ಆದಿವಾಸಿ ಕವಿ ಮತ್ತು ಪತ್ರಕರ್ತೆ ಜೆಸಿಂತಾ ಕೆರ್ಕಟ್ಟಾ ಅವರು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನ್ ಡೆವಲಪ್‌ಮೆಂಟ್ ಮತ್ತು ರೂಮ್ ಟು ರೀಡ್ ಇಂಡಿಯಾ ಟ್ರಸ್ಟ್ ಜಂಟಿಯಾಗಿ ನೀಡುವ 2024 ರ ‘ರೂಮ್ ಟು ರೀಡ್ ಯಂಗ್ ಆಥರ್ ಅವಾರ್ಡ್’ ಅನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಗಾಝಾದ ಮೇಲಿನ ಇಸ್ರೇಲ್ ಆಕ್ರಮಣವನ್ನು ಪ್ರತಿಭಟಿಸಿ, ಪ್ಯಾಲೆಸ್ತೀನ್‌ನೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ಕೆರ್ಕೆಟ್ಟಾ ಪ್ರಶಸ್ತಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆರ್ಕೆಟ್ಟಾ ಅವರ ಮಕ್ಕಳ ಕವನ ಸಂಕಲನ ‘ಜಿರ್ಹುಲ್’ ಗೆ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ 7ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ.
“ಮಕ್ಕಳ ಶಿಕ್ಷಣಕ್ಕಾಗಿ ವಾಯು ಯಾನ ಕಂಪೆನಿ ಬೋಯಿಂಗ್‌ನೊಂದಿಗೆ ಕೂಡ ರೂಮ್ ಟು ರೀಡ್ ಇಂಡಿಯಾ ಟ್ರಸ್ಟ್ ಸಂಬಂಧ ಹೊಂದಿದೆ. ಶಸ್ತ್ರಾಸ್ತ್ರ ವ್ಯಾಪಾರ ಹಾಗೂ ಮಕ್ಕಳ ಪಾಲನೆ ಏಕ ಕಾಲದಲ್ಲಿ ನಡೆಯಲು ಹೇಗೆ ಸಾಧ್ಯ? ಏಕೆಂದರೆ, ಅದೇ ಶಸ್ತ್ರಾಸ್ತ್ರಗಳಿಂದ ಮಕ್ಕಳ ಜಗತ್ತು ನಾಶವಾಗುತ್ತಿದೆ” ಎಂದು ಕೆರ್ಕಟ್ಟಾ ಹೇಳಿದ್ದಾರೆ.
“ಮಕ್ಕಳಿಗಾಗಿ ಉತ್ತಮ ಜಗತ್ತನ್ನು ನಿರ್ಮಿಸುವಲ್ಲಿ ಹಿರಿಯರು ಮಹತ್ವದ ಪಾತ್ರವನ್ನು ನಿರ್ವಹಿಸದೇ ಇರುವಾಗ, ಈ ಪ್ರಶಸ್ತಿ ನಿಜವಾಗಿಯೂ ಯಾವ ಮೌಲ್ಯವನ್ನು ಹೊಂದಿದೆ? ಎಂದು ಪ್ರಶ್ನಿಸಿದ್ದಾರೆ.
ವಾಯು ಯಾನ ಕಂಪೆನಿ ಬೋಯಿಂಗ್ ಕಳೆದ 75ಕ್ಕೂ ಅಧಿಕ ವರ್ಷಗಳಿಂದ ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿದೆ. ಅಮೆರಿಕ ಸರಕಾರ ಅನುಮೋದಿಸಿದ ವಾಣಿಜ್ಯ ಒಪ್ಪಂದದ ಭಾಗವಾಗಿ ಬೋಯಿಂಗ್ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ.
ಮೇ ನಲ್ಲಿ ಎನ್‌ಪಿಆರ್ ನೆಟ್‌ವರ್ಕ್ ಮಾಡಿದ ವರದಿ ಪ್ರಕಾರ, ಅಮೆರಿಕದ ಕಂಪೆನಿಗಳಲ್ಲಿ ಬೋಯಿಂಗ್ 2021 ಹಾಗೂ 2023ರ ನಡುವೆ ಇಸ್ರೇಲ್‌ಗೆ ಬಾಂಬ್ ಹಾಗೂ ಸ್ಫೋಟಕಗಳ ಪೂರೈಕೆದಾರರಲ್ಲಿ ಪ್ರಥಮ ಸ್ಥಾನದಲ್ಲಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ರೂಮ್ ಟು ರೀಡ್ ಇಂಡಿಯಾ ಮತ್ತು ಬೋಯಿಂಗ್ ಪಾಲುದಾರಿಕೆಯೊಂದಿಗೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ : ಇಸ್ರೇಲ್ ಗುರಿಯಾಗಿಸಿಕೊಂಡು 200ಕ್ಕೂ ಹೆಚ್ಚು ಕ್ಷಿಪಣಿ ಹಾರಿಸಿದ ಇರಾನ್; ಸಾವುನೋವುಗಳ ವರದಿಗಳಿಲ್ಲ


