ಲೈಂಗಿಕ ಕಿರುಕುಳ ತಡೆ ಕಾಯ್ದೆ(PoSH)ಗೆ ಅನುಗುಣವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಆಂತರಿಕ ಸಮಿತಿ(IC)ಯನ್ನು ಸ್ಥಾಪಿಸಬೇಕೆಂಬ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬೇಡಿಕೆಗೆ ಪ್ರತಿಕ್ರಿಯಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಹೆಚ್ಚುವರಿ 15 ದಿನಗಳ ಕಾಲಾವಕಾಶವನ್ನು ಕೋರಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಲೈಂಗಿಕ ಕಿರುಕುಳ ತಡೆಗಟ್ಟುವ ಸಮಿತಿಯನ್ನು ರಚಿಸುವ ಕ್ರಿಯಾ ಯೋಜನೆಯನ್ನು ರೂಪಿಸಲು ಅಥವಾ ಅದನ್ನು ರಚಿಸಲು ಯಾಕೆ ಸಾಧ್ಯವಾವುದಿಲ್ಲ ಎಂಬ ಕಾರಣಗಳನ್ನು ನೀಡಲು ಕೆಎಫ್‌ಸಿಸಿಗೆ ಸೆಪ್ಟೆಂಬರ್ 16 ರಂದು 15 ದಿನಗಳ ಗಡುವನ್ನು ನೀಡಿದ್ದರು.
ಇದನ್ನೂ ಓದಿ: ಗಾಜಾ | ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ಕನಿಷ್ಠ 21 ಜನರು ಸಾವು
ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ, ಮಹಿಳಾ ಆಯೋಗವು ಸೆಪ್ಟೆಂಬರ್ 18 ರಂದು ಕೆಎಫ್‌ಸಿಸಿಗೆ ಪತ್ರವನ್ನು ಕಳುಹಿಸಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ, ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ವಿವರವಾದ ಮಾಹಿತಿಯನ್ನು ಕೋರಿದೆ.
ಕೇರಳದಲ್ಲಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಪ್ರಚಲಿತದಲ್ಲಿರುವ ಅಸಹನೀಯ ಪರಿಸ್ಥಿತಿಗಳು ಮತ್ತು ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಐಸಿ ಸ್ಥಾಪನೆಗೆ ಆಯೋಗವು ಪ್ರಸ್ತಾಪಿಸಿತ್ತು. ಕೆಲಸದ ಸ್ಥಳಗಳಲ್ಲಿ IC ಗಳ ರಚನೆ ಮಾಡುವುದು PoSH ಕಾಯಿದೆಯ ಪ್ರಕಾರ ಕಡ್ಡಾಯವಾಗಿದೆ.
ಕೆಎಫ್‌ಸಿಸಿ 15 ದಿನಗಳ ವಿಸ್ತರಣೆಯನ್ನು ಕೇಳಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದ್ದು, ಇದರ ನಂತರ ಆಯೋಗವು ತನ್ನ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತದೆ. ಈ ನಡುವೆ ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್ ಅವರು ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೇಮಾ ಸಮಿತಿಯಂತಹ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಾಜಿ ಶಾಸಕ ಮೊಹಿಯುದ್ದೀನ್ ಬಾವಾರ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ನಾಪತ್ತೆ!
ಕರ್ನಾಟಕ ಸರ್ಕಾರ ಹೇಮಾ ಮಾದರಿ ಸಮಿತಿ ಸ್ಥಾಪಿಸಲು ನಿರ್ಧರಿಸಿದರೆ ಕೆಎಫ್‌ಸಿಸಿ ಅದನ್ನು ಸ್ವಾಗತಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಅದೇ ದಿನ ಅವರು ನೀಡಿದ್ದ ಮತ್ತೊಂದು ಸಂದರ್ಶನದಲ್ಲಿ, ಅಂತಹ ಸಮಿತಿಯ ರಚನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು, ಕೆಎಫ್‌ಸಿಸಿ ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರನ್ನು ಪರಿಹರಿಸುತ್ತಿರುವಾಗಲೆ ಹೆಚ್ಚುವರಿ ಸಮಿತಿಯ ಅಗತ್ಯವನ್ನು ಪ್ರಶ್ನಿಸಿದ್ದಾರೆ.
ಕೆಎಸ್‌ಸಿಸಿ ಕಾಲಾವಕಾಶ ಕೇಳಿರುವ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ಅವರು ಸಮಯಾವಕಾಶ ಕೇಳಿದ್ದು, ನಾವು ಅದಕ್ಕೆ ‘ಓಕೆ’ ಎಂದು ಹೇಳಿದ್ದೇವೆ. ನಾವು ಕೇಳಿರುವ ಪ್ರತಿಯೊಂದು ಅಂಶಗಳನ್ನು ಉಲ್ಲೇಖಿಸಿ ಅವರು ಉತ್ತರಿಸಬೇಕಾಗಿದೆ ಎಂದು ಹೇಳಿದರು.
“ಮೊದಲನೆಯದಾಗ ಕನ್ನಡ ಚಿತ್ರರಂಗದಲ್ಲಿ PoSH ಸಮಿತಿಯೆ ಇಲ್ಲ. ಅಂತಹ ಯಾವುದೆ ನಿಯಮಗಳನ್ನ ಮಾಡಿಕೊಂಡೆ ಇಲ್ಲ. ಅವರಲ್ಲೆ ಬಹಳ ವಿರೋಧಗಳು ಇವೆ. ಇಂತಹ ಸಮಯದಲ್ಲಿ ನಾವು ಸ್ವಲ್ಪ ಕಾಲಾವಕಾಶ ನೀಡಬೇಕಾಗುತ್ತದೆ. ಅದರಲ್ಲಿ ತಪ್ಪೇನಿಲ್ಲ. ನಾವು ಕೇವಲ PoSH ಸಮಿತಿ ರಚನೆ ಬಗ್ಗೆ ಮಾತ್ರ ಕೇಳಿಲ್ಲ. ಇನ್ನಿತರ ಮುಖ್ಯ ವಿಚಾರಗಳನ್ನು ಕೂಡಾ ನಾವು ಉಲ್ಲೇಖಿಸಿದ್ದೇವೆ. ಅದಕ್ಕೆಲ್ಲಾ ಅವರು ಉತ್ತರಿಸಬೇಕಾಗುತ್ತದೆ” ಎಂದು ನಾಗಲಕ್ಷ್ಮಿ ಅವರು ನಾನುಗೌರಿ.ಕಾಂ ಜೊತೆಗೆ ಹೇಳಿದರು.


