ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ, ಮಾನವಹಕ್ಕುಗಳ ಹೋರಾಟಗಾರ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರು ಹೈದರಾಬಾದ್‌ನ ನಿಜಾಮ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆ(ನಿಮ್ಸ್)ಯಲ್ಲಿ ಶನಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಅವರು ರಾತ್ರಿ 8.30 ಕ್ಕೆ ನಿಧನರಾದರು ಎಂದು ಆಪ್ತರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
57 ವರ್ಷದ ಸಾಯಿಬಾಬಾ ಅವರು ಅನಾರೋಗ್ಯದ ಕಾರಣ 10 ದಿನಗಳ ಹಿಂದೆ ನಿಮ್ಸ್‌ಗೆ ದಾಖಲಾಗಿದ್ದರು. ಪಿತ್ತಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭೀಮಾ ಕೊರೆಗಾವ್ ಪ್ರಕರಣದಲ್ಲಿ ಮಾವೋವಾದಿಗಳೊಂದಿಗೆ ನಂಟಿದೆ ಎಂದು ಆರೋಪಿಸಿ ಬಂಧನಕ್ಕೆ ಒಳಗಾಗಿದ್ದ ಅವರನ್ನು ಏಳು ತಿಂಗಳ ಹಿಂದೆ ಪ್ರಕರಣದಿಂದ ಖುಲಾಸೆ ಮಾಡಲಾಗಿತ್ತು.
ವಿಕಲಚೇತನರಾಗಿದ್ದ ಮತ್ತು ಗಾಲಿಕುರ್ಚಿಯನ್ನು ಬಳಸುತ್ತಿದ್ದ ಸಾಯಿಬಾಬಾ ಅವರನ್ನು 2014ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಬಂಧಿಸಲಾಗಿತ್ತು. ಈ ಪ್ರಕಣದಲ್ಲಿ ಅವರ ಮೇಲೆ ಮಾವೋವಾದಿ ಸಂಪರ್ಕದ ಆರೋಪ ಹೊರಿಸಲಾಗಿತ್ತು. ಪ್ರಕರಣದಲ್ಲಿ ಅವರು ಏಳು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಜೈಲಿನಲ್ಲಿ ಅವರಿಗೆ ವೈದ್ಯಕೀಯ ಸೇವೆಯನ್ನು ನಿರಾಕರಿಸಲಾಗಿತ್ತು.
ಇದನ್ನೂಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಬಿಜೆಪಿ ಬೆಂಬಲಿತ ಸಂಘಟನೆಗಳಿಂದ ಸನ್ಮಾನ
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ತನ್ನನ್ನು ಮೊದಲಿಗೆ ಅಪಹರಿಸಲಾಯಿತು ನಂತರ ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ. ಈ ವೇಳೆ ಪೊಲೀಸರು ತನ್ನನ್ನು ತಪ್ಪಾಗಿ ನಿರ್ವಹಿಸಿದ್ದರಿಂದ ನರಮಂಡಲಕ್ಕೆ ಹಾನಿಯಾಗಿತ್ತು ಮತ್ತು ಜೈಲಿನಲ್ಲಿದ್ದ ವೇಳೆ ಹೃದಯದ ಸಮಸ್ಯೆ ಪ್ರಾರಂಭವಾಗಿತ್ತು ಎಂದು ಹೇಳಿದ್ದಾರೆ. ಜೈಲಿನಲ್ಲಿ ದೀರ್ಘಕಾಲದವರೆಗೆ ಆಹಾರ ಸೇವಿಸದ ಕಾರಣ ಪಿತ್ತಕೋಶದಲ್ಲಿ ಕಲ್ಲುಗಳು ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದ್ದರು.
ಸಾಯಿಬಾಬಾ ಅವರನ್ನು ಮಾರ್ಚ್ 7, 2017 ರಂದು ಸೆಷನ್ಸ್ ನ್ಯಾಯಾಲಯವು ತಪ್ಪಿತಸ್ಥ ಎಂದು ಘೋಷಿಸಿದಾಗಿನಿಂದ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್ ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿತು. ನಂತರ ಅವರನ್ನು ಮಾರ್ಚ್ 7 ರಂದು ನಾಗ್ಪುರ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಮಾನವಹಕ್ಕುಗಳ ಹೋರಾಟಗಾರ ಆಗಿದ್ದ ಸಾಯಿಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಶಂಕಿತ ಮಾವೋವಾದಿ ಸಂಪರ್ಕಕ್ಕಾಗಿ ಮಹಾರಾಷ್ಟ್ರ ಪೊಲೀಸರು ಅವರನ್ನು ಬಂಧಿಸಿದ ನಂತರ 2014 ರಲ್ಲಿ ಅಮಾನತುಗೊಳಿಸಲಾಗಿತ್ತು.
ವಿಡಿಯೊ ನೋಡಿ: ‘ತೇಜಸ್ವಿ ಸೂರ್ಯ ಲೋಕಸಭೆಯಲ್ಲಿ ಇರುವುದರಿಂದ ಯಾವುದೇ ಉಪಯೋಗವಿಲ್ಲ’ : ವೀರಸಂಗಯ್ಯ, ರೈತ ಮುಖಂಡರು


