಸ್‌ನಲ್ಲಿ ಒಬ್ಬರು ಮಹಿಳಾ ಪೇದೆ ಮಾತ್ರ ಇದ್ದರು. ಅವರು ನಮಗೆ ಸಹಾಯ ಮಾಡಲು ನಿರಾಕರಿಸಿದರು” ಎಂದು ಸೇನಾಧಿಕಾರಿಯ ಸ್ನೇಹಿತೆ ಹೇಳಿದ್ದಾರೆ.
“ಮಹಿಳಾ ಪೇದೆ ದೂರು ಸ್ವೀಕರಿಸುವ ಬದಲು ನಮಗೆ ಅಸಭ್ಯವಾಗಿ ನಿಂದಿಸಲು ಶುರು ಮಾಡಿದರು. ಈ ವೇಳೆ ಅಲ್ಲಿಗೆ ಬಂದ ಕೆಲ ಪುರುಷ ಸಿಬ್ಬಂದಿ ನನ್ನ ಗೆಳೆಯನ ಬಳಿ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದರು. ಬಳಿಕ ಅವರು, ನನ್ನ ಗೆಳೆಯನನ್ನು ಸೆಲ್‌ಗೆ ಹಾಕಿದರು. ಆಗ ನಾನು ಸೇನಾಧಿಕಾರಿಯನ್ನು ಈ ರೀತಿ ಸೆಲ್‌ಗೆ ಹಾಕುವಂತಿಲ್ಲ ಎಂದು ಜೋರಾದ ಧ್ವನಿಯಲ್ಲಿ ಹೇಳಿದೆ. ಆಗ ಇಬ್ಬರು ಮಹಿಳಾ ಸಿಬ್ಬಂದಿ ನನ್ನ ಮೇಲೆ ಹಲ್ಲೆ ನಡೆಸಿದರು. ನಾನು ಅವರಿಂದ ಬಿಡಿಸಿಕೊಳ್ಳಲು ಒಬ್ಬರ ಕೈಗೆ ಕಚ್ಚಿದೆ. ಆಗ ಅವರು ಜಾಕೆಟ್‌ನಿಂದ ನನ್ನನ್ನು ಕಟ್ಟಿದಂತೆ ಮಾಡಿ ಕೋಣೆಯೊಂದರಲ್ಲಿ ಹಾಕಿದರು” ಎಂದು ಮಹಿಳೆ ಆರೋಪಿಸಿದ್ದಾರೆ.
“ಸ್ವಲ್ಪ ಸಮಯದ ನಂತರ, ಪುರುಷ ಅಧಿಕಾರಿಯೊಬ್ಬರು ಕೋಣೆಯ ಬಾಗಿಲು ತೆರೆದರು. ನನ್ನ ಸ್ತನಗಳ ಮೇಲೆ ಹಲವಾರು ಬಾರಿ ಒದ್ದರು. ಅವರು ತನ್ನ ಪ್ಯಾಂಟ್ ಬಿಚ್ಚಿದರು. ನನ್ನ ಪ್ಯಾಂಟ್ ಅನ್ನೂ ಬಲವಂತವಾಗಿ ಬಿಚ್ಚಿಸಿದರು” ಎಂದು ತಿಳಿಸಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಶ್ಲೀಲ ಸನ್ನೆ ಮಾಡಿದ್ದಾರೆ ಎಂದು ಆಕೆ ಹೇಳಿದ್ದಾರೆ.
ಮಹಿಳೆಯ ಆರೋಪಗಳನ್ನು ನಿರಾಕರಿಸಿರುವ ಪೊಲೀಸರು, “ಕೋಲ್ಕತ್ತಾದ 22ನೇ ಸಿಖ್ ರೆಜಿಮೆಂಟ್‌ಗೆ ನಿಯೋಜಿಸಲಾಗಿರುವ ಸೇನಾಧಿಕಾರಿ ಮತ್ತು ಅವರ ಸ್ನೇಹಿತೆ ಕುಡಿದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯೊಳಗಿನ ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸೇನಾ ಅಧಿಕಾರಿಯ ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ” ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಆರೋಪ-ಪ್ರತ್ಯಾರೋಪಗಳ ನಡುವೆ, ಪೊಲೀಸ್ ಮಹಾನಿರ್ದೇಶಕ ವೈ.ಬಿ. ಖುರಾನಿಯಾ ಅವರ ನಿರ್ದೇಶನದ ಮೇರೆಗೆ ಚಂಡಕಾ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದ್ದು, ಸೆಪ್ಟೆಂಬರ್ 15ರಂದು ತಡರಾತ್ರಿ ಮನೆಗೆ ಮರಳುತ್ತಿದ್ದಾಗ ದಾರಿ ಮಧ್ಯೆ ಪುರುಷರ ಗುಂಪು ದಾಳಿ ನಡೆಸಿದೆ ಎಂಬ ಮಹಿಳೆಯ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಭುವನೇಶ್ವರ ನಗರದ ಸರ್ಕಾರಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆಯ ಬಳಿಕ ಅಳುತ್ತಾ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಕುತ್ತಿಗೆಯಲ್ಲಿ ಬ್ರೇಸ್ ಮತ್ತು ಕೈಯಲ್ಲಿ ಪ್ಲಾಸ್ಟರ್ ಹಾಕಿರುವುದು ಕಂಡು ಬಂದಿದೆ.
Must listen Ankita Pradhan, Fiancee of #Army officer, Daughter of Rtd Brigadier of #IndianArmy statement, Her pain and injuries make me think twice and it make my night sleepless. What happened in #Bharatpur PS of #Odisha. Why Capt and his Fiancée suffered all this trauma… pic.twitter.com/nPiTt5tept
— Manish Prasad (@manishindiatv) September 19, 2024
ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆ ಸಂಬಂಧ ಸ್ವಯಂಪ್ರೇರಿತ ತನಿಖೆ ಕೈಗೊಂಡಿದ್ದು ಪೊಲೀಸರಿಂದ ವರದಿ ಕೇಳಿದೆ. ಈ ಪ್ರಕರಣದ ತನಿಖೆಯನ್ನು ಒಡಿಶಾ ಪೊಲೀಸರ ಅಪರಾಧ ವಿಭಾಗಕ್ಕೆ ವಹಿಸಲಾಗಿದೆ.
ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಮಹಿಳೆ ಸೇನಾಧಿಕಾರಿಯ ಭಾವಿ ಪತ್ನಿ ಹಾಗೂ ನಿವೃತ್ತ ಸೇನಾಧಿಕಾರಿಯ ಮಗಳು ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ಈ ವರೆಗಿನ ಅತೀ ದೊಡ್ಡ ಸೈಬರ್ ವಂಚನೆ ಪ್ರಕರಣ ಬೇಧಿಸಿದ ರಾಜ್ಯ ಪೊಲೀಸ್; 9 ನೇ ತರಗತಿ ಡ್ರಾಪೌಟ್ ಆಗಿದ್ದ ಆರೋಪಿ!


