ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಲೋಕಾಯುಕ್ತ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಆದೇಶದನುಸಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಎ1, ಅವರ ಪತ್ನಿ ಪಾರ್ವತಿ ಎ 2, ಬಾಮೈದ ಎ3 ಮತ್ತು ಜಮೀನು ಮಾಲೀಕ ಎ4 ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಯಾದವ್ ಪ್ರಕರಣ ದಾಖಲಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಇತರರ ವಿರುದ್ದ ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬೇಕೆಂದು ಎಸ್‌ಪಿ ಉದೇಶ್ ಯಾದವ್ ಅವರು ಲೋಕಾಯುಕ್ತ ಎಡಿಜಿಪಿ ಮೌನೀಶ್ ಕರ್ಬಿಕರ್ ಅವರಿಗೆ ಪತ್ರ ಬರೆದು ಸಲಹೆ ಕೇಳಿದ್ದರು. ಹಾಗೆಯೇ ಕಾನೂನು ತಜ್ಞರ ಅಭಿಪ್ರಾಯ ಕೂಡ ಕೇಳಿದ್ದರು.
ಪತ್ರಕ್ಕೆ ಪ್ರತಿಕ್ರಿಯಿಸಿರುವ ಎಡಿಜಿಪಿ ಮೌನೀಶ್ ಅವರು, ಜನಪ್ರತಿಧಿನಿಗಳ ನ್ಯಾಯಾಲಯದ ನಿರ್ದೇಶನದಂತೆ ಸಿಆರ್‌ಪಿಸಿ ಸೆಕ್ಷನ್ 156 (3) ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ ಹಿಂಪಡೆದ ಕರ್ನಾಟಕ : ಇದೇ ರೀತಿಯ ನಿರ್ಧಾರ ಕೈಗೊಂಡ ಇತರ ರಾಜ್ಯಗಳು ಯಾವುವು?


