ವಿಡಿ ಸಾವರ್ಕರ್ ಮಾಂಸಹಾರ ಸೇವಿಸುತ್ತಿದ್ದ ಎಂದು ನೀಡಿದ ಹೇಳಿಕೆಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಬಜರಂಗದಳದ ಕಾರ್ಯಕರ್ತರೊಬ್ಬರು ಶಂಕರಪುರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. “ಆರೋಗ್ಯ ಸಚಿವರು ಸಾರ್ವಜನಿಕವಾಗಿ ತಮ್ಮ ಭಾಷೆಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು” ಎಂದು ದೂರುದಾರ ತೇಜಸ್ ಗೌಡ ಹೇಳಿದ್ದಾರೆ.
“ಅವರು ಆರೋಗ್ಯ ಸಚಿವರಾಗಿ ಜವಾಬ್ದಾರಿಯುತ ಸ್ಥಾನವನ್ನು ಹೊಂದಿದ್ದಾರೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವಾಗ ಅಥವಾ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಸಾವರ್ಕರ್ ಕುರಿತ ಅವರ ಇತ್ತೀಚಿನ ಹೇಳಿಕೆ ಅನುಚಿತವಾಗಿದೆ. ಸಾವರ್ಕರ್ ಅವರು ಬ್ರಾಹ್ಮಣರಾಗಿದ್ದರೂ ಮಾಂಸ ಸೇವಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ದಿನೇಶ್ ಗುಂಡೂರಾವ್ ಅವರನ್ನು ಕೇಳಲು ಬಯಸುತ್ತೇನೆ: ಸಾವರ್ಕರ್ ಅವರು ಗೋಮಾಂಸ ಸೇವಿಸಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಏನಾದರೂ ಪುರಾವೆ ಇದೆಯೇ ಅಥವಾ ನಾನು ನೇರವಾಗಿ ಕೇಳುತ್ತೇನೆ, ನಿಮ್ಮ ಕನಸಿನಲ್ಲಿ ಸಾವರ್ಕರ್ ಕಾಣಿಸಿಕೊಂಡಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಸಾವರ್ಕರ್ ಬಗ್ಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ ದೂರುದಾರ, “ಈ ವಿಷಯದ ಬಗ್ಗೆ ಸಾರ್ವಜನಿಕ ಚರ್ಚೆಗೆ ದಿನಾಂಕ, ಸ್ಥಳ ಮತ್ತು ಸಮಯವನ್ನು ನಿಗದಿಪಡಿಸುವಂತೆ ನಾನು ಗುಂಡೂರಾವ್ ಅವರಿಗೆ ಸವಾಲು ಹಾಕುತ್ತೇನೆ, ಸಾವರ್ಕರ್ ಅವರ ಬಗ್ಗೆ ಸುಳ್ಳು ಆರೋಪಗಳು ಮತ್ತು ವದಂತಿಗಳನ್ನು ಹರಡಲು ಅವಕಾಶ ನೀಡುವ ಬದಲು ನಾವು ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧರಿದ್ದೇವೆ. ನಿಮ್ಮ ಖಾತೆ ಮತ್ತು ಜನರ ಆರೋಗ್ಯದತ್ತ ಗಮನ ಹರಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.
ಅಕ್ಟೋಬರ್ 2 ರಂದು, ಗಾಂಧಿ ಹಂತಕ: ದಿ ಮೇಕಿಂಗ್ ಆಫ್ ನಾಥುರಾಮ್ ಗೋಡ್ಸೆ ಮತ್ತು ಅವರ ಐಡಿಯಾ ಆಫ್ ಇಂಡಿಯಾದ ಕನ್ನಡ ಆವೃತ್ತಿಯ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಗುಂಡೂ ರಾವ್, “ಸಾವರ್ಕರ್ ಗೋಹತ್ಯೆಯನ್ನು ವಿರೋಧಿಸಲಿಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರು. ಆದರೆ ಮಾಂಸಾಹಾರಿಯಾಗಿದ್ದರು. ಆ ಅರ್ಥದಲ್ಲಿ, ಅವರು ಆಧುನಿಕತಾವಾದಿಯಾಗಿದ್ದರು. ಅವರು ದನದ ಮಾಂಸವನ್ನೂ ತಿನ್ನುತ್ತಿದ್ದರು ಎಂದು ಕೆಲವರು ಹೇಳುತ್ತಾರೆ” ಎಂದು ಹೇಳಿದ್ದ ಸಚಿವ ದಿನೇಶ್ ಗುಂಡೂರಾವ್, ಸಾವರ್ಕರ್ ದನದ ಮಾಂಸ ಸೇವಿಸುತ್ತಿದ್ದರು ಎಂದು ನೇರವಾಗಿ ಹೇಳಿಲ್ಲ.
“ಗಾಂಧಿ ಅವರು ಸಸ್ಯಾಹಾರಿ ಮತ್ತು ಹಿಂದೂ ಧರ್ಮದಲ್ಲಿ ಆಳವಾಗಿ ನಂಬಿದ್ದರು. ಆದರೆ, ಅವರ ಕಾರ್ಯಗಳು ವಿಭಿನ್ನವಾಗಿವೆ. ಅವರು ಪ್ರಜಾಪ್ರಭುತ್ವ ವ್ಯಕ್ತಿಯಾಗಿದ್ದರು.. ಜಿನ್ನಾ ಒಬ್ಬ ಧರ್ಮನಿಷ್ಠ ಇಸ್ಲಾಮಿಸ್ಟ್, ವೈನ್ ಕುಡಿಯುತ್ತಿದ್ದರು ಮತ್ತು ಕೆಲವರ ಪ್ರಕಾರ, ಹಂದಿಮಾಂಸವನ್ನು ತಿನ್ನುತ್ತಿದ್ದರು. ಆದರೂ, ಅವರು ಅವರು ಮೂಲಭೂತವಾದಿಯಾಗಿರಲಿಲ್ಲ. ಆದರೆ, ಸಾವರ್ಕರ್ ಅವರು ರಾಜಕೀಯ ಅಧಿಕಾರಕ್ಕಾಗಿ ತಮ್ಮ ತತ್ವಶಾಸ್ತ್ರವನ್ನು ರಾಜಿ ಮಾಡಿಕೊಂಡರು” ಎಂದು ಹೇಳಿದ್ದರು.
ಇದನ್ನೂ ಓದಿ; ವಿಡಿ ಸಾವರ್ಕರ್ ಕುರಿತ ಹೇಳಿಕೆಗೆ ವಿರೋಧ; ಬಿಜೆಪಿ ಟೀಕೆಗೆ ಸೊಪ್ಪುಹಾಕದ ದಿನೇಶ್ ಗುಂಡೂರಾವ್


