“ಕನಿಷ್ಠ ಪಕ್ಷ ದೇವರುಗಳನ್ನು ರಾಜಕೀಯದಿಂದ ದೂರವಿಡಬೇಕು” ಎಂದು ಹೇಳಿದ ಸುಪ್ರೀಂ ಕೋರ್ಟ್, ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನು ಸೋಮವಾರ ಪ್ರಶ್ನಿಸಿದೆ. ಆರೋಪಕ್ಕೆ ಸಂಬಂಧಿಸಿದಂತೆ ಅದಕ್ಕೆ ಪುರಾವೆ ನೀಡುವಂತೆ ಕೇಳಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠವು, ಸೆಪ್ಟಂಬರ್ 25 ರಂದು ಎಫ್‌ಐಆರ್ ದಾಖಲಿಸಿದ್ದರೂ, ಸೆಪ್ಟೆಂಬರ್ 26 ರಂದು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಆದರೂ ಸಹ ಮುಖ್ಯಮಂತ್ರಿ ಅವರು ಸೆಪ್ಟೆಂಬರ್ 18 ರಂದು ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿತು.
“ಉನ್ನತ ಸಾಂವಿಧಾನಿಕ ವ್ಯಕ್ತಿಗಳು ಸಾರ್ವಜನಿಕವಾಗಿ ಹೋಗಿ ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡುವುದು ಸೂಕ್ತವಲ್ಲ” ಎಂದು ಪೀಠ ಹೇಳಿದೆ.
ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೆ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠ ಕೇಳಿದೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ಸಲ್ಲಿಸಿದ ಅರ್ಜಿಗಳು ಒಂದು ಬ್ಯಾಚ್ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಪುರಾವೆ ಕೇಳಿತ್ತು. ಈ ಸಂದರ್ಭದಲ್ಲಿ “ಕನಿಷ್ಠ, ದೇವರುಗಳನ್ನು ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ” ಎಂದು ಪೀಠವು ಆಂಧ್ರ ಸಿಎಂಗೆ ಚಾಟಿ ಬೀಸಿತು.
ಇದು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಿದರೆ ಅದನ್ನು ಸ್ವೀಕಾರಾರ್ಹವಲ್ಲ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಲಾಗಿದೆ.
ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಈ ತಿಂಗಳ ಆರಂಭದಲ್ಲಿ ಹೇಳಿಕೊಂಡಿದ್ದರು, ಇದು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು.
ವೈಎಸ್ಆರ್ ಕಾಂಗ್ರೆಸ್ ಪಕ್ಷವು ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ “ಹೇಯ ಆರೋಪ”ದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ; ಆದೇಶ ಉಲ್ಲಂಘಿಸಿ ‘ಬುಲ್ಡೋಝರ್ ಕಾರ್ಯಾಚರಣೆ’ : ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ನೋಟಿಸ್


