ಜಾತಿ ಆಧಾರಿತ ತಾರತಮ್ಯ ಆರೋಪಿಸಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಪ್ಪಕುಡಿ ಗ್ರಾಮ ಪಂಚಾಯತ್‌ನ ಡಿಎಂಕೆ ಬೆಂಬಲಿತ ಅಧ್ಯಕ್ಷೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಎರಡು ವಾರಗಳಲ್ಲಿ ತಮಿಳುನಾಡಿನ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಜಾತಿ ತಾರತಮ್ಯ ಆರೋಪ ಮಾಡಿರುವ ಬಗ್ಗೆ ಸುದ್ದಿಯಾಗಿರುವ ಎರಡನೇ ಪ್ರಕರಣ ಇದಾಗಿದೆ.
ಪಪ್ಪಕುಡಿ ಪಂಚಾಯತ್‌ನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಅಧ್ಯಕ್ಷೆ ಪೂಂಗೊಥೈ ಶಶಿಕುಮಾರ್ ಅವರು ಇತ್ತೀಚೆಗೆ ತಿರುನಲ್ವೇಲಿ ಜಿಲ್ಲಾಧಿಕಾರಿ ಡಾ. ಕೆಪಿ ಕಾರ್ತಿಕೇಯನ್ ಮತ್ತು ಡಿಎಂಕೆ ನಾಯಕರಿಗೆ ತನ್ನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅತಿ ಹಿಂದುಳಿದ ವರ್ಗದವರಾದ ಪಂಚಾಯತ್ ಉಪಾಧ್ಯಕ್ಷರು ಜಾತಿ ಆಧಾರಿತ ತಾರತಮ್ಯ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.
ಪೂಂಗೊಥೈ ಶಶಿಕುಮಾರ್ ಅವರು ಜಾತಿ ತಾರತಮ್ಯ ಆರೋಪಿಸಿ ಎರಡು ವರ್ಷಗಳ ಹಿಂದೆ ತಮ್ಮ ಹುದ್ದೆಯನ್ನು ತ್ಯಜಿಸಲು ಮುಂದಾಗಿದ್ದರು. ಅಂದಿನ ಕಲೆಕ್ಟರ್ ವಿ ವಿಷ್ಣು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ, ಡಿಎಂಕೆ ಪಕ್ಷದ ನಾಯಕತ್ವವು ಪೂಂಗೊಥೈ ಅವರ ಮನವೊಲಿಸಿ ಮುಂದುವರೆಯಲು ಹೇಳಿತ್ತು. ಆದರೆ, ಈಗ ದೌರ್ಜನ್ಯ ಹೆಚ್ಚಾಗಿರುವ ಕಾರಣ ಪೂಂಗೊಥೈ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
“ಪಂಚಾಯತ್ ಅಧ್ಯಕ್ಷೆ ಪೂಂಗೊಥೈ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅದರಲ್ಲಿ, ಅಧ್ಯಕ್ಷರು, ಅವರ ಪತಿ ಮತ್ತು ಉಪಾಧ್ಯಕ್ಷರ ನಡುವಿನ ಜಗಳದ ಆರೋಪಗಳಿವೆ. ವಿವರವಾದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಪೂರ್ಣಗೊಂಡ ಬಳಿಕವಷ್ಟೇ ಅವರ ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯ” ಎಂದು ಜಿಲ್ಲಾಧಿಕಾರಿ ಡಾ. ಕೆಪಿ ಕಾರ್ತಿಕೇಯನ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಾವು ಪೂಂಗೊಥೈಯನ್ನು ಸಂಪರ್ಕಿಸಿದ್ದು, ಅವರ ಪತಿ ಶಶಿಕುಮಾರ್ ಕರೆ ಸ್ವೀಕರಿಸಿ “ಆಕೆ ಖಿನ್ನತೆಗೆ ಒಳಗಾಗಿದ್ದಾಳೆ. ಮಾತನಾಡುವ ಸ್ಥಿತಿಯಲ್ಲಿ ಇಲ್ಲ” ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
“ಪಂಚಾಯತ್ ಉಪಾಧ್ಯಕ್ಷ ಹಾಗೂ ಡಿಎಂಕೆ ಯೂನಿಯನ್ ಕಾರ್ಯದರ್ಶಿ ಮರಿವಣ್ಣಮುತ್ತು ಅವರು ಜಾತಿಯ ಕಾರಣಕ್ಕಾಗಿ ಪೂಂಗೊಥೈ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಆಕೆಗೆ ಕಚೇರಿಯಲ್ಲಿ ಕೂರಲು ಸರಿಯಾದ ಕುರ್ಚಿ, ಮೇಜು ಕೂಡ ನೀಡಿಲ್ಲ. ಇತ್ತೀಚೆಗೆ ಮರಿವಣ್ಣಮುತ್ತು ಅವರ ಬೆಂಬಲಿಗರೊಬ್ಬರು ಪಂಚಾಯತ್ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದರು. ನಮ್ಮ ಪಕ್ಷದ ಅಧ್ಯಕ್ಷ ಎಂಕೆ ಸ್ಟಾಲಿನ್, ಸಂಸದೆ ಕನಿಮೊಳಿ ಮತ್ತು ಪಕ್ಷದ ಜಂಟಿ ಸಂಘಟನಾ ಕಾರ್ಯದರ್ಶಿ ಅನ್ಬಗಂ ಕಲೈ ಅವರ ಬಳಿ ನಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ” ಎಂದು ಶಶಿಕುಮಾರ್ ವಿವರಿಸಿದ್ದಾರೆ ಎಂದು ವರದಿ ಹೇಳಿದೆ.
ಆದರೆ, ಎಲ್ಲಾ ಆರೋಪಗಳನ್ನು ಪಂಚಾಯತ್ ಉಪಾಧ್ಯಕ್ಷ ಮರಿವಣ್ಣಮುತ್ತು ನಿರಾಕರಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಅವರು “ನಾನು ಕಳೆದ 25 ವರ್ಷಕ್ಕಿಂತ ಹೆಚ್ಚು ಕಾಲ ಡಿಎಂಕೆಯ ಯೂನಿಯನ್ ಕಾರ್ಯದರ್ಶಿಯಾಗಿದ್ದೇನೆ ಮತ್ತು ಎರಡು ಬಾರಿ ಪಪ್ಪಕುಡಿ ಪಂಚಾಯತ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಸಾಮಾಜಿಕ ನ್ಯಾಯದ ತತ್ವವನ್ನು ಅನುಸರಿಸುತ್ತೇನೆ. ಪೂಂಗೊಥೈ ಅಥವಾ ಯಾರನ್ನೂ ಅವರ ಜಾತಿಯ ಆಧಾರದ ಮೇಲೆ ಕೆಟ್ಟದಾಗಿ ನಡೆಸಿಕೊಂಡಿಲ್ಲ” ಎಂದಿದ್ದಾರೆ.
“ಕೌನ್ಸಿಲರ್‌ಗಳು ಯಾವುದೇ ಆರ್ಥಿಕ ಪ್ರತಿಫಲವನ್ನು ನಿರೀಕ್ಷಿಸದೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಆದರೆ, ಅವರ ಪತಿ ಅವರ ಅಧಿಕೃತ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೆಲವು ಕೈಗಾರಿಕೆಗಳಿಂದ ಹಣಕ್ಕಾಗಿಯೂ ಬೇಡಿಕೆ ಇಟ್ಟಿದ್ದರು. ನಾನು ಅವರ ಕ್ರಮವನ್ನು ವಿರೋಧಿಸಿದ್ದರಿಂದ ಅವರು ಈಗ ನನ್ನ ವಿರುದ್ಧ ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ” ಎಂದು ಮರಿವಣ್ಣಮುತ್ತು ಹೇಳಿದ್ದಾರೆ.
ಎರಡು ವಾರದೊಳಗೆ ಎರಡು ಪ್ರಕರಣ :
ಕಳೆದ ಎರಡು ವಾರಗಳಲ್ಲಿ ತಮಿಳುನಾಡಿ ಪಂಚಾಯತ್ ಅಧ್ಯಕ್ಷರೊಬ್ಬರು ಜಾತಿ ದೌರ್ಜನ್ಯ ಆರೋಪದ ಮಾಡಿದ ಎರಡನೇ ಪ್ರಕರಣ ಇದಾಗಿದೆ.
ಅಕ್ಟೋಬರ್ 3ರಂದು ವಿಲ್ಲುಪುರಂ ಜಿಲ್ಲೆ ಗಿಂಗೀ ತಾಲೂಕಿನ ಅಣಂಗೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತಾ ಅವರು, ಅದೇ ಗ್ರಾ.ಪಂ ಉಪಾಧ್ಯಕ್ಷೆ ಚಿತ್ರಾ ಗುಣಶೇಖರನ್ ಮತ್ತು ಆಕೆಯ ಪತಿ ಸ್ಥಳೀಯ ಡಿಎಂಕೆ ಶಾಖಾ ಕಾರ್ಯದರ್ಶಿ ಗುಣಶೇಖರನ್ ಅವರ ವಿರುದ್ದ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳದ ಆರೋಪ ಮಾಡಿದ್ದರು.
ಆ ಕುರಿತ ವರದಿ ಇಲ್ಲಿದೆ- ತಮಿಳುನಾಡು : ಜಾತಿ ತಾರತಮ್ಯ ಪ್ರತಿಭಟಿಸಿದ ಬುಡಕಟ್ಟು ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು


