ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶ್ರೀನಗರದ ಎಸ್‌ಕೆಐಸಿಸಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಂದ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಜೊತೆಗೆ ಅವರ ಪಕ್ಷದ ನಾಯಕ ಸುರೀಂದರ್ ಚೌಧರಿ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅವರ ಜೊತೆಗೆ ದಮ್ಹಾಲ್ ಹಂಜಿಪೋರ್‌ನ ಎನ್‌ಸಿ ಪಕ್ಷದ ಶಾಸಕರಾದ ಸಕೀನಾ ಇಟ್ಟೂ, ಮೆಂಧರ್‌ನ ಎನ್‌ಸಿ ಶಾಸಕ ಜಾವೇದ್ ರಾಣಾ, ರಫಿಯಾಬಾದ್‌ನ ಎನ್‌ಸಿ ಶಾಸಕ ಜಾವೇದ್ ದಾರ್ ಮತ್ತು ಚಂಬ್‌ನ ಪಕ್ಷೇತರ ಶಾಸಕ ಸತೀಶ್ ಶರ್ಮಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಮತ್ತು ಕಮ್ಯುನಿಸ್ಟ್ ಪಕ್ಷದ ನಾಯಕರಾದ ಡಿ. ರಾಜಾ ಮತ್ತು ಪ್ರಕಾಶ್ ಕಾರಟ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ಭಾಗವಹಿಸಿದ್ದರು.
"I, #OmarAbdullah.."
Omar Abdullah took oath as the first CM of J&K Union Territory. pic.twitter.com/lewJqcrQVC
— The New Indian Express (@NewIndianXpress) October 16, 2024
ಈ ಮಧ್ಯೆ, ಎನ್‌ಸಿ ಮೈತ್ರಿಕೂಟದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು, ಒಮರ್ ಅವರ ಸಂಪುಟಕ್ಕೆ ಸೇರದಿರಲು ನಿರ್ಧರಿಸಿದೆ. ಬದಲಿಗೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್‌ನ ಮೂಲಗಳು ಸೂಚಿಸಿವೆ.
ಮೂಲಗಳ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಕಾಂಗ್ರೆಸ್‌ಗೆ ಒಂದು ಕ್ಯಾಬಿನೆಟ್ ಸ್ಥಾನವನ್ನು ನೀಡಿತ್ತು, ಆದರೆ ಪಕ್ಷವು ಈ ಏಕೈಕ ಸಚಿವ ಸ್ಥಾನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ, ಇಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿತ್ತು.
ಆದಾಗ್ಯೂ, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ 90 ಸದಸ್ಯರ ಅಸೆಂಬ್ಲಿಗೆ ಮುಖ್ಯಮಂತ್ರಿ ಸೇರಿದಂತೆ ಒಂಬತ್ತು ಸಚಿವರು ಮಾತ್ರ ಪ್ರಮಾಣವಚನ ಸ್ವೀಕರಿಸಬಹುದಾಗಿರುವುದರಿಂದ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಕಾಂಗ್ರೆಸ್‌ಗೆ ಒಂದಕ್ಕಿಂತ ಹೆಚ್ಚು ಕ್ಯಾಬಿನೆಟ್ ಸ್ಥಾನಗಳನ್ನು ವಿಸ್ತರಿಸಲು ಇಷ್ಟವಿರಲಿಲ್ಲ.
90 ಸದಸ್ಯ ಬಲದ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಸ್ಥಾನಗಳನ್ನು ಗಳಿಸಿ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. 2014 ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ ಅನ್ನು ಸಮಾಧಾನಪಡಿಸಲು, ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಕಾಶ್ಮೀರದಲ್ಲಿ ಖಾಲಿ ಇರುವ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ನೀಡಿದೆ.
ಜಮ್ಮು ಕಾಶ್ಮೀರದ ಜನರಿಗೆ ರಾಜ್ಯತ್ವ ಮತ್ತು ಭೂಮಿಯ ಹಕ್ಕುಗಳ ಮರುಸ್ಥಾಪನೆಯು ಸಚಿವ ಸ್ಥಾನಗಳಿಗಿಂತ ಮುಖ್ಯವಾಗಿದೆ ಎಂದು ಜಮ್ಮು ಕಾಶ್ಮೀರದ ಕಾಂಗ್ರೆಸ್ ಮುಖ್ಯಸ್ಥರು ಇತ್ತೀಚೆಗೆ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಸೇರದಿರುವ ಕಾಂಗ್ರೆಸ್ ನಿರ್ಧಾರದ ನಂತರ ಎನ್‌ಸಿ-ಕಾಂಗ್ರೆಸ್ ಮೈತ್ರಿಯೊಳಗಿನ ಭಿನ್ನಾಭಿಪ್ರಾಯದ ಇದೆ ಎಂದು ಊಹಾಪೋಹ ಹರಡಿತ್ತು. ಈ ಬಗ್ಗೆ ಪ್ರತಿಕ್ರಿಯತಿಸಿದ್ದ ಉಮರ್ ಅಬ್ದುಲ್ಲಾ ಮೈತ್ರಿಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ.


