ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಮಲಯಾಳಂನ ಖ್ಯಾತ ನಟ ಸಿದ್ದಿಕ್ ಅವರಿಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿದ್ದಿಕ್ ಅವರ ಭಾವಚಿತ್ರದೊಂದಿಗೆ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ವಿವಿಧ ಪತ್ರಿಕೆಗಳಲ್ಲಿ ಲುಕ್‌ಔಟ್ ನೋಟಿಸ್ ಪ್ರಕಟವಾಗಿದೆ. ತಿರುವನಂತಪುರಂನ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅವರು ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ 24 ರಂದು ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಸಿದ್ದಿಕ್ ನಾಪತ್ತೆಯಾಗಿದ್ದಾರೆ. ಕಳೆದ ತಿಂಗಳು ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ಪೊಲೀಸರು ಅವರನ್ನು ಬಂಧಿಸಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
ಕಳೆದ ತಿಂಗಳು, ನಟಿಯೊಬ್ಬರು ಮಾಧ್ಯಮಗಳ ಮೂಲಕ ಅತ್ಯಾಚಾರದ ಆರೋಪವನ್ನು ಎತ್ತಿದ್ದರು. ಇದರ ನಂತರ ಸಿದ್ದಿಕ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದರು. ನಂತರ ಮಹಿಳೆ ತಿರುವನಂತಪುರಂ ನಗರ ಪೊಲೀಸರಿಗೆ ದೂರು ನೀಡಿದ್ದರು.
ಕಳೆದ ತಿಂಗಳು ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ, ಕೆಲವು ಮಹಿಳೆಯರು ಚಿತ್ರರಂಗದ ಕೆಲವು ಪ್ರಮುಖ ನಟರು ಸೇರಿದಂತೆ ವಿವಿಧ ಚಲನಚಿತ್ರ ವೃತ್ತಿಪರರ ವಿರುದ್ಧ ಲೈಂಗಿಕ ಕಿರುಕುಳ/ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದರು. ಸಿದ್ದಿಕ್ ಹೊರತುಪಡಿಸಿ ಉಳಿದವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಸಿದ್ದಿಕ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಸಿಎಸ್ ಡಯಾಸ್, “ಅರ್ಜಿದಾರರ ವಿರುದ್ಧದ ಆರೋಪಗಳ ಒಟ್ಟಾರೆ ಪರಿಶೀಲನೆ, ಗಂಭೀರತೆ, ಜೊತೆಗೆ ದಾಖಲಾತಿಯಲ್ಲಿ ಇರಿಸಲಾದ ವಸ್ತುಗಳ ಜೊತೆಗೆ ಅಪರಾಧದಲ್ಲಿ ಅರ್ಜಿದಾರರ ಪಾಲ್ಗೊಳ್ಳುವಿಕೆಯನ್ನು ಪ್ರಾಥಮಿಕವಾಗಿ ತೋರಿಸುತ್ತದೆ. ಅಪರಾಧದ ಸರಿಯಾದ ತನಿಖೆಗಾಗಿ ಕಸ್ಟಡಿ ವಿಚಾರಣೆ ಅನಿವಾರ್ಯ” ಎಂದಿದ್ದರು.
“ಒಬ್ಬ ಮಹಿಳೆಯ ಲೈಂಗಿಕ ದೌರ್ಜನ್ಯದ ಅನುಭವಗಳು ಅವಳ ಪಾತ್ರದ ಪ್ರತಿಬಿಂಬವಲ್ಲ. ಆದರೆ, ಅವಳ ಸಂಕಟದ ಸೂಚನೆಯಾಗಿದೆ. ಮಾತನಾಡುವ ಮಹಿಳೆಯನ್ನು ದೂಷಿಸುವ ಪ್ರಯತ್ನವು ಅವಳನ್ನು ಮೌನಗೊಳಿಸುವ ತಂತ್ರವಾಗಿರಬಹುದು, ಇದು ಕಾನೂನಿನ ಪಾರಮ್ಯಕ್ಕೆ ಪ್ರತಿಕೂಲವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಆಪಾದಿತ ಘಟನೆ ಮತ್ತು ದೂರಿನ ನಡುವೆ ಎಂಟು ವರ್ಷಗಳ ವಿಳಂಬವಾಗಿದೆ ಎಂಬ ವಾದದ ಮೇಲೆ, ಲೈಂಗಿಕ ಕಿರುಕುಳ ಮತ್ತು ಹಲ್ಲೆಯ ಬಲಿಪಶುಗಳು ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಡೆತಡೆಗಳನ್ನು ಅನುಭವಿಸಬಹುದು. ಇದು ಆಘಾತದ ಸಂದರ್ಭದಲ್ಲಿ ಅಗತ್ಯವಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿದೆ.
ಈ ಘಟನೆಯು 2016 ರಲ್ಲಿ ತಿರುವನಂತಪುರಂನ ಹೋಟೆಲ್ ಕೊಠಡಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಸಿದ್ದಿಕ್ ಅವರು 2014 ರಲ್ಲಿ ಫೇಸ್‌ಬುಕ್ ಮೂಲಕ ಸಂತ್ರಸ್ತೆಯೊಂದಿಗೆ ಸಂಪರ್ಕ ಹೊಂದಿದ್ದರು. ಆಗಾಗ್ಗೆ ಆಕೆ ಮತ್ತು ಅವರ ತಾಯಿಯೊಂದಿಗೆ ಫೋನ್ ಮತ್ತು ಸ್ಕೈಪ್ ಮೂಲಕ ಸಂವಹನ ನಡೆಸುತ್ತಿದ್ದರು. ಸಂತ್ರಸ್ತೆಯನ್ನು ಸಿನಿಮಾದಲ್ಲಿ ಕೆಲಸ ಮಾಡಲು ಪ್ರೋತ್ಸಾಹಿಸಿ, ಸಹಾಯ ಮಾಡುವ ಭರವಸೆ ನೀಡಿದದರು ಎಂದು ತಿಳಿದುಬಂದಿದೆ.
2016 ರಲ್ಲಿ, ಆರೋಪಿಯು ಸಂತ್ರಸ್ತೆ ಮತ್ತು ಆಕೆಯ ಪೋಷಕರನ್ನು ಚಲನಚಿತ್ರ ಪ್ರೀಮಿಯರ್ ಶೋಗೆ ಹಾಜರಾಗಲು ಆಹ್ವಾನಿಸಿದ್ದರು. ನಂತರ, ಅವರು ಹೊಸ ಚಿತ್ರದ ಬಗ್ಗೆ ಚರ್ಚಿಸಲು ಆಕೆಯನ್ನು ಹೋಟೆಲ್ ಕೋಣೆಗೆ ಕರೆದರು, ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ದೂರುದಾರೆ ಹೇಳಿದ್ದಾರೆ.
ಇದನ್ನೂ ಓದಿ; ಅಕ್ರಮ ಹಣ ವರ್ಗಾವಣೆ ಪ್ರಕರಣ: ತೆಲಂಗಾಣ ಸಚಿವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ


