ಚುನಾವಣಾ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ‘ಉಚಿತ ಭರವಸೆ’ಗಳನ್ನು ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಹೊಸ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಕೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಸಾಮಾಜ ಕಲ್ಯಾಣ ಯೋಜನೆಗಳಾದ ಉಚಿತ ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ಬಿಲ್‌ಗಳಲ್ಲಿನ ರಿಯಾಯಿತಿ ಸೇರಿದಂತೆ ಕೆಲ ಯೋಜನೆಗಳನ್ನು ‘ಉಚಿತ ಭರವಸೆ’ ಎಂದು ಉಲ್ಲೇಖಿಸಲಾಗಿದೆ.
ಬೆಂಗಳೂರಿನ ನಿವಾಸಿ ಶಶಾಂಕ್ ಜೆ ಶ್ರೀಧರ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
“ಉಚಿತ ಕೊಡುಗೆಗಳ ಅನಿಯಂತ್ರಿತ ಭರವಸೆಯು ಸಾರ್ವಜನಿಕ ಖಜಾನೆಯ ಮೇಲೆ ಊಹಿಸಲಾಗದ ಆರ್ಥಿಕ ಹೊರೆಯನ್ನು ಹೇರುತ್ತದೆ. ಅಲ್ಲದೆ, ಮತಗಳನ್ನು ಭದ್ರಪಡಿಸಿದ ಚುನಾವಣಾ ಪೂರ್ವ ಭರವಸೆಗಳ ಈಡೇರಿಕೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ಕಾರ್ಯವಿಧಾನವಿಲ್ಲ” ಎಂದು ಅರ್ಜಿಯಲ್ಲಿ ಹೇಳಿರುವುದಾಗಿ ಪಿಟಿಐ ತಿಳಿಸಿದೆ.
ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಉಚಿತ ಭರವಸೆ ನೀಡುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಜೊತೆ ಇದನ್ನೂ ನ್ಯಾಯಾಲಯ ಸೇರಿಸಿದೆ.
ಆಗಸ್ಟ್ 2022ರಲ್ಲಿ, ನ್ಯಾಯಾಲಯವು ರಾಜಕೀಯ ಪಕ್ಷಗಳ ಉಚಿತ ಭರವಸೆಗಳ ಮೇಲಿನ ನಿರ್ಬಂಧಗಳನ್ನು ಕೋರಿದ್ದ ಮತ್ತೊಂದು ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ಉಲ್ಲೇಖಿಸಿತ್ತು.
ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ, ನೀತಿ ಆಯೋಗ, ಹಣಕಾಸು ಆಯೋಗ, ಕಾನೂನು ಆಯೋಗ, ಚುನಾವಣಾ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಪ್ರತಿಪಕ್ಷಗಳ ಸದಸ್ಯರನ್ನೊಳಗೊಂಡ ಪರಿಣಿತರ ಸಮಿತಿ ರಚಿಸಿ ಈ ವಿಷಯದ ಕುರಿತು ಸಲಹೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಆ ಸಮಯದಲ್ಲಿ, ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳನ್ನು ನೀಡುವುದರಿಂದ ಆರ್ಥಿಕತೆಗೆ ಹಾನಿಯಾಗುತ್ತದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು.
ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್‌ವಿ ರಮಣ ಅವರು, ಉಚಿತಗಳ ಹೆಸರಿನಲ್ಲಿ ಆರ್ಥಿಕತೆಯನ್ನು ಶುಷ್ಕಗೊಳಿಸಬಾರದು ಎಂದು ಹೇಳಿದ್ದರು. ಸಾಮಾನ್ಯ ನಾಗರಿಕರ ಅಭಿಪ್ರಾಯ ತಿಳಿಯಲು ಸಂಸತ್ ಸಮಿತಿ ರಚಿಸಬೇಕು ಎಂದಿದ್ದರು.
ಇದನ್ನೂ ಓದಿ : ಮಸೀದಿ ಬಳಿ ‘ಜೈ ಶ್ರೀರಾಮ್’ ಘೋಷಣೆ ಕೂಗುವುದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಿಲ್ಲ: ಕರ್ನಾಟಕ ಹೈಕೋರ್ಟ್


