ಸಾವರ್ಕರ್ ಕುರಿತ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಆಸ್ಕರ್‌ಗೆ ಪ್ರವೇಶ ಪಡೆದಿದೆ ಎಂದು ಕಳೆದ ಸೆಪ್ಟೆಂಬರ್ 24ರಂದು ಎಲ್ಲೆಡೆ ಸುದ್ದಿಯಾಗಿತ್ತು. ಭಾರತದಿಂದ ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್‌ಗೆ ಸಲ್ಲಿಕೆಯಾಗಿದೆ ಎಂದ ಮರುದಿನವೇ ಸಾರ್ವಕರ್ ಸಿನಿಮಾ ಕೂಡ ಪ್ರವೇಶ ಪಡೆದಿದೆ ಎಂದು ವರದಿಯಾಗಿತ್ತು.
ಸಾವರ್ಕರ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಸಂದೀಪ್ ಸಿಂಗ್ ಸ್ವತಃ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ “ನಮ್ಮ ಸಿನಿಮಾ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಅನ್ನು ಅಧಿಕೃತವಾಗಿ ಆಸ್ಕರ್‌ಗೆ ಸಲ್ಲಿಕೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್ಐ) ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಇದೊಂದು ಅಧ್ಯತ್ಭುತ ಪಯಣ. ನಮ್ಮನ್ನು ಪ್ರೋತ್ಸಾಹಿಸಿದ ಸರ್ವರಿಗೂ ಅಭಾರಿಯಾಗಿದ್ದೇವೆ” ಎಂದು ಬರೆದುಕೊಂಡಿದ್ದರು.

ಸಂದೀಪ್ ಸಿಂಗ್ ಅವರ ಪೋಸ್ಟ್ ಆಧರಿಸಿ ನೂರಾರು ಮಾಧ್ಯಮಗಳು ಸಾವರ್ಕರ್ ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿದೆ ಎಂದು ಸುದ್ದಿ ಪ್ರಕಟಿಸಿತ್ತು. ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಮಂದಿ ಸಾವರ್ಕರ್ ಚಿತ್ರಂಡಕ್ಕೆ ಅಭಿನಂದನೆ ಹೇಳಿ ಪೋಸ್ಟ್ ಹಾಕಿದ್ದರು.

ಆದರೆ, ಮರುದಿನ ಸಾರ್ವಕರ್ ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿಲ್ಲ. ಸಿನಿಮಾ ತಂಡ ಸುಳ್ಳು ಹೇಳಿಕೆ ಕೊಟ್ಟು ನಗೆಪಾಟಲಿಗೀಡಾಗಿದೆ ಎಂದು ವರದಿಯಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಹಾಗಾದರೆ, ಸಾರ್ವಕರ್ ಕುರಿತ ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿದೆ ಎಂಬುವುದು ಸುಳ್ಳಾ? ಚಿತ್ರತಂಡ ಇಡೀ ದೇಶದ ಜನತೆಗೆ ಸುಳ್ಳು ಹೇಳಿತಾ? ಎಂಬವುದನ್ನು ನೋಡೋಣ.
ಫ್ಯಾಕ್ಟ್‌ಚೆಕ್ : ಅಸಲಿಗೆ ಸಾವರ್ಕರ್ ಕುರಿತ ಸಿನಿಮಾ ಅಧಿಕೃತವಾಗಿ ಭಾರತದಿಂದ ಆಸ್ಕರ್‌ಗೆ ಸಲ್ಲಿಕೆಯಾಗಿಲ್ಲ. ಒಂದು ದೇಶವನ್ನು ಪ್ರತಿನಿಧಿಸಿ ಆಸ್ಕರ್‌ಗೆ ಸಿನಿಮಾ ಕಳಿಸಬೇಕಾದರೆ, ಅದನ್ನು ಆಯಾ ದೇಶದ ಉನ್ನತ ಮಟ್ಟದ ಸಮಿತಿ ಆಯ್ಕೆ ಮಾಡುತ್ತದೆ. ಭಾರತದಲ್ಲಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಆಸ್ಕರ್‌ಗೆ ಕಳಿಸುವ ಸಿನಿಮಾವನ್ನು ಆಯ್ಕೆ ಮಾಡುತ್ತದೆ. ಒಂದು ದೇಶದಿಂದ ಅಧಿಕೃತ ಪ್ರವೇಶಕ್ಕೆ ಒಂದು ಸಿನಿಮಾಗೆ ಮಾತ್ರ ಅವಕಾಶವಿರುತ್ತದೆ. ಈ ಬಾರಿ ಭಾರತದಿಂದ ‘ಲಾಪತಾ ಲೇಡಿಸ್’ ಸಿನಿಮಾವನ್ನು ಕಳಿಸಿಕೊಡಲಾಗಿದೆ.
'Laapataa Ladies' is India's official entry to the Oscars in the Best Foreign Film Category 2025. pic.twitter.com/2gjzgzsDDJ
— ANI (@ANI) September 23, 2024
ವೈಯಕ್ತಿಕವಾಗಿ ಅಥವಾ ಸ್ವತಂತ್ರವಾಗಿ ಯಾವುದೇ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಆಸ್ಕರ್‌ಗೆ ಸಲ್ಲಿಕೆ ಮಾಡಬಹುದು. ಈ ರೀತಿ ಸಾವರ್ಕರ್ ಸಿನಿಮಾವನ್ನು ಸಲ್ಲಿಕೆ ಮಾಡಲಾಗಿದೆಯೇ? ಎಂಬುವುದರ ಬಗ್ಗೆ ಮಾಹಿತಿಯಿಲ್ಲ.
ಸಾವರ್ಕರ್ ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೋಟ್ಟಕ್ಕರ “ಎಫ್‌ಫ್‌ಐ ಸಾವರ್ಕರ್ ಕುರಿತ ಸಿನಿಮಾವನ್ನು ಆಸ್ಕರ್‌ಗೆ ಕಳಿಸಿಲ್ಲ. ಸಾವರ್ಕರ್ ಸಿನಿಮಾ ನಿರ್ಮಾಪಕರು ತಪ್ಪು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡುತ್ತೇವೆ.. ಸ್ವತಂತ್ರವಾಗಿ ಕಳಿಸಿಕೊಡುವ ಸಿನಿಮಾಗಳಿಗೂ ಎಫ್‌ಎಫ್‌ಐಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಸಾವರ್ಕರ್ ಸಿನಿಮಾ ನಿರ್ಮಾಪಕ ಸಂದೀಪ್ ಸಿಂಗ್ ತನ್ನ ಪೋಸ್ಟ್‌ನಲ್ಲಿ ತಮ್ಮ ಸಿನಿಮಾವನ್ನು ಆಸ್ಕರ್‌ಗೆ ಕಳಿಸಿಕೊಡಲು ಆಯ್ಕೆ ಮಾಡಿದ್ದಕ್ಕೆ ಎಫ್‌ಎಫ್‌ಐಗೆ ಧನ್ಯವಾದ ಎಂಬಂತೆ ಬರೆದುಕೊಂಡಿದ್ದಾರೆ. ಇದು ದಾರಿ ತಪ್ಪಿಸುವ ಹೇಳಿಕೆಯಾಗಿದೆ.
29 ಸಿನಿಮಾಗಳಲ್ಲಿ ‘ಲಾಪತಾ ಲೇಡಿಸ್’ ಆಯ್ಕೆ
ಭಾರತದಿಂದ ಆಸ್ಕರ್‌ಗೆ ಕಳಿಸುವ ಸಿನಿಮಾವನ್ನು ಎಫ್‌ಎಫ್‌ಐ ಆಯ್ಕೆ ಮಾಡುತ್ತದೆ. ಈ ಆಯ್ಕೆಗೆ ದೇಶದಲ್ಲಿ ಯಾರು ಬೇಕಾದರೂ ನಿಯಮಗಳಿಗೆ ಅನುಸಾರವಾಗಿರುವ ಯಾವುದೇ ಸಿನಿಮಾಗಳನ್ನು ಕಳಿಸಿಕೊಡಬಹುದು. ಈ ವರ್ಷ ಒಟ್ಟು 29 ಸಿನಿಮಾಗಳು ಎಫ್‌ಎಫ್‌ಐಗೆ ಸಲ್ಲಿಕೆಯಾಗಿತ್ತು.
ಅವುಗಳಲ್ಲಿ ಪಾಯಲ್ ಕಪಾಡಿಯಾ ಅವರ ಕೇನ್ಸ್ ಪ್ರಶಸ್ತಿ ವಿಜೇತ ಆಲ್ ವಿ ಇಮ್ಯಾಜಿನ್ ಆಸ್ ಲೈಟ್, ಆನಂದ್ ಎಕ್ರಾಶಿ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಆಟಂ, ಕ್ರೀಡಾ ಡ್ರಾಮ ಮೈದಾನ್, ಚಂದು ಚಾಂಪಿಯನ್, ಆರ್ಟಿಕಲ್ 370, ಶ್ರೀಕಾಂತ್, ಸ್ಯಾಮ್ ಬಹದ್ದೂರ್, ಕಿಲ್, ಗುಡ್ ಲಕ್, ಅನಿಮಲ್, ಕಲ್ಕಿ 2898 ಎಡಿ, ತಂಗಲಾನ್, ವಾಝೈ, ಲಾಪತಾ ಲೇಡೀಸ್, ಸ್ವಾತಂತ್ರ್ಯ ವೀರ್ ಸಾವರ್ಕರ್. ಕೊಟ್ಟುಕ್ಕಲಿ, ಜಮಾ, ಜಿಗರ್ತಂಡ ಡಬಲ್ ಎಕ್ಸ್, ಉಲ್ಲೋಝುಕ್ಕು, ಅಭಾ, ಘರತ್ ಗಣಪತಿ, ಸ್ವರ್ಗಂಧರ್ವ ಸುಧೀರ್ ಫಡ್ಕೆ, ಮಹಾರಾಜ, ಮಂಗಳವಾರಂ ಮತ್ತು ಹನು-ಮಾನ್ ಒಳಗೊಂಡಿತ್ತು. ಈ ಪೈಕಿ ಲಾಪತಾ ಲೇಡಿಸ್ ಅನ್ನು ಎಫ್‌ಎಫ್‌ಐ ಆಯ್ಕೆ ಮಾಡಿದೆ.
ಮುಂದಿನ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾರ್ಚ್ 2, 2025ರಂದು ಭಾನುವಾರ ಸಂಜೆ 5:30ರಿಂದ ರಾತ್ರಿ 8:30ರ ನಡುವೆ ಯುಎಸ್‌ನ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದ ಹಾಲಿವುಡ್ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ : FACT CHECK : ಉತ್ತರ ಪ್ರದೇಶದಲ್ಲಿ ವೃದ್ದನ ಮುಖಕ್ಕೆ ಸ್ಪ್ರೇ ಮಾಡಿದವರು ಮುಸ್ಲಿಮರು ಎಂಬುವುದು ಸುಳ್ಳು


