ತಮಿಳುನಾಡಿನ ಸ್ಯಾಮ್‌ಸಂಗ್ ಕಾರ್ಖಾನೆಯಲ್ಲಿ ನಡೆಯುತ್ತಿರುವ ಕಾರ್ಮಿಕರ ಮುಷ್ಕರ 4ನೇ ವಾರಕ್ಕೆ ಕಾಲಿಟ್ಟಿದೆ. ಮಂಗಳವಾರ ಕಾರ್ಮಿಕರ ಸಂಘಟನೆ ಬೀದಿ ಪ್ರತಿಭಟನೆಗಳನ್ನು ಆಯೋಜಿಸಿದ್ದಕ್ಕಾಗಿ ಸುಮಾರು 600 ಕಾರ್ಮಿಕರು ಮತ್ತು ಸಂಘಟನೆಯ ಸದಸ್ಯರನ್ನು ರಾಜ್ಯದ ಪೊಲೀಸರು ಬಂಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸೆಪ್ಟೆಂಬರ್ 9 ರಿಂದ ಚೆನ್ನೈ ನಗರದ ಸಮೀಪವಿರುವ ಸ್ಯಾಮ್‌ಸಂಗ್ ಕಾರ್ಖಾನೆಯ 1,000 ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯಾಚರಣೆ ನಿಲ್ಲಿಸಿ ಮುಷ್ಕರ ಹೂಡಿದ್ದು, ಕಾರ್ಖಾನೆ ಬಳಿಯ ತಾತ್ಕಾಲಿಕ ಟೆಂಟ್‌ನಲ್ಲಿ ಪ್ರತಿಭಟಿಸುತ್ತಿದ್ದಾರೆ.
ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪೆನಿಯ ಭಾರತೀಯ ಆದಾಯ ಸರಿ ಸುಮಾರು ವಾರ್ಷಿಕವಾಗಿ 12 ಬಿಲಿಯನ್ ಡಾಲರ್ ಆದಾಯ ಹೊಂದಿದ್ದು, ಇದು ಕಂಪೆನಿಯ ಆದಾಯದ ಮೂರನೇ ಒಂದು ಭಾಗವಾಗಿದೆ. ಮುಷ್ಕರ ನಿರತ ಕಾರ್ಮಿಕರು ಕಂಪೆನಿಯು ತಮಗೆ ಹೆಚ್ಚಿನ ವೇತನ ಮತ್ತು ತಮ್ಮ ಯೂನಿಯನ್‌ಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಪ್ರತಿಭಟನ ನಡೆಯುತ್ತಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಕಾರ್ಮಿಕ ಸಂಘಟನೆಯಾದ ಸಿಐಟಿಯು ವಹಿಸಿದೆ. ಸಿಐಟಿಯು ಸಂಯೋಜಿತ ಸ್ಯಾಮ್‌ಸಂಗ್ ಕಾರ್ಮಿಕರ ಸಂಘಟನೆ ನಡೆಸಿದ ಪ್ರತಿಭಟನಾ ಮೆರವಣಿಗೆಯು ಸಾರ್ವಜನಿಕರಿಗೆ ಅನಾನುಕೂಲವಾಗಿರುವುದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಚಾರ್ಲ್ಸ್ ಸ್ಯಾಮ್ ರಾಜದೊರೈ ಹೇಳಿದ್ದಾರೆ.
ಇದನ್ನೂಓದಿ: ಬ್ಯಾಂಕಾಕ್: ರಸ್ತೆ ಮಧ್ಯೆ ಹೊತ್ತಿ ಉರಿದ ಶಾಲಾ ಬಸ್, 25 ವಿದ್ಯಾರ್ಥಿಗಳು ಸಜೀವ ದಹನ
‘ನಾಲ್ಕು ಮದುವೆ ಮಂಟಪಗಳಲ್ಲಿ ಅವರನ್ನು ಬಂಧಿಸಿಡಲಾಗಿದೆ’ ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 16 ರಂದು ಕೂಡಾ ಪೊಲೀಸರು ಮುಷ್ಕರ ನಡೆಸುತ್ತಿರುವ 104 ಸ್ಯಾಮ್‌ಸಂಗ್ ಕಾರ್ಮಿಕರನ್ನು ಸುಮಾರು ಒಂದು ದಿನದವರೆಗೆ ಬಂಧಿಸಿದ್ದರು.
ತಮಿಳುನಾಡಿನ ಸ್ಯಾಮ್‌ಸಂಗ್ ಕಾರ್ಖಾನೆಯಲ್ಲಿ ಕಾರ್ಮಿಕರು ನಡೆಸುತ್ತಿರುವ ಮುಷ್ಕರವು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಅತಿದೊಡ್ಡ ಮುಷ್ಕರವಾಗಿದೆ. ಮುಷ್ಕರ ನಿರತ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಸ್ಯಾಮ್‌ಸಂಗ್ ಎಚ್ಚರಿಕೆ ನೀಡಿದೆ.
ಕಡಿಮೆ ಕೆಲಸದ ಸಮಯ ಮತ್ತು ಪರಿಷ್ಕೃತ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಕಾರ್ಮಿಕರು ಕಂಪೆನಿಯ ಮುಂದಿಟ್ಟಿದ್ದಾರೆ. ಸಿಐಟಿಯು ಬೆಂಬಲಿತ ಒಕ್ಕೂಟದ ಮಾನ್ಯತೆ ಪ್ರಮುಖ ಒತ್ತಾಯವಾಗಿದ್ದು, ಕಾರ್ಖಾನೆಯೊಳಗೆ ಕಂಪನಿಯ ಅಧಿಕಾರಿಗಳು ಗೌರವದಿಂದ ವರ್ತಿಸುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ನಟ ನಿವಿನ್ ಪೌಲಿ ವಿಚಾರಣೆ ನಡೆಸಿದ ಎಸ್‌ಐಟಿ
ನಡೆಯುತ್ತಿರುವ ಪ್ರತಿಭಟನೆಯಿಂದ ಕಾರ್ಖಾನೆಯ ಶೇ.80 ರಷ್ಟು ಉತ್ಪಾದನೆಗೆ ಹೊಡೆತ ಬಿದ್ದಿದೆ ಎಂದು ಕಾರ್ಮಿಕರು ಹೇಳಿದ್ದಾರೆ. ಜುಲೈ 25, 2024 ರಂದು, ಇ ಮುತ್ತುಕುಮಾರ್ ನೇತೃತ್ವದ CITU ಸದಸ್ಯರು ‘Samsung India Workers Union (SIWU)’ ನೋಂದಣಿಯನ್ನು ಪ್ರಾರಂಭಿಸಿದರು. ನೋಂದಣಿಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ 1455 ಕಾರ್ಮಿಕರನ್ನು ಸದಸ್ಯರನ್ನಾಗಿ ಪಟ್ಟಿಮಾಡಲಾಗಿತ್ತು. ನೋಂದಣಿಗೆ ಇನ್ನಷ್ಟೆ ಅನುಮೋದನೆ ದೊರೆಯಬೇಕಿದೆ. ಈ ಸಂಘಟನೆಗೆ ಆಗಸ್ಟ್ 20 ರಂದು ಲೇಬರ್ ಕಮಿಷನರ್‌ಗೆ Samsung India Electronics ನಿಂದ ಕಾನೂನು ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಮತ್ತೊಂದೆಡೆ ದಕ್ಷಿಣ ಕೊರಿಯಾದಲ್ಲಿ ನ್ಯಾಷನಲ್ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಯೂನಿಯನ್(NSEU) ಈ ವರ್ಷದ ಜುಲೈನಲ್ಲಿ ಅನಿರ್ದಿಷ್ಟ ಮುಷ್ಕರವನ್ನು ನಡೆಸಿತು. ಈ ಮುಷ್ಕರದ ವೇಳೆ ಸುಧಾರಿತ ವೇತನ, ಹೆಚ್ಚು ಪಾರದರ್ಶಕ ಬೋನಸ್ ವ್ಯವಸ್ಥೆ ಮತ್ತು ವರ್ಷಕ್ಕೆ ಹೆಚ್ಚುವರಿ ದಿನ ರಜೆಯನ್ನು ಕೋರಲಾಗಿತ್ತು. NSEU ಭಾರತದ ಮುಷ್ಕರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದು, ಭಾರತೀಯ ಸ್ಥಾವರದಲ್ಲಿ ಕಾರ್ಮಿಕರಿಗೆ ನ್ಯಾಯಯುತ ವೇತನ ಮತ್ತು ಸಮಂಜಸವಾದ ಕೆಲಸದ ಪರಿಸ್ಥಿತಿಗಳನ್ನು ಒದಗಿಸದಿರುವುದು ತೀವ್ರ ವಿಷಾದನೀಯ ಎಂದು ಹೇಳಿದೆ.
ದಕ್ಷಿಣ ಕೊರಿಯಾದಲ್ಲಿ ಸರಾಸರಿ ವೇತನವು ಸುಮಾರು 4.5 ಲಕ್ಷ ರೂ.ಗಳಷ್ಟಿದ್ದರೆ ಭಾರತದಲ್ಲಿ ಸರಾಸರಿ ವೇತನವು ಸುಮಾರು 30,000 ರೂ. ಆಗಿದೆ. ಸ್ಯಾಮ್‌ಸಂಗ್ ಇಂಡಿಯಾ ಪ್ಲಾಂಟ್‌ನಲ್ಲಿನ ಕಾರ್ಮಿಕ ವೆಚ್ಚವು ಅದರ ವಾರ್ಷಿಕ ಉತ್ಪಾದನಾ ಮೌಲ್ಯದ 0.3% ಕ್ಕಿಂತ ಕಡಿಮೆ ಎಂದು CITU ಹೇಳಿದೆ.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


