ಬೆಂಗಳೂರಿನ ಗಂಗೇನಹಳ್ಳಿ (ಗಂಗಾನಗರ)ಯ 1 ಎಕರೆ 11 ಗುಂಟೆ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿಗೆ ಸಮನ್ಸ್ ನೀಡಿದ್ದರು. ಹಾಗಾಗಿ, ಶುಕ್ರವಾರ ಸಂಜೆ 5.40ಕ್ಕೆ ತನಿಖಾಧಿಕಾರಿ ಬಸವರಾಜ ಮಗ್ದುಂ ಎದುರು ಕುಮಾರಸ್ವಾಮಿ ಹಾಜರಾಗಿದ್ದರು.
ವರದಿಗಳ ಪ್ರಕಾರ, ಸುಮಾರು ಒಂದು ಮುಕ್ಕಾಲು ಗಂಟೆ ಕುಮಾರಸ್ವಾಮಿಯನ್ನು ವಿಚಾರಣೆ ನಡೆಸಲಾಗಿದೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಕೆಲವು ಪ್ರಶ್ನೆಗಳಿಗೆ “ನನಗೇ ಗೊತ್ತಿಲ್ಲ” ಎಂದಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆ.21ರಂದು ಯಡಿಯೂರಪ್ಪ ಕೂಡ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
2007 ಮತ್ತು 2010ರ ನಡುವೆ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿ.ಎಸ್ ಯಡಿಯೂರಪ್ಪ ಅವರು ಗಂಗಾನಗರದ ಬಳಿಯ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿ, ಕುಮಾರಸ್ವಾಮಿಯವರ ಬಾಮೈದನ ಹೆಸರಿಗೆ ನೋಂದಣಿ ಮಾಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭಿಸಿದ್ದ ಡಿನೋಟಿಫಿಕೇಷನ್ ಪ್ರಕ್ರಿಯೆಯನ್ನು ಯಡಿಯೂರಪ್ಪ ಅವಧಿಯಲ್ಲಿ ಮುಕ್ತಾಯಗೊಳಿಸಲಾಗಿತ್ತು ಎಂಬ ಆರೋಪವಿದೆ.
ಇದನ್ನೂ ಓದಿ : ನಿರ್ಮಲಾ ಸೀತಾರಾಮನ್ ವಿರುದ್ದ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ : ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ? ಎಂದ ಸಿಎಂ ಸಿದ್ದರಾಮಯ್ಯ


