ಹರಿಯಾಣ ವಿಧಾನಸಭೆಗೆ ಹೊಸದಾಗಿ ಚುನಾಯಿತವಾದ 90 ಸದಸ್ಯರ ಪೈಕಿ 86 ಶಾಸಕರು (96%) ಕೋಟ್ಯಾಧಿಪತಿಗಳಾಗಿದ್ದು, 12 (13%) ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆ ಮಾಡಿದೆ. ಕೋಟ್ಯಾಧಿಪತಿ ಶಾಸಕರ ಸಂಖ್ಯೆ ಏರಿಕೆಯಾಗಿದ್ದು, 2019ರ ಚುನಾವಣೆಯಲ್ಲಿ 93% ಕೋಟ್ಯಾಧಿಪತಿ ಶಾಸಕರಿದ್ದರು ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
90 ಶಾಸಕರ ಪೈಕಿ 44%ದಷ್ಟು ಮಂದಿ 10 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ವರದಿ ಹೇಳಿದೆ. ಮತ್ತೊಂದೆಡೆ 2.2%ರಷ್ಟು ಶಾಸಕರು ಮಾತ್ರ 20 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ಅಂಕಿಅಂಶಗಳು ಹೇಳಿದೆ.
ಪ್ರತಿ ವಿಜೇತ ಅಭ್ಯರ್ಥಿಯ ಸರಾಸರಿ ಆಸ್ತಿಯು 24.97 ಕೋಟಿ ರೂಪಾಯಿಗಳಷ್ಟಿದ್ದು, ಇದು 2019 ರಲ್ಲಿ 18.29 ಕೋಟಿ ರೂಪಾಯಿಗಳಿತ್ತು ಎಂದು ವರದಿ ಉಲ್ಲೇಖಿಸಿದೆ.
ಪಕ್ಷವಾರು, 96% ಬಿಜೆಪಿ ಶಾಸಕರು, 95% ಕಾಂಗ್ರೆಸ್ ಶಾಸಕರು ಮತ್ತು 100% ಐಎನ್‌ಎಲ್‌ಡಿ ಶಾಸಕರು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ. ಜೊತೆಗೆ ಒಬ್ಬ ಪಕ್ಷೇತರ ಶಾಸಕ 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂಓದಿ: ಗ್ರೇಟ್ ನಿಕೋಬಾರ್ ಯೋಜನೆ ನಿಲ್ಲಿಸಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಗ್ರಹ
ನೂತನ ಹರಿಯಾಣ ವಿಧಾನಸಭೆಯಲ್ಲಿ ಹಿಸಾರ್‌ನ ಸ್ವತಂತ್ರ ಶಾಸಕಿ ಸಾವಿತ್ರಿ ಜಿಂದಾಲ್ ಒಟ್ಟು 270 ಕೋಟಿ ರೂಪಾಯಿ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬಿಜೆಪಿಯ ಶಕ್ತಿ ರಾಣಿ ಶರ್ಮಾ ಮತ್ತು ಶ್ರುತಿ ಚೌಧರಿ ಕ್ರಮವಾಗಿ 145 ಕೋಟಿ ಮತ್ತು 134 ಕೋಟಿ ರೂ. ಆಸ್ತಿಗಳನ್ನು ಹೊಂದಿದ್ದಾರೆ ಎಂದು ಎಡಿಆರ್ ವರದಿ ಹೇಳಿದೆ.
2024 ರಲ್ಲಿ ಒಟ್ಟು 30 ಶಾಸಕರು ಮರು ಆಯ್ಕೆಯಾಗಿದ್ದಾರೆ, ಅವರ ಸರಾಸರಿ ಆಸ್ತಿಯು 2019 ರಿಂದ 2024ರ ವೇಳೆಗೆ 59% ದಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಈ 30 ಶಾಸಕರ ಸರಾಸರಿ ಆಸ್ತಿಯು 9.08 ಕೋಟಿಯಿಂದ 14.46 ಕೋಟಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ವಿಜೇತ ಅಭ್ಯರ್ಥಿಗಳ ಪೈಕಿ 12 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಆರು ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದು, ಒಬ್ಬ ಆರೋಪಿ ಕೊಲೆ ಯತ್ನದ ಆರೋಪಿ ಎಂದು ಅಂಕಿಅಂಶಗಳು ಹೇಳಿವೆ. 2019ರಲ್ಲಿ ಏಳು ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿದ್ದವು.
ಪಕ್ಷವಾರು, 19% ಕಾಂಗ್ರೆಸ್ ಶಾಸಕರು, 6% ಬಿಜೆಪಿ ಶಾಸಕರು ಮತ್ತು 67% ಪಕ್ಷೇತರ ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇವೆ ಎಂದು ಘೋಷಿಸಿದ್ದಾರೆ.
ಇದನ್ನೂಓದಿ: ಬಾಲ್ಯವಿವಾಹ | 11 ಲಕ್ಷ ಮಕ್ಕಳನ್ನು ಗುರುತಿಸಿದ ಮಕ್ಕಳ ಹಕ್ಕುಗಳ ಆಯೋಗ
ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, 68% ವಿಜೇತ ಅಭ್ಯರ್ಥಿಗಳು ಪದವೀಧರರು ಅಥವಾ ಉನ್ನತ ಪದವಿಗಳನ್ನು ಹೊಂದಿದ್ದಾರೆ. ಆದರೆ 29% ದಷ್ಟು ಶಾಸಕರು 8 ನೇ ತರಗತಿಯಿಂದ 12 ನೇ ತರಗತಿಯವರೆಗೆ ಮಾತ್ರ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಹರಿಯಾಣದ ಹೊಸ ಸದನವು 14% ಮಹಿಳಾ ಶಾಸಕರನ್ನು ಹೊಂದಿದೆ. ಇದು 2019ಕ್ಕೆ ಹೋಲಿಸಿದರೆ 10% ಹೆಚ್ಚಳವಾಗಿದೆ. ಅದಾಗ್ಯೂ, ಈ ಶಾಸಕರಲ್ಲಿ 66% ಶಾಸಕರು 51 ರಿಂದ 80 ವರ್ಷ ವಯಸ್ಸಿನವರಾಗಿದ್ದಾರೆ ಎಂದು ವರದಿ ಹೇಳಿದೆ.
ಹರಿಯಾಣದ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಆಡಳಿತ ವಿರೋಧಿ ಅಲೆಯ ಮಧ್ಯೆ ಕೂಡಾ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಗಿಟ್ಟಿದೆ.
ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 37 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಐಎನ್‌ಎಲ್‌ಡಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಜೆಜೆಪಿ ಮತ್ತು ಎಎಪಿಯಂತಹ ಪಕ್ಷಗಳು ಖಾತೆ ತೆರೆಯುವಲ್ಲಿ ವಿಫಲವಾಗಿವೆ.
ವಿಡಿಯೊ ನೋಡಿ: ಗಾಂಧೀಜಿಯವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ


