ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರನ್ನು ಪ್ರತಿನಿಧಿಸುವ ಜಪಾನಿನ ಸಂಘಟನೆಯಾದ ‘ನಿಹಾನ್ ಹಿಡಾಂಕ್ಯೊ’ಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ನೊಬೆಲ್ ಸಮಿತಿ “ನಾರ್ವೇಜಿಯನ್ ನೊಬೆಲ್ ಸಮಿತಿಯು 2024ರ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು ಜಪಾನಿನ ಸಂಸ್ಥೆ ‘ನಿಹಾನ್ ಹಿಡಾಂಕ್ಯೊ’ಗೆ ನೀಡಲು ನಿರ್ಧರಿಸಿದೆ. ಹಿರೋಷಿಮಾ ಮತ್ತು ನಾಗಾಸಾಕಿಯ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರ ಈ ತಳಮಟ್ಟದ ಚಳವಳಿಯನ್ನು ‘ಹಿಬಾಕುಶಾ’ ಎಂದೂ ಕರೆಯಲಾಗುತ್ತದೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸಾಧಿಸುವ ತನ್ನ ಪ್ರಯತ್ನಗಳಿಗಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ಬಳಸಬಾರದು ಎಂದು ಮಾಡುತ್ತಿರುವ ಕಾರ್ಯಗಳಿಗಾಗಿ ನಿಹಾನ್ ಹಿಡಾಂಕ್ಯೊ ಶಾಂತಿ ಬಹುಮಾನವನ್ನು ಪಡೆಯುತ್ತಿದೆ” ಎಂದು ತಿಳಿಸಿದೆ.
BREAKING NEWS
The Norwegian Nobel Committee has decided to award the 2024 #NobelPeacePrize to the Japanese organisation Nihon Hidankyo. This grassroots movement of atomic bomb survivors from Hiroshima and Nagasaki, also known as Hibakusha, is receiving the peace prize for its… pic.twitter.com/YVXwnwVBQO— The Nobel Prize (@NobelPrize) October 11, 2024
1956ರಲ್ಲಿ ರೂಪುಗೊಂಡ ‘ನಿಹಾನ್ ಹಿಡಾಂಕ್ಯೊ’ ಜಪಾನ್‌ನಲ್ಲಿ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಸಂಸ್ಥೆಯಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಾನವ ಜಗತ್ತಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ಆಗಸ್ಟ್ 1945ರ ಪರಮಾಣು ದಾಳಿಯಲ್ಲಿ ಬದುಕುಳಿದವರು ತಾವು ಅನುಭವಿಸಿದ ವಿನಾಶದ ವೈಯಕ್ತಿಕ ಕಥೆಗಳನ್ನು ಹಂಚಿಕೊಳ್ಳುವ ಮೂಲಕ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪ್ರಬಲವಾಗಿ ವಾದಿಸುತ್ತಾರೆ. ಅಂತಾರಾಷ್ಟ್ರೀಯ ‘ಪರಮಾಣು ನಿಷೇಧ’ ವನ್ನು ರೂಪಿಸಲು ಹಿಬಾಕುಶಾ ನಿಹಾನ್ ಹಿಡಾಂಕ್ಯೊ ಅಥವಾ ಹಿಬಾಕುಶಾ ಕೆಲಸ ಮಾಡುತ್ತಿದೆ.
ಇದನ್ನೂ ಓದಿ : ಬೈರುತ್ ಮೇಲೆ ಮುಂದುವರಿದ ಇಸ್ರೇಲ್ ವೈಮಾನಿಕ ದಾಳಿ; ಕನಿಷ್ಠ 22 ಮಂದಿ ಸಾವು, ಯುಎನ್ ಶಾಂತಿಪಾಲಕರ ಮೇಲೆ ಗುಂಡು!


