ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 19 ಪ್ರಯಾಣಿಕರು ಗಾಯಗೊಂಡಿದ್ದಾರೆ.
ನಿನ್ನೆ(ಅ.11) ರಾತ್ರಿ 8:30ರ ಸುಮಾರಿಗೆ ಚೆನ್ನೈ-ಗುಡೂರು ವಿಭಾಗದ ಪೊನ್ನೇರಿ ಮತ್ತು ಕವರೈಪ್ಪೆಟ್ಟೈ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಪ್ಯಾಸೆಂಜರ್ ರೈಲಿನ 12 ರಿಂದ 13 ಬೋಗಿಗಳು ಹಳಿ ತಪ್ಪಿವೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಗಂಟೆಗೆ 75 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು, ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ತಪ್ಪಾಗಿ ಪ್ರವೇಶಿಸಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೂಡ್ಸ್ ರೈಲಿನಲ್ಲಿದ್ದ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದೆ.
ವಿಷಯ ತಿಳಿದು ದಕ್ಷಿಣ ರೈಲ್ವೆ ಮತ್ತು ಸ್ಥಳೀಯ ಅಧಿಕಾರಿಗಳ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಘಟನೆಯಲ್ಲಿ 14 ಮಂದಿಗೆ ಹೆಚ್ಚಿನ ಗಾಯಗಳಾಗಿವೆ. ಅವರನ್ನು ಸ್ಥಳೀಯ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸರ್ಕಾರವು ತ್ವರಿತ ಪರಿಹಾರ ಮತ್ತು ರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿದೆ. ಗಾಯಗೊಂಡ ವ್ಯಕ್ತಿಗಳನ್ನು ತಕ್ಷಣವೇ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ಆಹಾರ ಮತ್ತು ಪರ್ಯಾಯ ಪ್ರಯಾಣ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲು ತಂಡವನ್ನು ರಚಿಸಲಾಗಿದೆ” ಎಂದು ನಿನ್ನೆ ರಾತ್ರಿಯೇ ಸಿಎಂ ತಿಳಿಸಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು , “ರೈಲು ಅಪಘಾತದ ಕುರಿತು ಮಾಹಿತಿ ದೊರೆತ ಕೂಡಲೇ ಸಚಿವ ಎಸ್.ಎಂ ನಾಸರ್ ಜೊತೆ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳಿಗೆ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದೇನೆ. ಅಪಘಾತಗೊಂಡ ರೈಲು ಬೋಗಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳ ನಿರತವಾಗಿದೆ. ನಾನು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದೇನೆ” ಎಂದು ಮಾಹಿತಿ ನೀಡಿದ್ದರು.
திருவள்ளூர் மாவட்டம் கவரைப்பேட்டையில் இரயில் விபத்து நடந்ததை அறிந்து அதிர்ச்சியடைந்தேன்.
தகவல் கிடைக்கப்பெற்றவுடன், மாண்புமிகு அமைச்சர் @Avadi_Nasar அவர்களையும் மற்றும் மாவட்ட ஆட்சியர் உள்ளிட்ட அரசு அதிகாரிகளையும் விபத்து நடந்த இடத்திற்குச் செல்ல உத்தரவிட்டேன்.
மீட்பு மற்றும்…
— M.K.Stalin (@mkstalin) October 11, 2024
ಘಟನೆಯ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಮಂಡಳಿ, “ರೈಲಿನ ಲೋಕೋ ಪೈಲಟ್ ಸಿಬ್ಬಂದಿ ಮತ್ತು ಗಾರ್ಡ್ ಸುರಕ್ಷಿತವಾಗಿದ್ದಾರೆ. ಸುಮಾರು 12-13 ಬೋಗಿಗಳು ಹಳಿ ತಪ್ಪಿವೆ. ಇಲ್ಲಿಯವರೆಗೆ, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಆದರೆ, ಕೆಲವರಿಗೆ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ತಿಳಿಸಿದೆ.
ರೈಲು ಅಪಘಾತದ ಹಿನ್ನೆಲೆ, ಆ ಮಾರ್ಗಗವಾಗಿ ಸಾಗುವ ಎಂಟು ರೈಲುಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ ಮತ್ತು ಎರಡನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ : ವಿದ್ಯಾರ್ಥಿಯ ಅನಿರ್ದಿಷ್ಟಾವಧಿ ಉಚ್ಚಾಟನೆ ಶೈಕ್ಷಣಿಕ ಸಾವಿಗೆ ಕಾರಣ: ಬಾಂಬೆ ಹೈಕೋರ್ಟ್


