ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನ ಇತ್ತೀಚೆಗೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ಪಾಲ್ಗೊಂಡಿದ್ದರು.
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಸಭೆಯಯಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿ ವಾಪಸ್ ಬಂದ ಬಳಿಕ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಯಲ್ಲಿ ಭಾರತಕ್ಕೆ ವೀಟೋ ಅಧಿಕಾರ (Veto power) ದೊರೆತಿದೆ ಎಂದು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಸೆಪ್ಟೆಂಬರ್ 26ರಂದು ಮೋದಿ ವಿದೇಶ ಭೇಟಿಯ ವಿಡಿಯೋವೊಂದನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದ ‘ಸನಾತನಿ ಹಿಂದೂ ಶೇಖರ್‘ ಎಂಬ ಬಳಕೆದಾರ ” ಭಾರತಕ್ಕೆ ವಿಟೋ ಅಧಿಕಾರದೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ದೊರೆತಿದೆ! ಅಭಿನಂದನೆಗಳು” ಎಂದು ಬರೆದುಕೊಂಡಿದ್ದರು.

ಇನ್ನೂ ಕೆಲ ಎಕ್ಸ್ ಖಾತೆಗಳಲ್ಲೂ ಇದೇ ಸಂದೇಶಗಳು ಹರಿದಾಡುತ್ತಿದೆ. ಹಾಗಾದರೆ, ಭಾರತ ಯುಎನ್ಎಸ್ಸಿಯಲ್ಲಿ ವೀಟೋ ಅಧಿಕಾರೊಂದಿಗೆ ಖಾಯಂ ಸದಸ್ಯತ್ವ ಪಡೆದಿರುವುದು ನಿಜಾನಾ? ಎಂದು ಪರಿಶೀಲಿಸೋಣ..
ಫ್ಯಾಕ್ಟ್ಚೆಕ್ : ಸಾಮಾಜಿಕ ಜಾಲತಾಣದ ಸಂದೇಶದ ಕುರಿತು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಆ ಕುರಿತ ಯಾವುದೇ ಮಾಧ್ಯಮ ವರದಿಗಳು ನಮಗೆ ಲಭ್ಯವಾಗಿಲ್ಲ. ನಾವು ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರದ ವೆಬ್ಸೈಟ್ಗಳನ್ನೂ ಪರಿಶೀಲನೆ ನಡೆಸಿದ್ದೇವೆ. ಅಲ್ಲೂ ಯಾವುದೇ ಮಾಹಿತಿ ದೊರೆತಿಲ್ಲ.
ಬಳಿಕ ನಾವು ವಿಶ್ವಸಂಸ್ಥೆಯ ವೆಬ್ಸೈಟ್ನಲ್ಲಿ ವೀಟೋ ಅಧಿಕಾರದ ಕುರಿತ ವಿಭಾಗವನ್ನು ಪರಿಶೀಲನೆ ನಡೆಸಿದ್ದೇವೆ. ಅಲ್ಲಿ ಈ ಹಿಂದಿನಂತೆ ಐದು ದೇಶಗಳಾದ ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಂ ಮತ್ತು ಯುನೈಟೆಡ್ ಸ್ಟೇಟ್ಸ್ ವೀಟೋ ಅಧಿಕಾರವನ್ನು ಹೊಂದಿರುವ ಬಗ್ಗೆ ಮಾಹಿತಿಯಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ 15 ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ ವಿಟೋ ಅಧಿಕಾರ ಹೊಂದಿರುವ ಐದು ಖಾಯಂ ರಾಷ್ಟ್ರಗಳು (ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಂ ಮತ್ತು ಯುನೈಟೆಡ್ ಸ್ಟೇಟ್ಸ್) ಖಾಯಂ ಸದಸ್ಯಸತ್ವ ಹೊಂದಿದೆ. ಉಳಿದ ಹತ್ತು ದೇಶಗಳು ಖಾಯಂ ಸದಸ್ಯರಲ್ಲ. ಈ ಸದಸ್ಯರನ್ನು ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಈ ರಾಷ್ಟ್ರಗಳಿಗೆ ವೀಟೋ ಅಧಿಕಾರ ಇರುವುದಿಲ್ಲ.
ಒಟ್ಟಿನಲ್ಲಿ, ಯುಎನ್ಎಸ್ಸಿಯಲ್ಲಿ ಭಾರತಕ್ಕೆ ವೀಟೋ ಅಧಿಕಾರ ದೊರೆತಿದೆ ಎಂಬ ಸಾಮಾಜಿಕ ಜಾಲತಾಣದ ಸಂದೇಶ ಸುಳ್ಳು ಎಂಬುವುದು ನಮ್ಮ ಪರಿಶೀಲನೆಯಲ್ಲಿ ಖಚಿತವಾಗಿದೆ.
ಇದನ್ನೂ ಓದಿ : FACT CHECK : ಸಾವರ್ಕರ್ ಸಿನಿಮಾ ಆಸ್ಕರ್ಗೆ ಪ್ರವೇಶ ಪಡೆದಿಲ್ವಾ? ನಿರ್ಮಾಪಕರು ಸುಳ್ಳು ಹೇಳಿದ್ರಾ?


