ತಮಿಳುನಾಡಿನ ಶ್ರೀಪೆರಂಬದೂರಿನ ಸ್ಯಾಮ್‌ಸಂಗ್ ಘಟಕದಲ್ಲಿ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ತಮಿಳುನಾಡು ಸರ್ಕಾರ ಸಮಸ್ಯೆ ಪರಿಹರಿಸಲು ಏಕೆ ವಿಳಂಬ ಮಾಡುತ್ತಿದೆ? ಎಂದು ಕಾರ್ಮಿಕ ಕಾನೂನು ಮತ್ತು ಕೈಗಾರಿಕಾ ವಿವಾದಗಳ ತಜ್ಞ ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಕೆ.ಚಂದ್ರು ಪ್ರಶ್ನಿಸಿದ್ದಾರೆ.
ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (ಎಸ್‌ಐಡಬ್ಲ್ಯುಯು) ನೋಂದಣಿಯು ಸೆಪ್ಟೆಂಬರ್ 9ರಿಂದ ಪ್ರತಿಭಟನೆ ನಡೆಸುತ್ತಿರುವ ನೂರಾರು ಸ್ಯಾಮ್‌ಸಂಗ್ ಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ. ಅವರು ಕಳೆದ ಜುಲೈ 25 ರಂದು ರಾಜ್ಯ ಕಾರ್ಮಿಕ ಇಲಾಖೆಗೆ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ, ಇಲಾಖೆಗೆ ಅರ್ಜಿ ಕಳುಹಿಸಿದ 45 ದಿನಗಳಲ್ಲಿ ಒಕ್ಕೂಟವನ್ನು ನೋಂದಾಯಿಸಬೇಕು. ಆದರೆ, ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಕಾರ್ಮಿಕರನ್ನು ಕೆರಳಿಸಿದೆ.
ಪ್ರಸ್ತಾವಿತ ಕಾರ್ಮಿಕ ಒಕ್ಕೂಟದ ಹೆಸರಿನಲ್ಲಿ ‘ಸ್ಯಾಮ್‌ಸಂಗ್’ ಎಂದು ಕಂಪನಿಯ ಹೆಸರಿರುವುದು ಮತ್ತು ಕಾರ್ಮಿಕರ ಹೋರಾಟದ ಹಿಂದೆ ಸಿಪಿಐ (ಎಂ) ಬೆಂಬಲಿತ ಕಾರ್ಮಿಕ ಸಂಘಟನೆ ಸಿಐಟಿಯು ಇರುವುದರಿಂದ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗಿದೆ.
“ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುವ ವಿದೇಶಿ ಕಂಪನಿಗಳು ಸಾಮಾನ್ಯವಾಗಿ ಯಾವುದೇ ಕಾರ್ಮಿಕ ಒಕ್ಕೂಟಗಳಿಗೆ ಸರ್ಕಾರ ಅವಕಾಶ ನೀಡಬಾರದು ಎಂಬುವುದು ಮೊಟ್ಟ ಮೊದಲು ಬೇಡಿಕೆಯಾಗಿರುತ್ತದೆ” ಎಂದು ದಿ ನ್ಯೂಸ್ ಮಿನಿಟ್‌ನ ಶಬೀರ್ ಅಹ್ಮದ್ ಅವರೊಂದಿಗಿನ ಸಂದರ್ಶನದಲ್ಲಿ ನ್ಯಾಯಮೂರ್ತಿ ಚಂದ್ರು ಹೇಳಿದ್ದಾರೆ.
“ಸಂವಿಧಾನದ ಪ್ರಕಾರ ಒಕ್ಕೂಟ ಅಥವಾ ಸಂಘವನ್ನು ರಚಿಸುವುದು ಕಾರ್ಮಿಕರ ಮೂಲಭೂತ ಹಕ್ಕು. ಇದು 1965ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಅಂಗೀಕರಿಸಲ್ಪಟ್ಟ ಟ್ರೇಡ್ ಯೂನಿಯನ್‌ಗಳನ್ನು ಒಳಗೊಂಡಿದೆ. ಯಾವುದೇ ಕಡ್ಡಾಯ ಮಾನ್ಯತೆ ಇಲ್ಲದಿದ್ದರೂ, ಒಕ್ಕೂಟದ ನೋಂದಣಿಯನ್ನು ನಿರಾಕರಿಸಲು ಕಾರ್ಮಿಕ ನ್ಯಾಯಾಲಯಕ್ಕೆ ಯಾವುದೇ ವಿವೇಚನಾಧಿಕಾರವಿಲ್ಲ. ಟ್ರೇಡ್ ಯೂನಿಯನ್ಸ್ ಆಕ್ಟ್, 1926 ರ ಅಡಿಯಲ್ಲಿ, ಕಾರ್ಮಿಕರು ಒಟ್ಟು ಉದ್ಯೋಗಿಗಳ 10% ಅನ್ನು ಪ್ರತಿನಿಧಿಸಬೇಕು. ಹಾಗಿದ್ದಲ್ಲಿ, ಕಾರ್ಮಿಕ ಆಯುಕ್ತರು ಒಕ್ಕೂಟದ ಮಾನ್ಯತೆಗೆ ಶಿಫಾರಸು ಮಾಡಬಹುದು. ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಸಮಸ್ಯೆ ಪರಿಹರಿಸಲಾಗದೆ, ಹೂಡಿಕೆಯ ರಹಸ್ಯ ಒಳ ಒಪ್ಪಂದವನ್ನು ಬಹಿರಂಗಪಡಿಸಲಾಗದೆ ಪೊಲೀಸರನ್ನು ಬಳಸಿಕೊಂಡು ಸರ್ಕಾರ ಕಾರ್ಮಿಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ” ಎಂದು ಚಂದ್ರು ತಿಳಿಸಿದ್ದಾರೆ.
“ಕಾರ್ಮಿಕ ಹಕ್ಕುಗಳು ಮತ್ತು ಸಮಸ್ಯೆಗಳ ವಿಷಯಕ್ಕೆ ಬಂದರೆ, ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಜ್ಯ ಮಟ್ಟದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದಿರುವ ಚಂದ್ರು, “ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಗಳು ಸರಿಯಾದ ನೀತಿಗಳನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.
“ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದರು. ಆದರೆ, ಬಳಿಕ ಅವರು ಸಂಪೂರ್ಣ ತಟಸ್ಥತೆಯನ್ನು ಕಾಯ್ದುಕೊಂಡರು. ಪ್ರಸ್ತುತ ಸರ್ಕಾರ ನಾವು ಸಮಸ್ಯೆ ಪರಿಹರಿಸುತ್ತಿದ್ದೇವೆ ಎನ್ನುತ್ತಿದೆ. ಆದರೆ, ಅವರು ಇನ್ನೂ ಕಾರ್ಮಿಕರ ಒಕ್ಕೂಟಕ್ಕೆ ಮಾನ್ಯತೆಯೇ ನೀಡಿಲ್ಲ. ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಕಾರ್ಮಿಕರು ನ್ಯಾಯಾಲಯದ ಮೊರೆ ಹೋಗುತ್ತಿಲ್ಲ ಎಂದು ಚಂದ್ರು ವಿವರಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನೌಕರರಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡಿತ್ತು. ಈ ನಡುವೆ ಅಕ್ಟೋಬರ್ 10ರಂದು ಸಂಜೆ ತಮಿಳುನಾಡು ಪೊಲೀಸರು ಸುಮಾರು 300 ಕಾರ್ಮಿಕರನ್ನು ಬಂಧಿಸಿದ್ದರು. ಕಾರ್ಮಿಕರ ಅಕ್ರಮ ಬಂಧನದ ವಿರುದ್ದ ಸಿಐಟಿಯು ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಕಾರ್ಮಿಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಶ್ರೀಪೆರಂಬದೂರು ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ವಿಶೇಷ ಅರ್ಜಿಯನ್ನೂ ಸಲ್ಲಿಸಿದೆ.
ಸೌಜನ್ಯ : ದಿ ನ್ಯೂಸ್ ಮಿನಿಟ್
ಇದನ್ನೂ ಓದಿ : ಮೂರು ತಿಂಗಳಿನಿಂದ ಬಿಡುಗಡೆಯಾಗದ ಗೌರವಧನ; ಸಂಕಷ್ಟದಲ್ಲಿ ಅಂಗನವಾಡಿ ನೌಕರರು


