ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದೆರಡು ತಿಂಗಳಿನಿಂದ ವಿಡಿಯೋವೊಂದು ಹರಿದಾಡುತ್ತಿದೆ. ವಿಡಿಯೋವೊದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಕ್ಯಾಮರಾ ಓಪನ್ ಮಾಡಿಕೊಂಡು ಕೊಠಡಿಯೊಂದಕ್ಕೆ ನುಗ್ಗುತ್ತಾನೆ. ಆಗ ಅಲ್ಲಿ ಕೆಲ ವಿದ್ಯಾರ್ಥಿನಿಯರು ನಿಂತಿರುವುದು ಕಾಣುತ್ತದೆ. ಆ ವಿದ್ಯಾರ್ಥಿನಿಯರ ಪೈಕಿ ಕೆಲವರು ಹಿಜಾಬ್ ಧರಿಸಿರುವುದು ನೋಡಬಹುದು.
ವಿಡಿಯೋದಲ್ಲಿ ಮೊಬೈಲ್ ಹಿಡಿದ ವ್ಯಕ್ತಿ “ಏನು ಮಾಡುತ್ತಿದ್ದೀರಿ? ಎಂದು ತೆಲುಗು ಭಾಷೆಯಲ್ಲಿ ಕೇಳುತ್ತಾನೆ. ಅದಕ್ಕೆ ನಮಾಝ್ ಮಾಡುತ್ತೀದ್ದೇವೆ ಎಂದು ವಿದ್ಯಾರ್ಥಿನಿಯರು ಉತ್ತರಿಸುತ್ತಾರೆ. ಆಗ ಯಾರು ಕಳಿಸಿದ್ರು? ಎಂದು ಆ ವ್ಯಕ್ತಿ ಮರುಪ್ರಶ್ನೆ ಹಾಕುತ್ತಾನೆ. ಆಗ ವಿದ್ಯಾರ್ಥಿನಿಯರು ಪ್ರಿಯಾ ಮ್ಯಾಮ್ ಎಂದು ಹೇಳಿದಂತೆ ಕೇಳಿಸುತ್ತದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲ ಬಲಪಂಥೀಯ ಸಾಮಾಜಿಕ ಜಾಲತಾಣ ಖಾತೆಗಳು ” ತೆಲಂಗಾಣದ ಶಾಲೆಯೊಂದರಲ್ಲಿ ಹಿಂದೂ ಶಾಲಾ ಬಾಲಕಿಯರನ್ನು ಮತಾಂತರ ಮಾಡಲಾಗುತ್ತಿದೆ. ಅವರಿಂದ ಶಾಲೆಯಲ್ಲೇ ನಮಾಝ್ ಮಾಡಿಸಲಾಗಿದೆ” ಎಂದು ಸುದ್ದಿ ಹಬ್ಬಿವೆ. ಅಲ್ಲದೆ, ತೆಲಂಗಾಣದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿವೆ.
ಪೋಸ್ಟ್‌ಗಳ ಸ್ಕ್ರೀನ್ ಶಾಟ್‌ಗಳು ಕೆಳಗಿದೆ.


ಫ್ಯಾಕ್ಟ್‌ಚೆಕ್ : ವಿಡಿಯೋ ಗಮನಿಸಿದಾಗಲೇ ನಮಗೆ ಅದು ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಆಗುತ್ತಿರುವುದು ಗೊತ್ತಾಗಿದೆ. ಏಕೆಂದರೆ, ಈ ವಿಡಿಯೋದಲ್ಲಿರುವ ಘಟನೆ ನಡೆದಾಗಲೇ, ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಹಾಗಾಗಿ, ವಿಡಿಯೋದ ಸತ್ಯಾಸತ್ಯತೆ ನಮಗೆ ತಿಳಿದಿದೆ.
ಅಸಲಿಗೆ, ವಿಡಿಯೋ ಹಂಚಿಕೊಂಡಿರುವ ಬಲಪಂಥೀಯ ಸಾಮಾಜಿಕ ಜಾಲತಾಣ ಖಾತೆಗಳು ಸುಳ್ಳು ಸುದ್ದಿಯೊಂದಿಗೆ ಕೋಮುದ್ವೇಷ ಹರಡುವ ಪ್ರಯತ್ನ ಮಾಡಿವೆ. ವಿಡಿಯೋದಲ್ಲಿರುವುದು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರಿಂದ ನಮಾಝ್ ಮಾಡಿಸಿದ ದೃಶ್ಯವಲ್ಲ. ಅದು ಮುಸ್ಲಿಂ ವಿದ್ಯಾರ್ಥಿನಿಯರೇ ನಮಾಝ್ ಮಾಡಿರುವ ದೃಶ್ಯವಾಗಿದೆ. ಆದರೆ, ಶಾಲೆಗೆ ನುಗ್ಗಿದ ಬಜರಂಗದಳದ ಗುಂಪು ವಿದ್ಯಾರ್ಥಿನಿಯರ ನಮಾಝ್‌ಗೆ ಅಡ್ಡಿಪಡಿಸಿರುವುದು ನಿಜ.
ಈ ಘಟನೆಯ ಕುರಿತು 27 ಆಗಸ್ಟ್ 2024ರಂದು ‘ದಿ ಸಿಯಾಸತ್ ಡೈಲಿ‘ ಎಂಬ ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟಗೊಂಡಿತ್ತು. ವರದಿಗೆ ” ತೆಲಂಗಾಣದಲ್ಲಿ ಶಾಲೆಯಲ್ಲಿ ನಮಾಝ್ ಮಾಡಿದ್ದಕ್ಕೆ ಬಾಲಕಿಯರಿಗೆ ಥಳಿಸಿದ ಬಜರಂಗದಳ : ಅಮ್ಜದ್ ಉಲ್ಲಾ” ಎಂದು ಶೀರ್ಷಿಕೆ ಕೊಡಲಾಗಿತ್ತು.
ವರದಿಯಲ್ಲಿ “ತೆಲಂಗಾಣದ ಶಾಲೆಯೊಂದರಲ್ಲಿ ನಮಾಝ್ ಮಾಡುತ್ತಿದ್ದ ಬಾಲಕಿಯರಿಗೆ ಬಜರಂಗದಳದವರು ಥಳಿಸಿದ್ದಾರೆ ಎಂದು ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ವಕ್ತಾರ ಅಮ್ಜದ್ ಉಲ್ಲಾ ಖಾನ್ ಆರೋಪಿಸಿದ್ದಾರೆ” ಎಂದು ಹೇಳಲಾಗಿತ್ತು.
“ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಪತ್ರ ಬರೆದಿರುವ ಅಮ್ಜದ್ ಉಲ್ಲಾ, ಬಜರಂಗದಳದ ಸದಸ್ಯರು ವನಪರ್ತಿಯ ಚಾಣಕ್ಯ ಹೈಸ್ಕೂಲ್‌ಗೆ ನುಗ್ಗಿ ಶಾಲಾ ಅಧಿಕಾರಿಗಳ ಅನುಮತಿಯೊಂದಿಗೆ ನಮಾಝ್ ಮಾಡುತ್ತಿದ್ದ ಕೆಲ ಮುಸ್ಲಿಂ ಬಾಲಕಿಯರಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಅವರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ” ತಿಳಿಸಲಾಗಿದೆ.
“ಆಗಸ್ಟ್ 23ರಂದು ಶುಕ್ರವಾರ ಘಟನೆ ನಡೆದಿದ್ದರೂ, ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಅಮ್ಜದ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ” ಎಂದು ವರದಿಯಲ್ಲಿ ವಿವರಿಸಲಾಗಿದೆ.

ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ನಾವು ಅಮ್ಜದ್ ಉಲ್ಲಾ ಅವರ ಎಕ್ಸ್ ಖಾತೆಯನ್ನು ಪರಿಶೀಲಿಸಿದ್ದೇವೆ. ಈ ವೇಳೆ “ಆಗಸ್ಟ್ 27, 2024ರಂದು ಅವರು ವೈರಲ್ ವಿಡಿಯೋ ಸಹಿತ ಪೋಸ್ಟ್ ಒಂದನ್ನು ಹಾಕಿರುವುದು ಕಂಡು ಬಂದಿದೆ.
ಆ ಪೋಸ್ಟ್‌ನಲ್ಲಿ “ಆ.23 ರಂದು ಬಜರಂಗದಳದ ಕೆಲವು ಸಮಾಜ ವಿರೋಧಿಗಳು ವನಪರ್ತಿಯ ಚಾಣಕ್ಯ ಪ್ರೌಢಶಾಲೆಗೆ ನುಗ್ಗಿ ಶಾಲಾ ಅಧಿಕಾರಿಗಳಿಂದ ಅನುಮತಿ ಪಡೆದು ನಮಾಝ್ ಮಾಡುತ್ತಿದ್ದ ಕೆಲ ಮುಸ್ಲಿಂ ಬಾಲಕಿಯರನ್ನು ಬೆದರಿಸಿ ಥಳಿಸಿದ್ದಾರೆ. ಅಲ್ಲದೆ, ಶಾಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಪರ್ಯಾಸವೆಂದರೆ ಘಟನೆ ನಡೆದು ಮೂರು ದಿನಗಳು ಕಳೆದರೂ ಯಾರ ಮೇಲೂ ಎಫ್‌ಐಆರ್ ದಾಖಲಾಗಿಲ್ಲ. ಆದ್ದರಿಂದ ಈ ಘಟನೆಯ ಕುರಿತು ತನಿಖೆ ನಡೆಸಿ ಬಜರಂಗದಳದ ಎಲ್ಲಾ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ವನಪರ್ತಿ ಎಸ್‌ಪಿಗೆ ಆದೇಶ ನೀಡಬೇಕು. ಈ ಘಟನೆ ಮುಸಲ್ಮಾನರ ಭಾವನೆಗಳನ್ನು ಘಾಸಿಗೊಳಿಸಿದ್ದು ಮಾತ್ರವಲ್ಲದೆ, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಯವನ್ನುಂಟು ಮಾಡಿದೆ” ಎಂದು ಅಮ್ಜದ್ ಉಲ್ಲಾ ಖಾನ್ ಬರೆದುಕೊಂಡಿದ್ದಾರೆ.
Some anti-social elements belonging to Bajrang Dal entered Chanakya High School in Wanaparthy and threatened and thrashed some muslim girls who were offering Namaz with permission from school authorities and also warned the school authorities on 23rd Aug, but irony of the… pic.twitter.com/px3119QvD6
— Amjed Ullah Khan MBT (@amjedmbt) August 27, 2024
ಒಟ್ಟಿನಲ್ಲಿ ತೆಲಂಗಾಣದ ವನಪರ್ತಿಯ ಚಾಣಕ್ಯ ಎಂಬ ಪ್ರೌಢ ಶಾಲೆಯಲ್ಲಿ ಶಿಕ್ಷಕರ ಅನುಮತಿ ಪಡೆದು ಮುಸ್ಲಿಂ ಬಾಲಕಿಯರು ಒಂದು ಕೊಠಡಿಯಲ್ಲಿ ನಮಾಝ್ ಮಾಡುತ್ತಿದ್ದರು. ಅಲ್ಲಿಗೆ ನುಗ್ಗಿದ್ದ ಬಜರಂಗದಳದವರು ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ ನಮಾಝ್‌ಗೆ ಅಡ್ಡಿಪಡಿಸಿದ್ದರು. ಅಲ್ಲದೆ, ಶಾಲೆಯ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಬಲಪಂಥೀಯರು ” ತೆಲಂಗಾಣದ ಶಾಲೆಯಲ್ಲಿ ಮತಾಂತರ, ಹಿಂದೂ ವಿದ್ಯಾರ್ಥಿನಿಯರಿಂದ ನಮಾಝ್ ಮಾಡಿಸಲಾಗಿದೆ” ಎಂದು ಸುಳ್ಳು ಮತ್ತು ಕೋಮುದ್ವೇಷದ ಸುದ್ದಿ ಹಬ್ಬಿಸಿದ್ದಾರೆ.
ಇದನ್ನೂ ಓದಿ : FACT CHECK | ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲವೇ ? ಇತಿಹಾಸ ತಿರುಚಲಾಗಿದೆಯಾ?


