ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರರ ವಿರುದ್ದದ ಆಪಾದಿತ ಮುಡಾ ನಿವೇಶ ಹಂಚಿಕೆ ಅಕ್ರಮ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಡುವೆ, ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ದದ ಅಕ್ರಮ ಡಿನೋಟಿಫಿಕೇಷನ್ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಬುಧವಾರ (ಅ.2) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ “ನಗರದ ಪ್ರತಿಷ್ಠಿತ ಆರ್.ಎಂ.ವಿ ಬಡಾವಣೆಯ 2ನೇ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ 32 ಗುಂಟೆ ಜಮೀನಿನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡಿದ್ದ ಇಂದಿನ ಪ್ರತಿಪಕ್ಷ ನಾಯಕ ಆರ್. ಅಶೋಕ್, ಆ ಜಮೀನನ್ನು ಬಿಡಿಎಗೆ ವಾಪಸ್ ಮಾಡಿದ್ದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಅವರು, ಈ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ವಿವಾದಕ್ಕೀಡಾಗುತ್ತಿದ್ದಂತೆ 2011ರಲ್ಲಿ ಅಶೋಕ್ ಅವರು ನೋಂದಾಯಿತ ದಾನಪತ್ರದ ಮೂಲಕ ಜಮೀನನ್ನು ಬಿಡಿಎಗೆ ವಾಪಸ್ ಮಾಡಿದ್ದರು. ಈ ಜಾಗದ ವಿಷಯದಲ್ಲಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ ಅತ್ರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಅಶೋಕ್ ಜಮೀನನ್ನು ವಾಪಸ್ ಕೊಟ್ಟಿದ್ದ ಕಾರಣ ತನಿಖೆ ಅಗತ್ಯವಿಲ್ಲ ಎಂದು ಅತ್ರಿಯವರ ಅರ್ಜಿ ವಿಲೇವಾರಿ ಮಾಡಿತ್ತು. ಅಶೋಕ್ ಜೊತೆ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಅವರ ಪಾತ್ರ ಕೂಡ ಭೂಹಗರಣದಲ್ಲಿ ಇತ್ತು ಎಂದು ವಿವರಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆಯಲ್ಲವೇ?
ಅಕ್ರಮವಾಗಿ ಪಡೆದ ಜಮೀನನ್ನು ದಾನವಾಗಿ ವಾಪಸ್ ಕೊಡುವವರೆಗೆ (2003ರಿಂದ 2011) ಅದರಲ್ಲಿ 15 ಶೆಡ್, ಎರಡು ಕಾರ್ ಗ್ಯಾರೇಜ್ ಮತ್ತು ಗೋದಾಮು ನಿರ್ಮಿಸಿ ಕೋಟ್ಯಾಂತರ ರೂಪಾಯಿ ಬಾಡಿಗೆಯನ್ನು ಅಶೋಕ್ ಪಡೆದಿದ್ದಾರೆ. ಇದು ಹಣ ಅಕ್ರಮ ವರ್ಗಾವಣೆ (ತಡೆ) ಕಾಯ್ದೆ(ಪಿಎಂಎಲ್ಎ) ಅಡಿ ಅಪರಾಧ ಅಲ್ಲವೇ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸಚಿವರಾದ ಹೆಚ್.ಕೆ ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಸತೀಶ್ ಜಾರಕಿಹೊಳಿ ಜೊತೆ ಸುದ್ದಿಗೋಷ್ಠಿ ನಡೆಸಿದ ಪರಮೇಶ್ವರ್, ಆರ್. ಅಶೋಕ್ ಲೊಟ್ಟೆಗೊಲ್ಲಹಳ್ಳಿಯ ಜಮೀನನ್ನು ಅಕ್ರಮ ಡಿನೋಟಿಫೈ ಮಾಡಿರುವ ಪ್ರಕರಣದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಲೊಟ್ಟೆಗೊಲ್ಲಹಳ್ಳಿಯ ಸರ್ವೆ ನಂಬರ್ 10/1, 10/11 ಎಫ್1 ಮತ್ತು 10/11 ಎಫ್ 2ರ 32 ಗುಂಟೆ ಜಮೀನು ನೂರಾರು ಕೋಟಿ ರೂ.ಬೆಲೆ ಬಾಳುತ್ತದೆ. ಈ ಜಮೀನಿಗೆ ಸಂಬಂಧಿಸಿದಂತೆ ಬಿಡಿಎ 24/2/1977ರಲ್ಲಿ ಅಧಿಸೂಚನೆ ಹೊರಡಿಸಿತ್ತು. 27/2/1977ರಂದು ಮತ್ತೊಂದು ಅಧಿಸೂಚನೆ ಹಾಗೂ 31/8/1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು ಎಂದು ಪರಮೇಶ್ವರ್ ಹೇಳಿದ್ದಾರೆ.
ಇದಾದ ನಂತರ 26/2/2003 ಹಾಗೂ 12/11/2007ರಂದು ಎರಡು ಶುದ್ಧ ಕ್ರಯ ಪತ್ರದ ಮೂಲಕ ಈ ಬಿಡಿಎ ಮಾಲಕತ್ವದ ಅಧಿಸೂಚಿತ ಜಾಗವನ್ನು ಮೂಲ ಮಾಲಕರಿಂದ ಅಶೋಕ್ ಖರೀದಿ ಮಾಡಿದ್ದಾರೆ. 16/10/2009ರಂದು ರಾಮಸ್ವಾಮಿ ಎಂಬವರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಜಮೀನನ್ನು ಡಿನೋಟಿಫೈ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆ ಪತ್ರದ ಮೇಲೆ ‘ಕೂಡಲೆ ಕಡತದಲ್ಲಿ ಮಂಡಿಸಿ’ ಎಂದು ಷರಾ ನಮೂದಿಸಿ ಯಡಿಯೂರಪ್ಪ ಆದೇಶ ನೀಡಿದ್ದಾರೆ ಎಂದು ಪರಮೇಶ್ವರ್ ವಿವರಿಸಿದ್ದಾರೆ.
ಅಲ್ಲದೇ, ಎರಡೇ ತಿಂಗಳಲ್ಲಿ ಆ ಜಮೀನನ್ನು ಡಿನೋಟಿಫೈ ಮಾಡಲಾಗುತ್ತದೆ. ಆನಂತರ, ನಿವೃತ್ತ ವಿಂಗ್ ಕಮಾಂಡರ್ ಜಿ.ವಿ.ಅತ್ರಿ ಎಂಬವರು ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡುತ್ತಾರೆ. ವಿಷಯ ಗಂಭೀರವಾಗುತ್ತಿದ್ದಂತೆ ಅಶೋಕ್ ಬಿಡಿಎ ಮಾಲಕತ್ವದಲ್ಲಿರುವ ಆ ಜಾಗವನ್ನು 27/8/2011ರಂದು ರಿಜಿಸ್ಟರ್ ಗಿಫ್ಟ್ ಡೀಡ್ ಮೂಲಕ ಸರ್ಕಾರಕ್ಕೆ ವಾಪಸ್ ಕೊಟ್ಟರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ: ಅಜಿತ್ ಬಣ ‘ಗಡಿಯಾರ’ ಚಿಹ್ನೆ ಬಳಸದಂತೆ ತಡೆಯಲು ಪ್ರಯತ್ನ ಮುಂದುವರಿಸಿದ ಶರದ್ ಪವಾರ್; ಸುಪ್ರೀಂ ಕೋರ್ಟಿಗೆ ಅರ್ಜಿ


