ಹಿಂದೂ ಸನ್ಯಾಸಿಯೊಬ್ಬರು ಮಹಿಳೆಯರೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
ಭಾರತದಲ್ಲಿ ಹಿಂದೂ ಸನ್ಯಾಸಿಯೊಬ್ಬರು ಇಬ್ಬರು ಮಹಿಳೆಯರೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುವ ವೇಳೆ ಸಿಕ್ಕಿಬಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಅರೆ ನಗ್ನಾವಸ್ಥೆಯಲ್ಲಿರುವ ಇಬ್ಬರು ಮಹಿಳೆಯರೊಂದಿಗೆ ಏಕಾಂತವಾಗಿ ಇದ್ದ ಸಂದರ್ಭದಲ್ಲಿ ಗುಂಪೊಂದು ಕೊಠಡಿಗೆ ನುಗ್ಗಿಇಬ್ಬರು ಮಹಿಳೆ ಮತ್ತು ಸ್ವಾಮೀಜಿಯ ಮೇಲೆ ಹಲ್ಲೆ ಮಾಡುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸಿಕ್ಕಿಬಿದ್ದ ಸ್ವಾಮೀಜಿಯನ್ನು ನಿರ್ಮಲ್ ಸಿಂಗ್ ಜಿ ಹಿಂದೂ ಸನ್ಯಾಸಿ ಎಂದು ಆರೋಪಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವಾಮೀಜಿಯೊಬ್ಬರ ಫೋಟೊದೊಂದಿಗೆ ಸಂಯೋಜಿಸಲಾಗಿದ್ದು, ಫೋಟೊದಲ್ಲಿರುವ ಸ್ವಾಮೀಜಿ ಮತ್ತು ವಿಡಿಯೋದಲ್ಲಿರುವ ಸಾಧು ಇಬ್ಬರು ಒಬ್ಬರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕುರಿತು ಮಾಡಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 08 ಜುಲೈ 2023ರಂದು ಶ್ರೀಲಂಕಾದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ ಶ್ರೀಲಂಕಾದ ನವಗಮುವಾ ಪ್ರದೇಶದ ಪಲ್ಲೆಗಾಮ ಸುಮನ ಥೆರೋ ಎಂಬ ಬೌದ್ಧ ಸನ್ಯಾಸಿ ಇಬ್ಬರು ಮಹಿಳೆಯರೊಂದಿಗೆ ಅರೆನಗ್ನಾವಸ್ಥೆಯಲ್ಲಿ ಇದ್ದಾಗ ಗುಂಪೊಂದು ದಾಳಿ ನಡೆಸಿದೆ. ವರದಿಗಳು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವರದಿಯ ಪ್ರಕಾರ, 08 ಜುಲೈ 2023ರಂದು ನವಗಾಮುವ, ಬೊಮಿರಿಯಾ, ರಸಪಾನದಲ್ಲಿ ಸಂಭವಿಸಿದ ಆಘಾತಕಾರಿ ಘಟನೆಯಲ್ಲಿ, ಪಲ್ಲೆಗಾಮ ಸುಮನ ಥೇರೋ ಮತ್ತು ವಸತಿ ಗೃಹದಲ್ಲಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ನಂತರ ನವಗಾಮುವಾ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.
ಯುವಕರ ಗುಂಪೊಂದು ಬಲವಂತವಾಗಿ ಮನೆಗೆ ನುಗ್ಗಿ ತಾಯಿ ಮತ್ತು ಮಗಳ ಮೇಲೆ ದೈಹಿಕ ಹಲ್ಲೆ ನಡೆಸಿ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಪಲ್ಲೆಗಾಮ ಸುಮನ ಥೇರೋ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಸಮುದಾಯದಲ್ಲಿ ಪ್ರಮುಖ ಸ್ಥಾನದಲ್ಲಿರುವ ಸುಮನಾ ಥೇರೋ ಅವರು ಶಾಮೀಲಾಗಿರುವುದರಿಂದ ದೂರು ಹೆಚ್ಚಿನ ಗಮನ ಸೆಳೆಯಿತು.
ಜಾಮೀನಿನ ಮೇಲೆ ಬಿಡುಗಡೆಯಾದ ಶಂಕಿತ ಆರೋಪಿಗಳು, ಸುಮನ ಥೇರೋ ಇಬ್ಬರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನೀಡಿದ್ದೇವೆ ಎಂದು ಹೇಳಿದ್ದಾರೆ. ಈ ಆಪಾದಿತ ಸನ್ನಿವೇಶದಿಂದ ಕೋಪಗೊಂಡ ಗುಂಪು ಸನ್ಯಾಸಿ ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿತು. ಈ ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ ವಿಡಿಯೋ ವೈರಲ್ ಆಗಿತ್ತು ಮತ್ತು ಸಾರ್ವಜನಿಕವಾಗಿ ಖಂಡನೆಗೆ ಒಳಗಾಗಿತ್ತು.

ವರದಿಗಳ ಪ್ರಕಾರ, ಗುರೂಜಿ ಎಂದು ಕರೆಯಲ್ಪಡುವ ನಿರ್ಮಲ್ ಸಿಂಗ್ ಜಿ ಅವರು 2007 ರಲ್ಲಿ ನಿಧನರಾಗಿದ್ದಾರೆ ಎಂಬ ವರದಿಗಳು ಲಭ್ಯವಾಗಿದೆ. ಇಂಡಿಯಾ ಟುಡೇ ಜೊತೆಗಿನ ಸಂವಾದದಲ್ಲಿ, ದೆಹಲಿಯಲ್ಲಿರುವ ನಿರ್ಮಲ್ ಸಿಂಗ್ ಜಿ ಅವರ ಆಶ್ರಮದ ಸದಸ್ಯರೊಬ್ಬರು ಮಾತನಾಡಿದ್ದು, ಗುರೂಜಿಯವರಿಗೂ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಶ್ರಮ ಮುಂದಾಗಿದೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಿನಲ್ಲಿ, ವೈರಲ್ ವಿಡಿಯೋ ಶ್ರೀಲಂಕಾದ ಬೌದ್ಧ ಸನ್ಯಾಸಿಗೆ ಸಂಬಂಧಿಸಿದ್ದು, ವೈರಲ್ ವಿಡಿಯೋದಲ್ಲಿ ಭಾರತದ ಸ್ವಾಮೀಜಿ ಎಂದು ಹೇಳಲಾಗುತ್ತಿರುವ ಸನ್ಯಾಸಿ ನಿರ್ಮಲ್ ಸಿಂಗ್ 2007 ರಲ್ಲಿಯೇ ನಿಧನರಾಗಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಕಲಬುರಗಿಯ ಹಳೆಯ ವಿಡಿಯೋಗೆ ಕೋಮು ಬಣ್ಣ ಬಳಿದು ಹಂಚಿಕೊಳ್ಳುತ್ತಿರುವ ಬಲಪಂಥೀಯರು


